ಹೆಚ್ಚುವರಿ ಹಣ ವಸೂಲಿ ಮಾಡಿದರೆ ಮುಲಾಜಿಲ್ಲದೆ ಕಠಿಣ ಕ್ರಮ; ಐಜಿಪಿ ಡಿ. ರೂಪಾ

Jul 28, 2020, 3:55 PM IST

ಬೆಂಗಳೂರು (ಜು. 28): ಒಂದು ಕಡೆ ಸರ್ಕಾರ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಹರಸಾಹಸ ಪಡುತ್ತಿದ್ದರೆ ಇತ್ತ ಖಾಸಗಿ ಆಸ್ಪತ್ರೆಗಳ ನಿಯಮ ಉಲ್ಲಂಘನೆ, ಹೆಚ್ಚು ದರ ವಸೂಲಿ ಮುಂದುವರೆದಿದೆ. 

ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿ ಹಿರಿಯ ಐಎಎಸ್‌ ಅಧಿಕಾರಿ ಹರ್ಷಗುಪ್ತ ಮತ್ತು ಐಜಿಪಿ ಡಿ.ರೂಪಾ ನೇತೃತ್ವದ ತಂಡ ಎಚ್ಚರಿಕೆ ನೀಡಿದ ಬೆನ್ನಲ್ಲೇ ಕೊರೋನಾ ಚಿಕಿತ್ಸೆ ಸಲುವಾಗಿ 22 ಮಂದಿ ಸೋಂಕಿತರಿಂದ ಹೆಚ್ಚುವರಿಯಾಗಿ ಪಡೆದಿದ್ದ .24 ಲಕ್ಷ ಹಣವನ್ನು ರಾಜರಾಜೇಶ್ವರಿ ನಗರ ಸಮೀಪದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಸೋಮವಾರ ಮರಳಿಸಿದೆ.

ಕೊರೋನಾ ಚಿಕಿತ್ಸೆಗೆ ಸೋಂಕಿತರಿಂದ ಪಡೆದಿದ್ದ ಮುಂಗಡ ಹಣವನ್ನು ಮರಳಿಸಿ ಆಸ್ಪತ್ರೆ ಉಚಿತ ಚಿಕಿತ್ಸೆ ನೀಡಿದೆ. ಇದರಿಂದ ಜನ ಸಾಮಾನ್ಯರಿಗೆ ಬಹಳ ಉಪಯೋಗವಾಗಿದೆ. ಐಎಎಸ್‌ ಅಧಿಕಾರಿ ಹರ್ಷಗುಪ್ತ, ಬಿಬಿಎಂಪಿ ಎಇಇ ಅಶೋಕ್‌ ಗೌಡ ಒಳಗೊಂಡ ನಮ್ಮ ತಂಡದ ಪರಿಶ್ರಮ ಸಾರ್ಥಕವಾಗಿದೆ. ಸೋಂಕಿತರ ಚಿಕಿತ್ಸೆಗೆ ಸರ್ಕಾರದ ಸೂಚನೆಗಳನ್ನು ಖಾಸಗಿ ಆಸ್ಪತ್ರೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಆಸ್ಪತ್ರೆಗಳ ಮೇಲೆ ನಿಗಾವಹಿಸಲಾಗಿದ್ದು, ಹೆಚ್ಚುವರಿ ಹಣ ವಸೂಲಿ ಮಾಡಿದರೆ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಡಿ ರೂಪಾ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ಧನದಾಹಿ ಆಸ್ಪತ್ರೆಗಳಿಗೆ ಬ್ರೇಕ್; ಅಧಿಕಾರಿಗಳಿಗೆ ಸೋಂಕಿತರಿಂದ ಧನ್ಯವಾದ