Ground Report: ಕಲಬುರಗಿಯಲ್ಲಿ ಕೈ ಮಲ ಜಂಗಿ ಕುಸ್ತಿ: ಹಾಲಿ, ಮಾಜಿಗಳ ನಡುವೆ ಹೊಸಬರ ಫೈಟ್

Nov 26, 2022, 5:08 PM IST

ಕಲಬುರಗಿ (ನ.26): ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಟಿಕೆಟ್‌ ಫೈಟ್‌ ಹಾಗೂ ಸ್ಪರ್ಧಾ ಆಕಾಂಕ್ಷಿಗಳ ಪ್ರಚಾರ ಕಾರ್ಯ ತೀವ್ರ ಚುರುಕು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಮಾವೇಶಗಳ ಮಹಾಪೂರವೇ ನಡೆಯುತ್ತಿವೆ. ಈಗ ಕಲಬುರಗಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಟಿಕೆಟ್‌ಗಳನ್ನು ಪಡೆಯಲು ಅಭ್ಯರ್ಥಿಗಳು ಜಂಗಿ ಕುಸ್ತಿ ನಡೆಸುತ್ತಿದ್ದಾರೆ.

ಜಿಲ್ಲೆಯ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಜೋಶ್‌ನಲ್ಲಿದೆ. ಇನ್ನು ಜನಸಂಕಲ್ಪ ಯಾತ್ರೆ ಮತ್ತು ಒಬಿಸಿ ಸಮಾವೇಶ ಯಶಸ್ಸಿನ ಬೆನ್ನಲ್ಲೇ ಕೇಸರಿ ಪಡೆಯೂ ಕೂಡ ಚುನಾವಣೆ ಹಾಟ್‌ ಫೇವರೀಟ್‌ ಆಗಿದೆ. ಈಗಾಗಲೇ ಪಂಚರತ್ನ ರಥಯಾತ್ರೆ ಆರಂಭಿಸಿರುವ ಜೆಡಿಎಸ್‌ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ರಾಷ್ಟ್ರೀಯ ಪಕ್ಷಗಳಿಗೆ ಠಕ್ಕರ್‍‌ ಕೊಡುವ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಒಟ್ಟು 9 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ ವೀರಶೈವ ಲಿಂಗಾಯರು, ಒಬಿಸಿ, ದಲಿತರು ಮತ್ತು ಮುಸ್ಲಿಂ ಸಮುದಾಯದವರೇ ನಿರ್ಣಾಯಕರಾಗಿದ್ದಾರೆ. ಮಾಜಿ ಸಚಿವ ಪ್ರಿಯಾಂಕ ಖರ್ಗೆ ಸ್ಪರ್ಧಿಸುವ ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಭಾವ ಜೋರಾಗಿದೆ. ಇವರ ವಿರುದ್ಧ ಸ್ಪರ್ಧಿಸಲು ವಿಠ್ಠಲ್‌ ವಾಲ್ಮೀಕಿ ನಾಯಕ್‌, ಅರವಿಂದ್‌ ಚವ್ಹಾಣ್ ಕೂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಹಾಲಿ ಸಂಸದ ಉಮೇಶ್‌ ಜಾಧವ್‌ ಕೂಡ ಬಿಜೆಪಿ ಟಿಕಟ್‌ ಆಕಾಂಕ್ಷಿ ಎಂದು ಕೇಳಿಬಂದಿದೆ.

ಜೇವರ್ಗಿ ಕ್ಷೇತ್ರದಲ್ಲಿ ಕಮಲ ಅರಳಿಸುವ ಸಂಕಲ್ಪವನ್ನು ಬಿಜೆಪಿ ಮಾಡಿಕೊಂಡಿದೆ. ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕೈ ಟಿಕೆಟ್‌ಗೆ ಭಾರಿ ಪೈಪೋಟೊ ನಡೆದಿದೆ. ಇಲ್ಲಿನ ಹಾಲಿ ಶಾಸಕ ಬಿಜೆಪಿಯ ದತ್ತಾತ್ರೇಯ ಪಾಟೀಲ್‌ ರೇವೂರ್ ಮತ್ತೊಮ್ಮೆ ಕಣಕ್ಕಿಳಿಲಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಅಲ್ಲಂ ಪ್ರಭು ಪಾಟೀಲ್‌ ಟಿಕೆಟ್‌ಗೆ ಭಾರಿ ಪೈಪೋಟಿ ನಡೆಸಿದ್ದಾರೆ. ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ್ ಪಾಟೀಲ್‌ ತೇಲ್ಕೂರ್ ಪುನರಾಯ್ಕೆ ಬಯಸಿದ್ದಾರೆ. ಕಾಂಗ್ರೆಸ್‌ ನಾಯಕ ಮಾಜಿ ಸಚಿವ ಶರಣಪ್ರಕಾಶ ಪಾಟೀಲ್‌ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಇನ್ನು ಜೆಡಿಎಸ್‌ನಿಂದ ಹೊಸಮುಖ ಬಾಲರಾಜ್‌ ಗುತ್ತೇದಾರ್‍‌ ಅವರನ್ನು ಕಣಕ್ಕಿಳಿಸಲು ಘೋಷಣೆ ಮಾಡಲಾಗಿದೆ.