Jun 10, 2023, 1:39 PM IST
ಬೆಂಗಳೂರು (ಜೂ.10): ನೂತನ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಯಡಿ ಆರಂಭಿಸುತ್ತಿರುವ ‘ಶಕ್ತಿ’ ಯೋಜನೆ ನಾಳೆ (ಜೂನ್.11)ಯಿಂದ ಜಾರಿಯಾಗಲಿದ್ದು, ಯೋಜನೆಯ ಅಡಿ ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯ ಸಾರಿಗೆಯ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಕೆಲವು ನಿಯಮಗಳಿವೆ. ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಸೇರಿದಂತೆ ರಾಜ್ಯದ ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ.
ಮಹಿಳಾ ಪ್ರಯಾಣಿಕರ ಪೈಕಿ 6 ರಿಂದ 12 ವರ್ಷದವರೆಗಿನ ಬಾಲಕಿಯರು, ಲಿಂಗತ್ವ ಅಲ್ಪಅಸಂಖ್ಯಾತರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಸಾರಿಗೆಗಳಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ಎಸಿ, ರಾಜಾಹಂಸ ಸೇರಿದಂತೆ ಐಷಾರಾಮಿ ಬಸ್ಸುಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ. ಇನ್ನು ಉಚಿತವಾಗಿ ಬಸ್ ಪ್ರಯಾಣ ಮಾಡಲು ಯಾವುದಾದರೊಂದು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೋರಿಸಬೇಕು. ಸದ್ಯ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ದೂರದ ಯಾವುದೇ ಮಿತಿಯಿಲ್ಲ.