Dec 3, 2024, 3:57 PM IST
ಹುಬ್ಬಳ್ಳಿ: ಬಸನಗೌಡ ಪಾಟೀಲ್ ಯತ್ನಾಳ ಉಚ್ಚಾಟನೆಗೆ ಲಿಂಗಾಯತ ಸಮಾಜ ಆಗ್ರಹಿಸಿದೆ. ಹುಬ್ಬಳ್ಳಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂಡ ಒಟ್ಟು ಸೇರಿದ ಲಿಂಗಾಯತ ಸಂಘಟನೆಗಳು ಯತ್ನಾಳ್ ಹೇಳಿಕೆ ವಿರುದ್ಧ ಕಿಡಿಕಾರಿವೆ. ಗುರು-ಬಸವ ಮಂಟಪ ಸಂಚಾಲಕ ಶಶಿಧರ ಕರವೀರ ಶೆಟ್ಟರ್ ಮಾತನಾಡಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ನಾವು ಖಂಡಿಸುತ್ತೇವೆ, ವಿಶ್ವದಲ್ಲೇ ಮೊದಲು ಸಂಸತ್ತನ್ನ ಕೊಟ್ಟಿದ್ದು ಬಸವಣ್ಣ, ಮನುವಾದವನ್ನು ಧಿಕ್ಕರಿಸಿ ಸಮಾನತೆ ಆಧಾರದ ಮೇಲೆ ಸಮಾಜ ಕೊಟ್ಟರು. ಯತ್ನಾಳ್ 'ಬಸವಣ್ಣನವರು ಕೈಲಾಗದವರು' ಅಂತ ಯಾವ ಆಧಾರದ ಮೇಲೆ ಹೇಳಿದ್ರು. ಲಿಂಗಾಯತ ನಾಯಕರಾಗಿ ಲಿಂಗಾಯತರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ. ಅವರ ಹೇಳಿಕೆ ಅವರ ಮನೆಯ ಸಂಸ್ಕಾರ ತಿಳಿಸಿ ಕೊಡುತ್ತದೆ. ನಮ್ಮಲ್ಲಿ ಅದ್ಭುತ ವಚನ ಸಾಹಿತ್ಯ ಇದೆ, ಇವರ ಹೇಳಿಕೆಗೆ ಯಾವ ಆಧಾರ ಇದೆ..? ಬಸವಣ್ಣನವರ ವ್ಯಕ್ತಿತ್ವಕ್ಕೆ ಕಳಂಕ ತಂದಂತಹ ಯತ್ನಾಳ್ ಕ್ಷಮೆ ಯಾಚಿಸಬೇಕು. ಈ ಹೇಳಿಕೆಯನ್ನು ಹಿಂದೆ ತೆಗೆದುಕೊಳ್ಳಬೇಕು. ಯತ್ನಾಳರ ಭಂಡತನದ ಮಾತನ್ನು ನಾವು ಒಪ್ಪುವುದಿಲ್ಲ. ಹೀಗಾಗಿ ಸರ್ಕಾರಕ್ಕೆ ಹಾಗೂ ಅವರ ಪಕ್ಷಕ್ಕೆ ಮನವಿ ಮಾಡುತ್ತೇವೆ. ಕೂಡಲೇ ಯತ್ನಾಳ್ ಅವರು ನಾಡಿನ ಜನರ ಕ್ಷಮೆಯಾಚಿಸಬೇಕು. ಯತ್ನಾಳ್ ಅವರು ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯತ್ನಾಳರನ್ನ ಶಾಸಕ ಸ್ಥಾನದಿಂದ ಅನರ್ಹ ಮಾಡಿ, ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಅಂದಾಗ ಮಾತ್ರ ಬಸವತತ್ವಕ್ಕೆ ಗೌರವ ಕೊಟ್ಟಂತೆ. ಒಂದು ವೇಳೆ ಯತ್ನಾಳ್ ಕ್ಷಮೆಯಾಚಿಸದಿದ್ದರೆ ಅವರನ್ನು ನಾವು ಲಿಂಗಾಯತ ನಾಯಕನನ್ನಾಗಿ ಒಪ್ಪುವುದಿಲ್ಲ. ಮುಂದಿನ ದಿನಗಳಲ್ಲಿ ಯತ್ನಾಳ್ ಅವರನ್ನ ಮನೆಗೆ ಕಳಿಸುವುದು ನಿಶ್ಚಿತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.