Oct 5, 2021, 11:38 AM IST
ನವದೆಹಲಿ(ಅ.05): ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಂ ಸರ್ವರ್ ಡೌನ್ ಆಗಿ ಭಾರತ ಸೇರಿದಂತೆ ವಿಶ್ವದ ಹಲವೆಡೆ ಈ ಸೇವೆಗಳಲ್ಲಿ ಭಾರೀ ವ್ಯತ್ಯಯ ಕಂಡುಬಂದಿತು. ಇದರಿಂದಾಗಿ ಫೇಸ್‌ಬುಕ್ ಸೇರಿದಂತೆ ಫೇಸ್ಬುಕ್ ಒಡೆತನದ ವಾಟ್ಸಪ್ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರು ಸಂದೇಶ ಕಳಿಸಲು, ಸ್ವೀಕರಿಸಲು ಮತ್ತು ಲಾಗಿನ್ ಮಾಡಲಾಗದೆ ಪರದಾಡಿದರು.
ಅಲ್ಲದೆ ಈ ಬಗ್ಗೆ ಟ್ವೀಟರ್ ಮುಖಾಂತರ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಟ್ವೀಟರ್ ವೇದಿಕೆಯಲ್ಲೇ ಪ್ರತಿಕ್ರಿಯಿಸಿದ ಫೇಸ್ಬುಕ್, ಸರ್ವರ್ ಡೌನ್‌ನಿಂದ ಆಗಿರುವ ಸಮಸ್ಯೆ ಪರಿಹಾರಕ್ಕೆ ಕಾರ್ಯ ನಿರ್ವಹಿಸಲಾಗುತ್ತಿದೆ. ಶೀಘ್ರದಲ್ಲೇ ಗ್ರಾಹಕರು ತಮ್ಮ ಸೇವೆಯನ್ನು ಬಳಸಬಹುದು ಎಂದು ಹೇಳಿತು. ಫೋಟೋ ಹಂಚಿಕೊಳ್ಳುವ ಇನ್‌ಸ್ಟಾಗ್ರಾಂ ಮತ್ತು ವಾಟ್ಸಪ್‌ಗಳು ಇದೇ ರೀತಿಯ ಸ್ಪಷ್ಟನೆ ನೀಡಿದವು. ಆದರೆ ಸಮಸ್ಯೆ ಮಾತ್ರ ಸರಿಹೋಗಲಿಲ್ಲ.
ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 9 ಗಂಟೆ ಸುಮಾರಿಗೆ ಫೇಸ್ಬುಕ್ ಒಡೆತನದ ಈ ಆ್ಯಪ್‌ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಆ್ಯಪ್‌ಗಳ ಸ್ಥಗಿತದಿಂದ ವಿಶ್ವಾದ್ಯಂತ ಸಾವಿರಾರು ಜನ ಸಮಸ್ಯೆಗೆ ಸಿಲುಕಿದರು ಎಂದು ವೆಬ್‌ಸೈಟ್ ಮತ್ತು ಸೇವೆಗಳ ಬಗ್ಗೆ ಮಾಹಿತಿ ಒದಗಿಸುವ ಡೌನ್‌ಡಿಟೆಕ್ಟರ್.ಕಾಂ ಹೇಳಿದೆ.