Oct 27, 2022, 11:33 PM IST
ಬೆಂಗಳೂರು (ಅ. 27): 2023ರ ಚುನಾವಣಾ ಅಖಾಡಕ್ಕೆ ವೇದಿಕೆ ಸಿದ್ಧವಾಗಿದೆ. ರಾಜ್ಯದ ಮೂರು ಪ್ರಧಾನ ರಾಜಕೀಯ ಪಕ್ಷಗಳು ಯಾತ್ರೆ ಪಾಲಿಟಿಕ್ಸ್ ಅಖಾಡಕ್ಕೆ ಇಳಿದಿವೆ. ಚುನಾವಣೆಗಾಗಿ ಯಾತ್ರೆ ಹೆಸರಲ್ಲಿ ನಾಯಕರ ಪ್ರಚಾರ. ಮೂರು ಪಕ್ಷಗಳಿಂದ ಮೂರು ಸಂಘಟನಾ ಯಾತ್ರೆ ಘೋಷಣೆಯಾಗಿದೆ.
ಇದರೊಂದಿಗೆ ಡಿಸೆಂಬರ್ ವೇಳೆಗೆ ಚುನಾವಣಾ ಕಣ ರಂಗೇರುವುದು ನಿಶ್ಚಿತವಾಗಿದೆ. ಜನಸಂಕಲ್ಪ ಯಾತ್ರೆ ಹೆಸರಲ್ಲಿ ಬಿಜೆಪಿ ಈಗಾಗಲೇ ಅಖಾಡಕ್ಕೆ ಇಳಿದಿದ್ದರೆ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮುಗಿಸಿರುವ ಕಾಂಗ್ರೆಸ್ ಈಗ ಮತ್ತೊಂದು ಯಾತ್ರೆ ಘೋಷಣೆ ಮಾಡಿದೆ. ಸಿದ್ದು, ಡಿಕೆಶಿ ಪ್ರತ್ಯೇಕ ಬಸ್ ಯಾತ್ರೆ ಮಾಡುವುದಾಗಿ ಘೋಷಿಸಿದ್ದಾರೆ. ಇದರ ನಡುವೆ ನವೆಂಬರ್ 1 ರಿಂದ ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಘೋಷಣೆಯಾಗಿದೆ.
ಜೆಡಿಎಸ್ ಪಂಚರತ್ನ ಯಾತ್ರೆಗೆ ಸಿದ್ದಗೊಳಿಸಿರುವ ವಾಹನಗಳು ಹೇಗಿವೆ ಗೊತ್ತಾ?
ಇನ್ನು ನವೆಂಬರ್ 11 ಕ್ಕೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಅದಕ್ಕಾಗಿಯೂ ಬಿಜೆಪಿ ಭರದ ಸಿದ್ಧತೆ ನಡೆಸಿದೆ. ಸಮಾವೇಶದಲ್ಲಿ ಕನಿಷ್ಠ 3 ಲಕ್ಷ ಜನರನ್ನು ಸೇರಿಸಬೇಕು ಎನ್ನುವ ಪಣ ತೊಟ್ಟಿದೆ. ವಂದೇಭಾರತ್ ಎಕ್ಸ್‌ಪ್ರೆಸ್ ಉದ್ಘಾಟನೆ, ಕೆಂಪೇಗೌಡ ಪ್ರತಿಮೆ ಅನಾವರಣದಂಥ ಕಾರ್ಯಕ್ರಮಗಳು ಇದರಲ್ಲಿ ಸೇರಿವೆ.