ರಾಜ್ಯದಲ್ಲಿ ಸಿಎಂ ಬದಲಾವಣೆ ಆಗ್ತಾರಾ ಎನ್ನುವ ವಿಚಾರ ಚರ್ಚೆಗೆ ಕಾರಣವಾಗಿದೆ. ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ ಈ ಚರ್ಚೆಗೆ ಕಾರಣವಾಗಿದ್ದು ಕಾಂಗ್ರೆಸ್ ಪಕ್ಷ ಮಾಡಿರುವ ಟ್ವೀಟ್. ಇದರ ಬೆನ್ನಲ್ಲಿಯೇ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ವಾಕ್ಸಮರ ಆರಂಭವಾಗಿದೆ.
ಬೆಂಗಳೂರು (ಆ.9): ರಾಜ್ಯ ರಾಜಕೀಯದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷ ಮಾಡಿರುವ ಟ್ವೀಟ್ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಶೀಘ್ರದಲ್ಲಿಯೇ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮೂರನೇ ಸಿಎಂ ಕಾಣಲಿದೆ ಎಂದು ಟ್ವೀಟ್ ಮಾಡಿದ ಬೆನ್ನಲ್ಲಿಯೇ, ಸಿಎಂ ಬದಲಾವಣೆ ಚರ್ಚೆ ದೊಡ್ಡ ಮಟ್ಟದಲ್ಲಿ ಆರಂಭವಾಗಿದೆ. ಒಂದೆಡೆ ಬಿಜೆಪಿ ಮುಂದಿನ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ಎದುರಿಸುವುದಾಗಿ ಹೇಳಿದೆ.
ಇತ್ತೀಚೆಗೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದರು. ಅಂದಿನಿಂದ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಇದು ಸಿಎಂ ಬದಲಾವಣೆಯ ಮುನ್ಸೂಚನೆ ಎನ್ನುವ ಅರ್ಥದಲ್ಲಿ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಅಲ್ಲದೆ, ಅಮಿತ್ ಶಾ ರಾಜ್ಯಕ್ಕೆ ಬಂದು ಹೋಗಿರುವ ಬಗ್ಗೆ ಬಿಜೆಪಿಯ ಯಾವೊಬ್ಬ ನಾಯಕರೂ ಕೂಡ ಮಾತನಾಡದೇ ಇರುವುದು ಇದಕ್ಕೆ ಕಾರಣ ಎಂದೂ ತಿಳಿಸಿತ್ತು.
ಸಿಎಂ ಬದಲಾವಣೆ: ಈ ಹಿಂದೆ ಮುಖ್ಯಮಂತ್ರಿ ಬದಲಿಸಿದ ಉದಾಹರಣೆ ಕೊಟ್ಟ ಬಿಜೆಪಿ ನಾಯಕ
ಈ ಕುರಿತಾಗಿ ದಾವಣೆಗೆರೆಯಲ್ಲಿ ಮಾತನಾಡಿದ ಎಂಪಿ ರೇಣುಕಾಚಾರ್ಯ, ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ, ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಮುಂದುವರಿಯೋದು ಕೂಡ ಅಷ್ಟೇ ಸತ್ಯ. ಮುಖ್ಯಮಂತ್ರಿಗಳ ಬದಲಾವಣೆ ಕೇವಲ ಊಹಾಪೋಹ ಎಂದಿದ್ದರು. ಈ ಕುರಿತಂತೆ ಬಿಜೆಪಿಯ ಸಾಕಷ್ಟು ನಾಯಕರು ಪ್ರತಿಕ್ರಿಯೆ ನೀಡಿದ್ದು, ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.