ಬಿಜೆಪಿ-ಬಿಎಸ್‌ಪಿಯ ಚುನಾವಣೋತ್ತರ ಮೈತ್ರಿ ಗೊಂದಲ, ಮಹತ್ವದ ಕರೆ ಕೊಟ್ಟ ಮಾಯಾವತಿ

Feb 26, 2022, 6:26 PM IST

ಉತ್ತರ ಪ್ರದೇಶ ರಾಜಕಾರಣದಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ ಸಂದರ್ಶನವೊಂದರಲ್ಲಿ ಕೊಟ್ಟ ಹೇಳಿಕೆ, ಹಾಗೂ ಅದಕ್ಕೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಕೊಟ್ಟ ಪ್ರತಿಕ್ರಿಯೆ ಭಾರೀ ಚರ್ಚೆ ಹುಟ್ಟು ಹಾಕಿದೆ. ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಹಾಗೂ ಬಿಎಸ್‌ಪಿಯ ಪ್ರಸ್ತುತತೆ ಹಾಗೇ ಉಳಿಯಬೇಕು ಎಂದು  ಅಮಿತ್ ಶಾ ಸಂದರ್ಶನವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಮಾಯಾವತಿ, ಶಾ ಸತ್ಯ ಒಪ್ಪಿಕೊಂಡಿರುವುದು ಅವರ ದೊಡ್ಡತನ ಎಂದು ನುಡಿದಿದ್ದರು.

 ಈ ಬೆಳವಣಿಗೆಗಳು ಬಿಜೆಪಿ ಹಾಗೂ ಬಿಎಸ್‌ಪಿಯ ಚುನಾವಣೋತ್ತರ ಮೈತ್ರಿಯ ಕಡೆ ಬೊಟ್ಟು ಮಾಡುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಇವುಗಳ ಬಗ್ಗೆ ಮತ್ತೆ ಪ್ರತಿಕ್ರಿಯಿಸಿರುವ ಮಾಯಾವತಿ, ಆ ಊಹಾಪೋಹಗಳನ್ನು ಅಲ್ಲಗಳೆದಿದ್ದಾರೆ.

UP Election: ಏನಿದು ಬಿಜೆಪಿ+ಬೆಹನ್‌ಜೀ ಹೊಗಳಿಕೆ ರಾಜಕಾರಣ ರಹಸ್ಯ.?

ನಮ್ಮದು ರಾಷ್ಟ್ರೀಯ ಪಕ್ಷ. ಅದು  ಯಾರದ್ದೇ ಎ ಟಿಂ- ಬೀ ಟೀಂ ಅಲ್ಲ, ನಮ್ಮ ಬೆಂಬಲಿಗರು ಹಾಗೂ ಮತದಾರರನ್ನು ದಾರಿತಪ್ಪಿಸುವ ಪ್ರಯತ್ನ ಇದಾಗಿದೆ ಎಂದು ಬೆಹೆನ್‌ಜೀ ಕಿಡಿಕಾರಿದ್ದಾರೆ. ಇಂತಹ ಹೇಳಿಕೆಗಳು ಕಾಂಗ್ರೆಸ್‌, ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳ ಜಾತಿವಾದಿ ಮನಸ್ಥಿತಿಯನ್ನು ತೋರಿಸುತ್ತೆ ಎಂದು ಮಾಯಾವತಿ  ವಾಗ್ದಾಳಿ ನಡೆಸಿದ್ದಾರೆ. ಇಂತಹ  ದ್ವಿಮುಖ ನೀತಿ ಹೊಂದಿರುವ ಪಕ್ಷಗಳಿಂದ ಜಾಗರೂಕರಾಗಿರುವಂತೆ ಮಾಯಾವತಿ ತಮ್ಮ ಬೆಂಬಲಿಗರು ಹಾಗೂ ಮತದಾರರಿಗೆ ಕರೆಕೊಟ್ಟಿದ್ದಾರೆ