Feb 13, 2022, 11:40 AM IST
ನವದೆಹಲಿ (ಫೆ. 13): ಕರ್ನಾಟಕದಲ್ಲಿ ಭುಗಿಲೆದ್ದ ಹಿಜಾಬ್ ವಿವಾದ (Hijab Row) ದೇಶಾದ್ಯಂತ ಹರಡಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರೀ ಸದ್ದು ಮಾಡುತ್ತಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಈಗಾಗಲೇ ನಡೆದಿರುವ ಹಿಜಾಬ್ ವಿವಾದದ ವಿಚಾರಣೆಯಲ್ಲಿ ಸದ್ಯಕ್ಕೆ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ತನ್ನ ವಿಚಾರಣಾ ಪಟ್ಟಿಗೆ ಸೇರಿಸಿಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದೆ. ಈ ಮಧ್ಯೆ ಇಂತಹ ಯಾವುದೇ ಸಂಘರ್ಷಗಳಿಗೆ, ಧರ್ಮಸಂಕಟಗಳಿಗೆ ಭಾರತ ಮತ್ತೆ ಸಾಕ್ಷಿಯಾಗದ ಹಾಗೆ ಮಾಡೋಕೆ ಮೋದಿ ಸರ್ಕಾರ ಸಜ್ಜಾದ ಹಾಗೆ ಕಾಣಿಸುತ್ತಿದೆ.
ಇದನ್ನೂ ಓದಿ: Global remarks on hijab row: ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ, ವಿದೇಶಗಳಿಗೆ ಭಾರತದ ಖಡಕ್ ಎಚ್ಚರಿಕೆ
ದೇಶಾದ್ಯಂತ ಹಿಜಾಬ್ ಕುರಿತ ವಿವಾದ ಹೆಚ್ಚಾಗುತ್ತಿದ್ದಂತೆ ಏಕರೂಪ ನಾಗರಿಕ ಸಂಹಿತೆ ಸದ್ಯದ ತುರ್ತು. ಇದರ ಕುರಿತು ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎಂದು ಕೇಂದ್ರ ಸಚಿವ, ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಆಗ್ರಹಿಸಿದ್ದಾರೆ. ಹಿಜಾಬ್ ವಿವಾದ ದೇಶಕ್ಕೆ ಶಾಂತಿಯುತ ವಾತಾವರಣವನ್ನು ಹಾಳು ಮಾಡುತ್ತಿದೆ ಎಂದಿರುವ ಅವರು, ಈ ವಿವಾದವನ್ನು ಹಲವರು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಶಾಲೆಗಳಲ್ಲಿ ಹಿಜಾಬ್ ಧರಿಸುವ ಕುರಿತಾಗಿ ತರ್ಕರಹಿತ ವಾದಗಳನ್ನು ಮಾಡುತ್ತಿದ್ದಾರೆ. ಇಂತಹ ಜನರು ಮುಗ್ಧ ಬಾಲಕಿಯರನ್ನು ಮತಕ್ಕಾಗಿ ಬಲಿ ಕೊಡುತ್ತಿದ್ದಾರೆ. ಹಾಗಾಗಿ ಈ ಸಂದರ್ಭದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ತುರ್ತಾಗಿ ಜಾರಿಗೆ ತರಬೇಕಿದೆ. ಹಾಗಾಗಿ ಸಂಸತ್ತಿನ ಉಭಯ ಸದನಗಳಲ್ಲಿ ಈ ಕುರಿತು ಚರ್ಚೆ ನಡೆಸಬೇಕು’ ಎಂದು ಹೇಳಿದ್ದಾರೆ.
ಇನ್ನು ಉತ್ತರಾಖಂಡ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮರಳಿ ಗೆದ್ದು ಅಧಿಕಾರಕ್ಕೆ ಬಂದಲ್ಲಿ, ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಭರವಸೆ ನೀಡಿದ್ದಾರೆ. ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಗೆ ಬೇಡಿಕೆ ವ್ಯಕ್ತವಾಗುತ್ತಿರುವಾಗಲೇ ಬಿಜೆಪಿ ಆಡಳಿತದ ರಾಜ್ಯದ ಮುಖ್ಯಮಂತ್ರಿಯಿಂದಲೇ ಇಂಥದ್ದೊಂದು ಆಶ್ವಾಸನೆ ನೀಡಲಾಗಿದೆ. ಈ ಕುರಿತ ವರದಿ ಇಲ್ಲಿದೆ.