Uttara Kannada: ಶಿರಸಿಯಲ್ಲಿ ಸಂಭ್ರಮದ ಮಾರಿಕಾಂಬೆ ಜಾತ್ರಾ ಮಹೋತ್ಸವ

Mar 16, 2022, 10:54 AM IST

ಕಾರವಾರ(ಮಾ.16):  ಉತ್ತರ ಕನ್ನಡ ಜಿಲ್ಲೆಯ ಮಲೆನಾಡ ಮಡಿಲಲ್ಲಿ ನೆಲೆ ನಿಂತಿರುವ ಶಕ್ತಿ ದೇವತೆ ಮಾರಿಕಾಂಬಾ ದೇವಿಯ ಜಾತ್ರೆ ನಿನ್ನೆ(ಮಂಗಳವಾರ) ಯಿಂದ ಆರಂಭವಾಗಿದೆ.‌ ದಕ್ಷಿಣ ಭಾರತದಲ್ಲೇ ಅತೀ ದೊಡ್ಡ ಜಾತ್ರೆ ಎಂದು ಪ್ರಸಿದ್ಧಿ ಪಡೆದಿರುವ ಮಾರಿಕಾಂಬಾ ಜಾತ್ರೆ ಮಾರ್ಚ್ 15ರಿಂದ 23ರವರೆಗೆ ನಡೆಯಲಿದೆ. ನಿನ್ನೆ ರಾತ್ರಿ ದೇವಿಯ ಕಲ್ಯಾಣೋತ್ಸವ ನಡೆದಿತ್ತು. ಇಂದು ಮಾರಿಕಾಂಬೆ ಗರ್ಭಗುಡಿಯಿಂದ ಹೊರಬಂದು ಗದ್ದುಗೆಗೆ ಏರಲಿದ್ದು, ಬಳಿಕ ರಥೋತ್ಸವ ನಡೆಯಲಿದೆ. ನಂತರ 5 ದಿನಗಳ ಕಾಲ ಸೇವಾ ಕಾರ್ಯಗಳು ಜರಗಲಿದ್ದು, 23ರಂದು ದೇವಿ ಮತ್ತೆ ಗದ್ದೆಯಿಂದ ಗರ್ಭಗುಡಿಗೆ ನಿರ್ಗಮಿಸುತ್ತಾಳೆ. 

ಈಗಾಗಲೇ ದೇವಿಯ ರಥೋತ್ಸವದವರೆಗಿನ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಅಚ್ಚುಕಟ್ಟಾಗಿ ನಡೆದಿದ್ದು, ದೇವಿ ಗದ್ದುಗೆಗೆ ಏರುವ ಮಂಟಪವೂ ಕೂಡಾ ಉತ್ತಮವಾಗಿ ರಚನೆಯಾಗಿದೆ. ಕಳೆದ ನೂರಾರು ವರ್ಷಗಳಿಂದ ಪ್ರತಿ ಜಾತ್ರೆಗೂ ದೇವಿ ಮೆರವಣಿಗೆಗೆ ಮರದ‌ ನೂತನ ರಥ ನಿರ್ಮಾಣ ಮಾಡಲಾಗುತ್ತಿತ್ತು. ಆದ್ರೆ, ಇತ್ತೀಚಿಗೆ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಒಂದೆರಡು ಮರಗಳ ದಿಮ್ಮಿಗಳನ್ನು ತಂದು ದೇವಾಲಯದ ಮುಂದಿಟ್ಟು ಪೂಜೆ ಪುನಸ್ಕಾರ ನಡೆಸಿದ ಬಳಿಕ ಅದರ ಸಣ್ಣ ತುಂಡನ್ನು ದೇವಳದ ರಥದ ಗಾಲಿ ಅಥವಾ ಮುಂಭಾಗಕ್ಕೆ ಬಳಸಾಗುತ್ತದೆ. ಇದಕ್ಕೆ ದೇವಸ್ಥಾನದ ಬಾಬುದಾರರು ಹಾಗೂ ಪ್ರಧಾನ ಅರ್ಚಕರು ಮೊದಲೇ ನಿಗದಿಪಡಿಸಿದ ಮರಕ್ಕೆ ಕಚ್ಚು ಹಾಕಿ ಬಳಿಕ ತುಂಡರಿಸಿ ರಥಕ್ಕೆ ಉಪಯೋಗಿಸಲಾಗುತ್ತದೆ. ಸದ್ಯ ಎಲ್ಲಾ ಧಾರ್ಮಿಕ ಕೈಂಕರ್ಯಗಳು ಸಂಪನ್ನಗೊಂಡಿದ್ದು, ಸಂಭ್ರಮದ ಜಾತ್ರಾ ಮಹೋತ್ಸವಕ್ಕಾಗಿ ಸಕಲ ಸಿದ್ದತೆಗಳೂ ಪೂರ್ಣಗೊಂಡಿದೆ. 

Karwar: ಜನಪ್ರತಿನಿಧಿಗಳು, ಮೀನುಗಾರರ ಮಧ್ಯೆ ವಾಗ್ಯುದ್ಧ: ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ..!

ಶಿರಸಿಯ ಹೃದಯ ಭಾಗವಾಗಿರುವ ಬಿಡಕಿ ಬೈಲಲ್ಲಿ ದೇವಿಯ ಗದ್ದುಗೆಗೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಒಂದೆಡೆ ದೇವಿಯ ಜಾತ್ರೆಯ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿದ್ರೆ, ಮತ್ತೊಂದೆಡೆ ದೇವಿ ದರ್ಶನಕ್ಕೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉತ್ತಮ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದರೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪೊಲೀಸ್ ಇಲಾಖೆಯ ಪ್ರಕಾರ, ಈ ಬಾರಿ ಜಾತ್ರೆಗೆ 8ರಿಂದ 9 ಲಕ್ಷ ಭಕ್ತರು ಆಗಮಿಸಲಿದ್ದು, ಜಾತ್ರೆಯಲ್ಲಿ ಯಾವುದೇ ಗದ್ದಲ ಹಾಗೂ ಸಂಚಾರಿ ಸಮಸ್ಯೆಗೆ ಆಸ್ಪದ ನೀಡಬಾರದು ಎಂಬ ನಿಟ್ಟಿನಲ್ಲಿ 2 ಕೆಎಸ್‌ಆರ್‌ಪಿ  ತುಕಡಿ ಹಾಗೂ 4 ಡಿಎಆರ್ ತುಕಡಿಗಳ ಸಹಿತ 700ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇನ್ನು ಮಹಿಳೆಯರು, ಮಕ್ಕಳು ಹಾಗೂ ವಿಶೇಷ ಚೇತನರಿಗೆ ದರ್ಶನಕ್ಕೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ತಲಾ 20-20 ಮಹಿಳಾ ಮತ್ತು ಪುರುಷ ಪೊಲೀಸ್ ಸಿಬ್ಬಂದಿಯ ಎರಡು ತಂಡಗಳ ರಚನೆ ಮಾಡಲಾಗಿದೆ.