ತಮಿಳುನಾಡಿನ 11 ಜಿಲ್ಲೆಗಳಲ್ಲಿ ವರುಣನ ಆರ್ಭಟ, ಜನಜೀವನ ಅಸ್ತವ್ಯಸ್ತ!

Nov 9, 2021, 11:17 AM IST

ಚೆನ್ನೈ(ನ.09): ತಮಿಳುನಾಡಿನ (Tamil Nadu) ಹನ್ನೊಂದು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ 2015ರ ಬಳಿಕ ಸುರಿದ ವರ್ಷಧಾರೆಯಿಂದ (Rain) ಜನರು ತತ್ತರಿಸಿದ್ದಾರೆ. ಈವರೆಗೆ ಐವರು ಮೃತಪಟ್ಟಿದ್ದು, ಇಪ್ಪತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಚೆನ್ನೈನ ಬಹುತೇಕ ರಸ್ತೆಗಳು, ಅಂಡರ್‌ಪಾಸ್‌ಗಳು ಜಲಾವೃತಗೊಂಡಿವೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ಜಲಾವೃತ ಆಡಂಬಾಕಂ ‍ಪೊಲೀಸ್ ಠಾಣೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಪರಿಹಾರ ಕಾರ್ಯಾಚರಣೆಗೆ ಚೆನ್ನೈ (Chennai) ಪಾಲಿಕೆಯು ಸುಮಾರು 23 ಸಾವಿರ ಸಿಬ್ಬಂದಿಯನ್ನು ನಿಯೋಜಿಸಿದೆ. ಮಳೆಯಿಂದ ಸಂತ್ರಸ್ತರಾಗಿರುವ 2 ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರವನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಚೆನ್ನೈನ 15 ವಲಯಗಳ ಮೇಲುಸ್ತುವಾರಿಗೆ 15 ಐಎಎಸ್ ಅಧಿಕಾರಿಗಳನ್ನು ಮುಖ್ಯಮಂತ್ರಿ ನಿಯೋಜಿಸಿದ್ದಾರೆ. 200 ವಿಶೇಷ ವೈದ್ಯಕೀಯ ಶಿಬಿರಗಳನ್ನು ತೆರೆಯಲಾಗಿದೆ. ತಗ್ಗು ಪ್ರದೇಶಗಳನ್ನು ಆವರಿಸಿರುವ ಕೆಸರು ಹಾಗೂ ಕಸವನ್ನು ತೆರವುಗೊಳಿಸಲು ಪಾಲಿಕೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.