Dec 30, 2021, 10:46 AM IST
ಬೆಂಗಳೂರು (ಡಿ. 30): ಎಂಇಎಸ್ (MES) ನಿಷೇಧಿಸಬೇಕೆಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಡಿ.31ಕ್ಕೆ ‘ಕರ್ನಾಟಕ ಬಂದ್’ ಕರೆ ನೀಡಿವೆ. ಆದರೆ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕರೆ ನೀಡಲಾಗಿರುವ ಕರ್ನಾಟಕ ಬಂದ್ ಬಗ್ಗೆ ಕನ್ನಡಪರ ಸಂಘಟನೆಗಳಲ್ಲಿ ಒಮ್ಮತ ಇಲ್ಲ. ಈ ಮಧ್ಯೆ ಒಮಿಕ್ರೋನ್ ಭೀತಿ ಹಿನ್ನೆಲೆಯಲ್ಲಿ (Omicron Threat) ರಾಜ್ಯ ಸರ್ಕಾರ ವಿಧಿಸಿರುವ ರಾತ್ರಿ ಕರ್ಫ್ಯೂ (Night Curfew) ಮಂಗಳವಾರ 10 ಗಂಟೆಯಿಂದ ಜಾರಿಯಾಗಿದೆ. ಪ್ರತಿ ದಿನ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ವಾಣಿಜ್ಯ ಚಟುವಟಿಕೆ ಹಾಗೂ ಅನಗತ್ಯ ಸಂಚಾರಕ್ಕೆ ನಿರ್ಬಂಧ ಇರಲಿದೆ. ಜತೆಗೆ ಸಭೆ, ಸಮಾರಂಭ, ಸಮಾವೇಶ, ಮದುವೆ ಕಾರ್ಯಕ್ರಮಗಳಲ್ಲಿ 300ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಎಂಬ ನಿಯಮವೂ ಅನ್ವಯವಾಗಲಿದೆ.
ಇದನ್ನೂ ಓದಿ: Ban on MES: ಕರ್ನಾಟಕ ಬಂದ್ ಕೈಬಿಡಿ ಎಂದ ಸಿಎಂ: ಮಾಡಿಯೇ ಸಿದ್ಧ: ವಾಟಾಳ್
ರಾತ್ರಿ ಕರ್ಫ್ಯೂ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇನ್ನೂ ಕೆಲವರು ಹೊಸ ರೂಪಾಂತರಿ ಒಮಿಕ್ರೋನ್ ಭೀತಿ ಬೆನ್ನಲ್ಲೇ ಕೊರೋನಾ ಹರಡುವಿಕೆ ತಡೆಯಲು ಈ ಕ್ರಮ ಅತ್ಯಗತ್ಯ ಎಂದು ಹೇಳಿದ್ದಾರೆ. ಇನ್ನು ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕರೆ ನೀಡಲಾಗಿರುವ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹೊಸ ವರ್ಷದ ಚಟುವಟಿಕೆಗಳಿಗೆ ಹೊಡೆತ ಬೀಳಲಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.