ದೇವರ ಮೂರ್ತಿ ಅಗೆದು ನಿಧಿಗಾಗಿ ಶೋಧ: ವಿಗ್ರಹ ಕೆಡವಿ ನಾಲ್ಕು ಅಡಿ ಗುಂಡಿ ತೋಡಿದ ಕಳ್ಳರ ಗ್ಯಾಂಗ್

Nov 19, 2023, 10:56 AM IST

ದೇವರು.. ದೇವಸ್ಥಾನ ಅಂದ್ರೆ ಮನುಷ್ಯನಿಗೆ ಭಯ ಭಕ್ತಿ ಇರುತ್ತೆ. ಆ ಪವಿತ್ರವಾದ ಸ್ಥಳದಲ್ಲಿ ಯಾವುದೇ ಕೆಟ್ಟ ಕೆಲಸಗಳನ್ನು ಮಾಡಲು ಹಿಂಜರಿಯುತ್ತಾರೆ. ಅಂತಹ ಸ್ಥಳದಲ್ಲೇ ಖದೀಮರು ನಿಧಿಗಾಗಿ ಶೋಧ(Treasure hunt) ನಡೆಸಿದ್ದಾರೆ. ದೇವರ ಮೂರ್ತಿಯನ್ನೇ ಕೆಡವಿ ನಾಲ್ಕು ಅಡಿಯಷ್ಟು ಗುಂಡಿ ತೋಡಿದ್ದಾರೆ. ಧಾರವಾಡದ(Dharwad) ದುಬ್ಬನಮರಡಿ ಗ್ರಾಮದ ಹ‌ನುಮಂತ ದೇವರ ದೇವಸ್ಥಾನದಲ್ಲಿ(Hanuman temple) ನಿಧಿ ಶೋಧ ನಡೆಸಲಾಗಿದೆ. ಕಳೆದ ಅಮವಾಸ್ಯೆ ದಿನ ಮಧ್ಯರಾತ್ರಿ ಆಂಜನೇಯ ಮೂರ್ತಿಯನ್ನು ಕೆಡವಿ ಗುಂಡಿ ಅಗೆದು ತೆಂಗಿನಕಾಯಿ ಮತ್ತು ನಿಂಬೆ ಹಣ್ಣು ಇಟ್ಟು ಪೂಜೆ ಮಾಡಿದ್ದಾರೆ. ಈ ನಿಧಿ ಕಳ್ಳರ ಗ್ಯಾಂಗ್ ಇದೇ ರೀತಿಯಾಗಿ ಊರಿನ ಹಲವು ದೇವಸ್ಥಾನಗಳಲ್ಲಿ ದೇವರ ವಿಗ್ರಹಗಳನ್ನು ಕೆಡವಿ ಭೂಮಿಯನ್ನು ಅಗೆದು ನಿಧಿಗಾಗಿ ಶೋಧ ಮಾಡಿದ್ದಾರೆ.  ನಿಧಿಗಳ್ಳರ ಹಾವಳಿಗೆ ಗರಗ, ತಡಕೋಡ್ ಖಾನಾಪೂರ, ಹಂಗರಕಿ, ತೆಗೂರು, ದುಬ್ಬನಮರಡಿ ಸೇರಿದಂತೆ‌ ಸುಮಾರು 10ಕ್ಕೂ ಹೆಚ್ಚು ಗ್ರಾಮಗಳ ಜನರು ಭಯ ಭೀತರಾಗಿದ್ದಾರೆ. ದೇವಸ್ಥಾನಕ್ಕೆ ಬರಲು ಭಕ್ತರು ಹಿಂಜರಿಯುತ್ತಿದ್ದಾರೆ. ಸದ್ಯ ಧಾರವಾಡ ಜಿಲ್ಲೆಯಲ್ಲಿ ನಿಧಿಗಳ್ಳರ ಹಾವಳಿ ದಿನದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಮದ ದೇವರ ಮೂರ್ತಿಗಳನ್ನೇ ಧ್ವಂಸ ಮಾಡಿ ನಿಧಿ ಶೋಧಕಾರ್ಯವನ್ನ ಮಾಡುತ್ತಿರೋದ್ರಿಂದ ದೇವರ ಶಾಪ ತಟ್ಟುತ್ತೆ ಅನ್ನೋ ಭಯದಲ್ಲಿದ್ದಾರೆ ಭಕ್ತರು. ಈ ಖತರ್ನಾಕ್ ನಿಧಿಗಳ್ಳರ ಗ್ಯಾಂಗನ್ನು ಪೊಲೀಸರು ಪತ್ತೆ ಹಚ್ಚಿ, ಹೆಡೆಮುರಿ ಕಟ್ಟಿ ಸ್ಥಳೀಯರ ಆತಂಕ ದೂರ ಮಾಡಬೇಕಿದೆ. 

ಇದನ್ನೂ ವೀಕ್ಷಿಸಿ: Weekly horoscope: ಈ ವಾರ ತುಳಸಿ ಹಬ್ಬವಿದ್ದು, ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ?