
ತುಮಕೂರಿನ ಫಾರ್ಮ್ ಹೌಸ್‌ನಲ್ಲಿ ಸ್ಫೋಟಕ ಬಳಕೆ ಪ್ರಕರಣದಲ್ಲಿ ಡ್ರೋನ್ ಪ್ರತಾಪ್‌ಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಧುಗಿರಿ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಜೈಲಿನ ಊಟ ಸೇವಿಸಿದ್ದಾರೆ. ಸಿಎಂ ಕಚೇರಿಯಿಂದ ಘಟನೆ ಕುರಿತು ವರದಿ ಕೇಳಲಾಗಿದೆ.
ತುಮಕೂರು (ಡಿ.16): ತುಮಕೂರಿನ ಫಾರ್ಮ್ ಹೌಸ್ ಒಂದರ ನೀರಿನ ಕೊಳದಲ್ಲಿ ಸ್ಪೋಟಕ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್‌ನಿಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮಧುಗಿರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ತುಮಕೂರಿನಲ್ಲಿ ಸೋಡಿಯಂ ಮೆಟಲ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್‌ಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೇ ತಿಂಗಳ 26 ರ ರವರೆಗೆ ನ್ಯಾಯಾಂಗ ಬಂಧನ ಜಾರಿ ಮಾಡಲಾಗಿದ್ದು, ಇದೀಗ ತುಮಕೂರು ಜಿಲ್ಲೆಯ ಮಧುಗಿರಿ ಉಪ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಮಧುಗಿರಿ ತಾಲೂಕಿನ ಉಪಕಾರಾಗೃಹದಲ್ಲಿರುವ ಡ್ರೋನ್ ಪ್ರತಾಪ್ ಮಧ್ಯಾಹ್ನದ ಊಟವನ್ನು ಜೈಲಿನಲ್ಲಿಯೇ ಸೇವಿಸಿದ್ದಾರೆ. ಕಾರಾಗೃಹದ ಮೆನು ಅನುಸಾರ ಮುದ್ದೆ, ಅನ್ನ, ಸಾಂಬಾರ್ ಹಾಗೂ ಬಾಳೆಹಣ್ಣು ತಿಂದಿದ್ದಾರೆ.
ಅದೇ ರೀತಿ ಡ್ರೋನ್ ಪ್ರತಾಪ್ ಸಂಜೆ ಊಟ ಕೂಡ ಸೇವಿಸಿದ್ದಾರೆ. ಆದರೆ, ಕಾರಾಗೃಹದಲ್ಲಿರುವ ಹಿನ್ನೆಲೆಯಲ್ಲಿ ಡ್ರೋನ್ ಪ್ರತಾಪ್‌ಗೆ ಚಡಪಡಿಕೆ ಆರಂಭವಾಗಿದೆ. ಜೊತೆಗೆ, ಈ ಘಟನೆ ಸಂಬಂದ ಸಿಎಂ ಕಚೇರಿಯಿಂದ ವರದಿ ನೀಡುವಂತೆ ಸೂಚನೆ ಬಂದಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದ್ದು, ಸಿಎಂ ಕಚೇರಿ ಅಧಿಕಾರಿಗಳು ಮಧುಗಿರಿ ಸಿಪಿಐ ಕಚೇರಿಗೆ ಆಗಮಿಸಿದ್ದಾರೆ.