ವರುಣ್ ಸಿಂಗ್ ನಿಧನಕ್ಕೆ ಪರಿಷತ್ ನಲ್ಲಿ ಸಂತಾಪ ಸೂಚನೆ
ಮಧ್ಯಪ್ರದೇಶದ ಭೋಪಾಲ್ ಗೆ ರವಾನೆಯಾದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಪಾರ್ಥಿವ ಶರೀರ
ನಾಳೆ ಹುಟ್ಟೂರಿನಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ
ಬೆಳಗಾವಿ (ಡಿ. 16): ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಎಂಟು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ಮಾಡಿ ಬುಧವಾರ ಕೊನೆಯುಸಿರೆಳೆದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ವಿಧಾನಪರಿಷತ್ ನಲ್ಲಿ ಸಂತಾಪ ಸೂಚಿಸಲಾಯಿತು. ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವರುಣ್ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಅಸುನೀಗಿದ್ದರು. ಗುರುವಾರ ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ಮಧ್ಯಪ್ರದೇಶದ ಭೋಪಾಲ್ ಗೆ ರವಾನೆ ಮಾಡಲಾಯಿತು.
ತಮಿಳುನಾಡಿನ ಕೂನೂರಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಮೃತರಾಗಿದ್ದರೆ, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ದೇಹದಲ್ಲಿ ಶೇಕಡಾ 45ರಷ್ಟು ಸುಟ್ಟ ಗಾಯದೊಂದಿಗೆ ಬದುಕುಳಿದಿದ್ದರು. ದುರಂತ ನಡೆದ ದಿನವೇ ಅವರನ್ನು ವೆಲ್ಲಿಂಗ್ಟನ್ ನ ಸೇನಾ ಆಸ್ಪತ್ರೆಯಿಂದ ಬೆಂಗಳೂರಿಗೆ ರವಾನೆ ಮಾಡಲಾಗಿತ್ತು. ಸೇನಾ ಗೌರವಗಳೊಂದಿಗೆ ನಾಳೆ ಅವರ ಅಂತ್ಯಕ್ರಿಯೆ ಭೋಪಾಲ್ ನಲ್ಲಿ ನಡೆಯಲಿದೆ.
IAF Helicopter Crash : ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನ
"ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಹೆಮ್ಮೆ, ಶೌರ್ಯ ಮತ್ತು ಅತ್ಯಂತ ವೃತ್ತಿಪರತೆಯಿಂದ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಅವರ ನಿಧನದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ದೇಶಕ್ಕೆ ಅವರ ಶ್ರೀಮಂತ ಸೇವೆಯನ್ನು ಎಂದಿಗೂ ಮರೆಯಲಾಗುವುದಿಲ್ಲ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪಗಳು. ಓಂ ಶಾಂತಿ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ವರುಣ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು.