Karnataka Assembly Elections: ಒಕ್ಕಲಿಗ ಕೋಟೆಯಲ್ಲಿ ಡಿಕೆ ಢಮರುಗ, ಕುರುಬರ ಕೋಟೆಯಲ್ಲಿ ಸಿದ್ದು ಸದ್ದು

Nov 29, 2022, 4:13 PM IST

ಬೆಂಗಳೂರು (ನ.29): ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಲು ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೂರೂ ಪಕ್ಷಗಳು ರಣತಂತ್ರ ಹೂಡಿದ್ದು, ಈಗಾಗಲೇ ಮತದಾರರನ್ನು ಸೆಳೆಯುವ ಕಾರ್ಯವನ್ನು ಆರಂಭಿಸಿವೆ. ಆದರೆ, ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಲೆಕ್ಕಾಚಾರ ಶುರುವಾಗಿದ್ದು, ಡಿ.ಕೆ. ಶಿವಕುಮಾರ್‍‌ ಮತ್ತು ಸಿದ್ದರಾಮಯ್ಯ ಅವರು ಸಿಎಂ ಪಟ್ಟಕ್ಕಾಗಿ ಜಾತಿಯನ್ನು ಪಣಕ್ಕಿಡಲು ಮುಂದಾಗಿದ್ದಾರೆ ಎಂದು ಕಂಡುಬರುತ್ತಿದೆ.

ಒಕ್ಕಲಿಗ ಸಮುದಾಯದ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್  'ಸಿಎಂ' ಶಪಥ..! ಮಾಡಿದ್ದಾರೆ. ಮತ್ತೊಂಡದೆ ಕುರುಬರ ಕೋಟೆಯಲ್ಲಿ ಸಿದ್ದರಾಮಯ್ಯ 'ಸಿಎಂ' ಬಾಣ..! ಬಿಟ್ಟಿದ್ದಾರೆ. ಈಗ ಇಬ್ಬರ ಕುರ್ಚಿ ಕಾಳಗ ಪ್ರತಿಸ್ಪರ್ಧೆಯೋ? ರಣತಂತ್ರವೋ? ಕಾದುನೋಡಬೇಕು. ಕದನಕಲಿ ಸಿದ್ದರಾಮಯ್ಯ ಮತ್ತು ದಂಡನಾಯಕ ಡಿ.ಕೆ ಶಿವಕುಮಾರ್ ಮಧ್ಯೆ ಸಿಎಂ ಕಾಳಗ ಶುರುವಾಗಿದ್ದು, ಈ ಪಟ್ಟವನ್ನು ದಕ್ಕಿಸಿಕೊಳ್ಳೋದಕ್ಕೆ ಅತಿರಥ-ಮಹಾರತಿಯ ಬತ್ತಳಿಕೆಯಿಂದ ಜಾತಿ ಅಸ್ತ್ರ ಸಿಡಿದುಬಂದಿದೆ. ಕನಸಿನ ಕುದುರೆಯ ಬೆನ್ನೇರಿ ಹೊರಟವರಿಂದ ಪಟ್ಟಕ್ಕಾಗಿ ಜಾತಿ ಪಟ್ಟು ಆರಂಭವಾಗಿದೆ. ಒಕ್ಕಲಿಗ ಕೋಟೆಯಲ್ಲಿ ಡಿಕೆ ಢಮರುಗ, ಕುರುಬರ ಕೋಟೆಯಲ್ಲಿ ಸಿದ್ದು ಸದ್ದು ಮಾಡುತ್ತಿದ್ದಾರೆ. ಅಷ್ಟಕ್ಕೂ ಕಾಂಗ್ರೆಸ್'ನ ಮಹಾ ಸೇನಾನಿಗಳಿಬ್ಬರು ಮುಖ್ಯಮಂತ್ರಿ ಪಟ್ಟಕ್ಕಾಗಿ ಹಾಕಿರೋ ಜಾತಿ ಪಟ್ಟು ಎಂಥದ್ದು? ಎನ್ನುವುದರ ವಿವರ ಇಲ್ಲಿದೆ. 

ಅವಕಾಶ ಈಗ ಬಂದಿದೆ, ಕಳೆದುಕೊಳ್ಳಬೇಡಿ: ಡಿ.ಕೆ.ಶಿವಕುಮಾರ್‌

ಹೈಕಮಾಂಡ್‌ ಸೂಚನೆಗೂ ಬಗ್ಗದ ಜೋಡೆತ್ತು: ಮುಖ್ಯಮಂತ್ರಿ ಕುರ್ಚಿಗಾಗಿ ಬಗ್ಗೆ ಕಿತ್ತಾಡಬೇಡಿ, ಅದನ್ನು ನಾವು ನಿರ್ಧಾರ ಮಾಡುತ್ತೇವೆ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದಮೇಲೂ ಈ ಪಟ್ಟ ಕಾಳಗ ಯಾಕೆ? ಎನ್ನುವುದು ಅರ್ಥವಾಗುತ್ತಿಲ್ಲ. ಇದು ಕಾಂಗ್ರೆಸ್'ನ ಅತಿರಥ-ಮಹಾರಥಿಯ ಪಕ್ಕಾ ಯೋಜನೆ ಆಗಿರಬಹುದು. ಒಕ್ಕಲಿಗರ ಮತಗಳನ್ನು ಸೆಳೆಯಲು ಡಿಕೆ ಶಿವಕುಮಾರ್, ಕುರುಬರ ಮತಗಳನ್ನು ಸಾಲಿಡ್ಡಾಗಿ ಸೆಳೆಯಲು ಸಿದ್ದರಾಮಯ್ಯ ಕಸರತ್ತು ಮಾಡುತ್ತಿದ್ದಾರೆ. ಇವರಿಬ್ಬರ ನಡುವಿನ ಸಿಎಂ ಯುದ್ಧದ ಅಸಲಿ ಗುಟ್ಟು ಇದೇ. ಇದರ ಜೊತೆಗೆ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಬತ್ತಳಿಕೆಯಲ್ಲಿ ರೋಚಕ ಜಾತಿ ಅಸ್ತ್ರ ಸಿದ್ಧವಾಗಿ ಕೂತಿದೆ.

ಮನೆ ಬಾಗಿಲಿಗೆ ಬಂದ ಅವಕಾಶ ಕಳ್ಕೋಬೇಡಿ: ಇತ್ತೀಚೆಗೆ ಬೆಂಗಳೂರಿನ ಒಕ್ಕಲಿಗ ಕಚೇರಿಯಲ್ಲಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆದಿದ್ದ ಒಕ್ಕಲಿಗರ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವಂತೆ ಮಾಡಿದ ಸಭೆಯಲ್ಲಿ ಭಾಗವಹಿಸಿದ್ದ ಡಿ.ಕೆ. ಶಿವಕುಮಾರ್ ನಿಮ್ಮ ಮನೆಗೆ ನಿಮ್ಮ ಮಗನನ್ನು ವಿಧಾನಸೌಧದಲ್ಲಿ ಕೂಡಿಸುವ ಅವಕಾಶ ಬಂದಿದೆ. ಇದನ್ನು ಉಪಯೋಗಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ ಎಂದು ಹೇಳುವ ಮೂಲಕ ಸಿಎಂ ಆಗುವ ಆಸೆಯನ್ನಯ ಪರೋಕ್ಷವಾಗಿ ಬಿಚ್ಚಿಟ್ಟಿದ್ದರು. ಮುಂದುವರೆದು'ಪೆನ್ನು ಪೇಪರು ನನ್ನ ಕೈಗೆ ಕೊಡಿ.. ಮುಂದಿನದ್ದನ್ನು ನನಗೆ ಬಿಡಿ' ಎಂದು ಕೂಡ ಮೀಸಲಾತಿ ಹೆಚ್ಚಳದ ವಿಚಾರವಾಗಿ ತಮ್ಮನ್ನು ಮುಖ್ಯಮಂತ್ರಿ ಮಾಡಿ ಎಂದು ಡಿ.ಕೆ. ಶಿವಕುಮಾರ್‍‌ ತಿಳಿಸಿದ್ದರು.

ಕುರುಬ ಸಂಘದ ವಿಚಾರವಾಗಿ ಕೊಲೆ ಬೆದರಿಕೆ ಬಂದಿತ್ತು: ಸಿದ್ದರಾಮಯ್ಯ ಹೇಳಿಕೆ

ಕೇಪಬಲ್‌ ನೋಡಿ ಸಪೋರ್ಟ್ ಮಾಡಿ : ಇನ್ನು ಕುರುಬರ ಸಮುದಾಯದಿಂದ ಆಯೋಜಿಸಲಾಗಿದ್ದ ಕುರುಬರ ಹಾಸ್ಟೆಲ್‌ ಹಳೆಯ ವಿದ್ಯಾರ್ಥಿಗಳ ಕನಕ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗುವ ಇಂಗಿತವನ್ನು ನೇರವಾಗಿ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿಗಳಿಗಾಗಿ ಜಾರಿಗೊಳಿಸಿದ್ದ ಹಲವು ಯೋಜನೆಗಳು ಹಾಗೂ ಹಾಸ್ಟೆಲ್‌ ನಿರ್ಮಾಣದ ಬಗ್ಗೆ ತಿಳಿಸಿದ್ದರು. ಸಿದ್ದರಾಮಯ್ಯ ಅಂತ ಸಪೋರ್ಟ್ ಮಾಡಬೇಡಿ, ನಾನು ಕೇಪಬಲ್ ಇದ್ದೇನೋ ಇಲ್ವಾ ಅಂತ ನೋಡಿ ಸಪೋರ್ಟ್ ಮಾಡಿ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದರು.