Republic Day 2022: ಗಣರಾಜ್ಯೋತ್ಸವದಲ್ಲಿ ರಾರಾಜಿಸಲಿದೆ ಕರ್ನಾಟಕದ ಸ್ಥಬ್ಧಚಿತ್ರ: ಸತತ 13ನೇ ಬಾರಿಗೆ ಭಾಗಿ!

Jan 23, 2022, 10:28 AM IST

ನವದೆಹಲಿ (ಜ. 23): ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆ ಪೆರೇಡ್‌ನಲ್ಲಿ (Republic Day 2022) ರಾಜ್ಯವನ್ನು ಪ್ರತಿನಿಧಿಸಲಿರುವ ‘ಕರ್ನಾಟಕ: ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು’ ಎಂಬ ವಿಷಯಾಧಾರಿತ ರಾಜ್ಯದ ಸ್ತಬ್ಧಚಿತ್ರದ ಸಿದ್ಧತಾ ಕಾರ್ಯ ಪೂರ್ಣಗೊಂಡಿದ್ದು, ತಾಲೀಮು ನಡೆಯುತ್ತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೇಲುಸ್ತುವಾರಿಯಲ್ಲಿ ಟ್ಯಾಬ್ಲೋ ನಿರ್ಮಾಣ ಕಾರ್ಯ ಯಶಸ್ವಿಯಾಗಿ ನೆರವೇರಿದ್ದು ಗಣರಾಜ್ಯೋತ್ಸವದಂದು ರಾಜ್ಯದ ಕರಕುಶಲ ವೈಭವ ಅನಾವರಣಗೊಳ್ಳಲಿದೆ.

ಗಣರಾಜ್ಯೋತ್ಸವ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ವಿಶಾಲ ಮೈಸೂರು ರಾಜ್ಯ (ಕರ್ನಾಟಕ ರಾಜ್ಯ) ಪಾಲ್ಗೊಳ್ಳಲು ಮೊದಲು ಪ್ರಾರಂಭಿಸಿದ್ದು 1972ರಲ್ಲಿ. ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸ್‌ ಅವರು ಈ ಜವಾಬ್ದಾರಿಯನ್ನು ವಾರ್ತಾ ಮತ್ತು ಪ್ರಚಾರ ಇಲಾಖೆಗೆ ವಹಿಸಿದ್ದರು. ಅಂದಿನಿಂದ ಇಂದಿನವರೆಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೇ ರಾಜ್ಯ ಸರ್ಕಾರದ ಪರವಾಗಿ ಸ್ತಬ್ಧಚಿತ್ರ ನಿರ್ಮಾಣ ಹಾಗೂ ಪ್ರದರ್ಶನದ ಕಾರ್ಯವನ್ನು ನಿರ್ವಹಿಸುತ್ತಿದೆ. ಇದೀಗ ಭಾರತ ಸ್ವಾತಂತ್ರ್ಯದ ಅಮೃತ ವರ್ಷ ಮಹೋತ್ಸವ ವರ್ಷದಲ್ಲಿ ನವದೆಹಲಿಯಲ್ಲಿನ ಗಣರಾಜ್ಯೋತ್ಸವ ದಿನಾಚರಣೆಯ ಸಂಭ್ರಮದಲ್ಲಿ ಕರ್ನಾಟಕದ ಪಾಲ್ಗೊಳ್ಳುವಿಕೆ 50ನೇ ವರ್ಷದ್ದಾಗಿದೆ.

ಇದನ್ನೂ ಓದಿ: Republic Day 2022: ರಾಜ್‌ಪಥ್‌ನಲ್ಲಿ ಸಂಚರಿಸಲಿದೆ ಬೆಂಗಳೂರಲ್ಲೇ ತಯಾರಾದ ಡಿಆರ್‌ಡಿಓ ಸ್ತಬ್ಧಚಿತ್ರ!

ಈ ಬಗ್ಗೆ ಮಾಹಿತಿ ನೀಡಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ.ಎಸ್‌.ಹರ್ಷ ಸ್ತಬ್ಧಚಿತ್ರದ ಹೂರಣವನ್ನು ತಿಳಿಸಿದ್ದಾರೆ. ಈ ಬಾರಿಯ ಸ್ತಬ್ದಚಿತ್ರ ನಿರ್ಮಾಣ ಕಾರ್ಯದಲ್ಲಿ ಹೆಸರಾಂತ ಕಲಾ ನಿರ್ದೇಶಕ ಶಶಿಧರ ಅಡಪ ನೇತೃತ್ವದ ಪ್ರತಿರೂಪಿ ಸಂಸ್ಥೆಯ ಒಂದು ನೂರಕ್ಕೂ ಹೆಚ್ಚು ಕಲಾವಿದರು, ಸುಪ್ರಸಿದ್ಧ ಸಂಗೀತ ನಿರ್ದೇಶಕ ಪ್ರವೀಣ್‌ ದಯಾನಂದ ರಾವ್‌ ಮತ್ತು ತಂಡ ಹಾಗೂ ಜಾನಪದ ತಜ್ಞ ಡಾ. ರಾಧಾಕೃಷ್ಣ ಉರಾಳ ನೇತೃತ್ವದ ಕಲಾ ಕದಂಬ ಕಲಾ ಕೇಂದ್ರದ ತಂಡವೂ ಶ್ರಮಿಸಿದೆ ಎಂದು ಹೇಳಿದ್ದಾರೆ.