Feb 3, 2023, 2:17 PM IST
ರಾಯಚೂರು (ಫೆ.03): ಸರ್ಕಾರ ಪ್ರತಿ ವರ್ಷ ಶಿಕ್ಷಣಕ್ಕಾಗಿ ಕೋಟಿ ಕೋಟಿ ಅನುದಾನ ಮೀಸಲು ಇಡುತ್ತೆ. ಅದರಲ್ಲೂ ಶಾಲೆಗಳ ಅಭಿವೃದ್ಧಿಗಾಗಿ ವಿಶೇಷ ಒತ್ತು ನೀಡುತ್ತೆ. ಇಷ್ಟು ಒತ್ತು ನೀಡಿದ್ರೂ ಇನ್ನೂ ಈ ಜಿಲ್ಲೆಯ ಮಕ್ಕಳು ಮಾತ್ರ ನಿತ್ಯ ಪಡಬಾರದ ಕಷ್ಟ ಪಡುತ್ತಿದ್ದಾರೆ. ಅಷ್ಟಕ್ಕೂ ಏನಿದು ಸ್ಟೋರಿ? ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಆಲ್ಕೋಡ್ ಶಾಲೆಯ ಹೈಸ್ಕೂಲ್ ಮಕ್ಕಳ ಸ್ಥಿತಿ ಅದೋಗತಿ ಆಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಾಲಾ ಮಕ್ಕಳು ಮೂಲಭೂತ ಸೌಕರ್ಯಗಳು ಸಿಗದೇ ನಿತ್ಯ ಪರದಾಡುತ್ತಿದ್ದಾರೆ. ದೇವದುರ್ಗ ತಾಲೂಕಿನ ಆಲ್ಕೋಡ್ ಪ್ರೌಢ ಶಾಲೆಯಲ್ಲಿ 8, 9 ಮತ್ತು 10ನೇ ತರಗತಿ ಸೇರಿದಂತೆ ಒಟ್ಟು 631 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ 9 ರಿಂದ 10 ಕೊಠಡಿಗಳು ಇರಬೇಕು.
ಆದ್ರೆ ಕೇವಲ 5 ಕೊಠಡಿಗಳು ಮಾತ್ರ ಇದ್ದು, ಆ 5 ಕೋಣೆಯಲ್ಲಿ 1 ಆಫೀಸ್ ರೂಂ ಆಗಿದ್ರೆ, ಮತ್ತೊಂದು ರೇಷನ್ ರೂಂ ಆಗಿದೆ. ಇನ್ನುಳಿದ 3 ಕೋಣೆಯಲ್ಲಿ 631 ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಇನ್ನು ಮಕ್ಕಳ ಸಂಖ್ಯೆ ಹೆಚ್ಚಾದಂತೆ ಕೋಣೆಗಳನ್ನ ಮಂಜೂರು ಮಾಡಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಅನುದಾನವೂ ಇದೆ. ಆದ್ರೆ ಶಿಕ್ಷಣ ಇಲಾಖೆಯ ದಿವ್ಯ ನಿರ್ಲಕ್ಷ್ಯ ಹಾಗೂ ಸ್ಥಳಿಯ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಮಕ್ಕಳು ನಿತ್ಯ ನರಕಯಾತನೆ ಅನುಭವಿಸುತ್ತಾ ಪಾಠ ಕೇಳುತ್ತಿದ್ದಾರೆ. ಕೆಲ ಮಕ್ಕಳು ಒಂದು ದಿನ ಶಾಲೆಗೆ ಹಾಜರ್ ಆದ್ರೆ, ಇನ್ನೊಂದು ದಿನ ಶಾಲೆಯಲ್ಲಿ ಕುಳಿತುಕೊಳ್ಳಲು ಜಾಗವಿಲ್ಲದೆ ಕೂಲಿ ಕೆಲಸದ ಮುಖ ಮಾಡುತ್ತಿದ್ದಾರೆ. ವೀಕ್ಷಕರೇ ಇನ್ನೂಂದು ಅಚ್ಚರಿ ಅಂದ್ರೆ ತರಗತಿಯಲ್ಲಿ ರೂಂಗಳು ಇಲ್ಲದೇ ಇಲ್ಲಿನ ಮಕ್ಕಳಿಗೆ ಶಾಲಾ ಆವರಣದಲ್ಲಿನ ಮರದ ಕೆಳಗೆ ಕೂರಿಸಿ ಪಾಠ ಮಾಡಲಾಗುತ್ತಿದೆ.
ಸಾಲಬಾಧೆ: ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ ಯತ್ನ, ಮಹಿಳೆ ಸಾವು, 6 ಮಂದಿ ಚಿಂತಾಜನಕ
ಹೊಸ ಕಟ್ಟಡಗಳು ಮಂಜೂರು ಆಗಬೇಕೆಂದು ಶಾಲೆಯ ಮುಖ್ಯ ಗುರುಗಳು ಸಂಭಂದಿಸಿದವರಿಗೆ ಅದೆಷ್ಟೇ ಬಾರಿ ಪತ್ರ ಬರೆದರೂ ಸಹ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ಯಾರೆ ಅಂತಿಲ್ಲವಂತೆ. ಇತ್ತ ಶಾಲೆಯ ಎಸ್ಡಿಎಂಸಿ ಸದಸ್ಯರು ಮತ್ತು ಅಧ್ಯಕ್ಷರು ಕೂಡ ಮಕ್ಕಳ ಸಮಸ್ಯೆ ಬಗ್ಗೆ ಮೇಲಾಧಿಕಾರಿ ಮತ್ತು ಜನ ಪ್ರತಿನಿಧಿಗಳ ಗಮನಕ್ಕೆ ತಂದ್ರೆ ನೋಡೋಣ ಮಾಡೋಣ ಅನ್ನೋ ಉಡಾಫೆ ಉತ್ತರ ನೀಡ್ತಾ ಇದ್ದಾರಂತೆ. ಒಟ್ಟಿನಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಅಂತ ಸರ್ಕಾರ ಕೋಟಿ ಕೋಟಿ ಖರ್ಚು ಮಾಡುತ್ತಿದೆ. ಆದ್ರೆ ಕಲ್ಯಾಣ ಕರ್ನಾಟಕ ಭಾಗದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಶಾಲೆಯಲ್ಲಿ ಮೂಲಭೂತ ಸೌಲಭ್ಯ ಸಿಗದೇ ಮಕ್ಕಳು ಅತ್ತ ಶಾಲೆಗೂ ಹೋಗದೆ ಇತ್ತ ಕೂಲಿಯ ಕಡೇ ಮುಖ ಮಾಡಿದ್ದಾರೆ.