ಕೇಂದ್ರ ಬಜೆಟ್‌ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ: ವಿಪಕ್ಷಗಳಿಗೆ ತಿರುಗೇಟು

Feb 2, 2023, 2:50 PM IST

ಬೆಂಗಳೂರು (ಫೆ.02): ಕೇಂದ್ರ ಸರ್ಕಾರವು ಮಂಡಿಸಿರುವ ಬಜೆಟ್‌ನಲ್ಲಿ ಕರ್ನಾಟಕದ ನೀರಾವರಿಗೆ ಅಂದರೆ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ಬಂದಿದೆ. ಇದನ್ನು ರಾಜ್ಯದ ಪ್ರತಿಯೊಬ್ಬರೂ ಸ್ವಾಗತ ಮಾಡಬೇಕು. ಆದರೆ, ದೊಡ್ಡ ಮಟ್ಟದ ಅನುದಾನ ಬಂದಿರುವುದಿಂದ ವಿಪಕ್ಷಗಳಿಗೆ ನಿರಾಸೆ ಉಂಟಾಗಿದೆ. ಇನ್ನು ನನ್ನ ಬಜೆಟ್‌ ಜನಪರ ಬಜೆಟ್‌ ಆಗಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿರುಗೇಟು ನೀಡಿದ್ದಾರೆ. 

ಬಜೆಟ್‌ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಬಜೆಟ್ ಮೂಗಿಗೆ ತುಪ್ಪ ಸುರಿಯುವಂತಾಗಿದೆ ಎಂಬ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಆದರೆ, ವಿಪಕ್ಷಗಳು ರಾಜಕೀಯವಾಗಿ ಏನಾದ್ರೂ ಹೇಳಬಹುದು. ಇಂತಹ ಹೇಳಿಕೆಗಳನ್ನು ನಾನು 3 ದಶಕಗಳಿಂದ ಕೇಳುತ್ತಿದ್ದೇನೆ. ವಿಪಕ್ಷದಲ್ಲಿದ್ದಾಗ ಮೂಗಿಗೆ ತುಪ್ಪ ಸುರಿಯುವುದು ಅಂತ ಹೇಳಿಕೆ ಕೊಡುವುದು. ಏನಾದರೂ ಟೀಕೆ ಮಾಡುವುದಿದ್ದರೆ ವಾಸ್ತವಾಂಶದ ಮೇಲೆ ಮಾತನಾಡಬೇಕು. ಸಿದ್ದರಾಮಯ್ಯನವರು ತಮ್ಮ ಬಜೆಟ್‌ ನಲ್ಲಿ ಎಷ್ಟು ಜನಕ್ಕೆ ತುಪ್ಪ ಸವರಿದ್ದಾರೆ ಅಂತ ಜನಕ್ಕೆ ಗೊತ್ತಾಗಿಯೇ ಅವರನ್ನ ಮನೆಗೆ ಕಳಿಸಿದ್ದಾರೆ. ಇನ್ನು ಕುಮಾರಸ್ವಾಮಿ ಅವರು ಹಣೆಗೆ ತುಪ್ಪ ಸವರಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮಂಡನೆಯಾಗಲಿರುವ ನನ್ನ ಬಜೆಟ್ (ರಾಜ್ಯ ಬಜೆಟ್‌ 2023) ಜನಪರ ಬಜೆಟ್‌ ಆಗಿರುತ್ತದೆ ಎಂದು ಮಾಹಿತಿ ನೀಡಿದರು.

ನನ್ನ ಬಜೆಟ್ ಜನಪರ ಬಜೆಟ್ ಆಗಿರುತ್ತದೆ: ಕೊಡುಗೆಗಳ ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ

ಭದ್ರಾ ಯೋಜನೆಗೆ ಯಡಿಯೂರಪ್ಪ ಚಾಲನೆ: ರಾಜ್ಯದಲ್ಲಿ ಎಸ್. ನಿಜಲಿಂಗಪ್ಪ ಇದ್ದಾಗಿಂದಲೂ ಭದ್ರಾ ಮೇಲ್ದಂಡೆ ಯೋಜನೆಗೆ ಬೇಡಿಕೆ ಇತ್ತು. ಆದರೆ, ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆ ಚಾಲನೆ ಸಿಕ್ಕಿತ್ತು. ಆದರೆ, ಈಗ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದ್ದು, ವಿಪಕ್ಷಗಳು ಈ ಯೋಜನೆ ಮಾಡಲು ಬರೋದಿಲ್ಲ ಅಂತಿದ್ದಾರೆ. ಬಜೆಟ್ ಜಾರಿಯಾಗೋದೆ ಮುಂದಿನ ವರ್ಷದಿಂದ. ಈ ಯೋಜನೆ ಆರಂಭವಾಗುವುದು ಏಪ್ರಿಲ್‌ ತಿಂಗಳಿಂದ ಆಗಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಆಗಿಲ್ಲಾ ಅಂತಿದ್ದಾರೆ. ಈಗಾಗಲೇ ಕ್ಯಾಬಿನೆಟ್ ನಲ್ಲಿ ಯೋಜನೆ ಬಗ್ಗೆ ಎಲ್ಲಾ ಒಪ್ಪಿಗೆ ತಗೆದುಕೊಂಡಿದ್ದಾರೆ. ಈಗ ಅದಕ್ಕೆ 5,300 ಕೋಟಿ ಅನುದಾನ ಬಂದಿದೆ ಎಂದರು.