Aug 26, 2022, 10:48 AM IST
ಬೆಂಗಳೂರು (ಆ.26): ಗಣೇಶ ಹೆಸರಲ್ಲಿ ಬೇಕಾ ಬಿಟ್ಟಿ ಚಂದಾ ಎತ್ತಿದ್ರೆ ಹುಷಾರ್, ಒತ್ತಾಯಪೂರ್ವಕ ಹಣ ವಸೂಲಿ ಮಾಡದಂತೆ ವಾರ್ನಿಂಗ್, ಸಾರ್ವಜನಿಕರ ಬಳಿ ಪೀಡಿಸಿ ಚಂದಾ ಕೇಳಿದ್ರೆ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಖಡಕ್ ವಾರ್ನಿಂಗ್ ನೀಡಿದ್ದಾರೆ. ನಗರದ ಎಲ್ಲ ವಿಭಾಗಗಳ ಡಿಸಿಪಿ ಜೊತೆ ಸಭೆ ನಡೆಸಿ ಈ ಸೂಚನೆಯನ್ನು ನೀಡಲಾಗಿದೆ. ಯಾರೂ ಮನೆಗಳ ಬಳಿ ಹೋಗಿ ಚಂದಾ ಕೇಳಬಾರದು, ಸ್ವಯಂಪ್ರೇರಿತವಾಗಿ ಜನರು ಹಣ ಕೊಟ್ಟರೆ ತೆಗೆದುಕೊಳ್ಳಬೇಕು. ಮಾತ್ರವಲ್ಲದೇ ಇಷ್ಟೇ ಹಣ ಕೊಡಿ ಅಂತಾ ಡಿಮ್ಯಾಂಡ್ ಮಾಡಬಾರದು, ಆಕಸ್ಮಾತ್ ಮಾಡಿದರೆ ಅವರ ವಿರುದ್ದ ಕೇಸ್ ಹಾಕಲಾಗುತ್ತದೆ. ಮುಖ್ಯವಾಗಿ ಹಣ ಕೊಟ್ಟಿಲ್ಲ ಅಂದರೆ ನೋಡ್ಕೋತಿನಿ ಅನ್ನುವವರಿಗೆ ವಾರ್ನಿಂಗ್ ಕೊಟ್ಟು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಾಕಿ ಪಡೆ ಎಚ್ಚರಿಕೆಯನ್ನು ಕೊಟ್ಟಿದೆ. ಸಾವರ್ಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಪೊಲೀಸ್ ಆಯುಕ್ತರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ.