Police with People : ಮಾಲೀಕರ ಮುಖದಲ್ಲಿ ಸಂತಸ ಉತ್ತರ ಕನ್ನಡ ಪೊಲೀಸರ ಮಹತ್ಕಾರ್ಯ

Dec 17, 2021, 9:08 PM IST

ಕಾರವಾರ(ಡಿ. 17) ಉತ್ತರ ಕನ್ನಡ (Uttara Kannada)  ಜಿಲ್ಲೆಯಲ್ಲಿ 2020-21ರ ಸಾಲಿನಲ್ಲಿ ನಡೆದ ಹಲವು ಪ್ರಕರಣಗಳ ಪೈಕಿ ಶೇ. 50ರಷ್ಟು ಪ್ರಕರಣ ಬೇಧಿಸಿರುವ ಜಿಲ್ಲಾ ಪೊಲೀಸರು, ಕಳ್ಳತನವಾಗಿದ್ದ (Robbery) ಮೌಲ್ಯಯುತ ಸೊತ್ತುಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಸುಮಾರು 75 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ಹಸ್ತಾಂತರಿಸಿದ್ದು, ಕಳೆದುಕೊಂಡ ಸೊತ್ತುಗಳನ್ನು ಮರಳಿ ಪಡೆದವರು ಪೊಲೀಸರ ಕಾರ್ಯ ಶ್ಲಾಘಿಸಿದ್ದಾರೆ.

Drive Against Drug Menace: ಹೊಸ ವರ್ಷಕ್ಕೂ ಮುನ್ನ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸ್ ಸಮರ

ಉತ್ತರಕನ್ನಡ ಜಿಲ್ಲೆಯಲ್ಲಿ 2020-21ರ ಸಾಲಿನಲ್ಲಿ ನಡೆದ18 ಮರ್ಡರ್ ಪ್ರಕರಣಗಳು ಸೇರಿದಂತೆ ಬರೋಬ್ಬರಿ 204 ಪ್ರಕರಣಗಳ ಪೈಕಿ 97 ಪ್ರಕರಣಗಳ‌ನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಸಫಲರಾಗಿದ್ದಾರೆ. ವಶಪಡಿಸಿಕೊಂಡ ಚಿನ್ನ, ಬೆಳ್ಳಿಯ ಆಭರಣ, ಇತರ ಸೊತ್ತುಗಳು, ನಗದು ಹಾಗೂ ದ್ವಿಚಕ್ರ ವಾಹನಗಳನ್ನು ಇದೀಗ ಅದರ ಮಾಲಕರಿಗೆ ಹಸ್ತಾಂತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ  ಕಾರವಾರದ ಡಿಎಆರ್ ಪರೇಡ್ ಗ್ರೌಂಡ್‌ನಲ್ಲಿ ಪ್ರಾಪರ್ಟಿ ರಿಟರ್ನ್ ಪರೇಡ್ ಆಯೋಜಿಸಿದ ಪೊಲೀಸ್ ಇಲಾಖೆ ಸಾಂಕೇತಿಕವಾಗಿ 10 ಜನರಿಗೆ ಅವರ ಸೊತ್ತುಗಳನ್ನು ಹಿಂತಿರುಗಿಸಿದೆ. ಸಿದ್ದಾಪುರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 55,000ರೂ., ಶಿರಸಿಯ ಸಿಪಿ ಬಜಾರ್‌ನಲ್ಲಿ ಗ್ರಾಹಕರ ಸೋಗಿನಲ್ಲಿ ಕಳ್ಳರು ಎಗರಿಸಿದ ಎರಡು ಚಿನ್ನದ ಸರ, ಮಾರಿಕಾಂಬಾ ದೇವಸ್ಥಾನದ ಬಳಿ ಉಷಾ ಪೈ ಅವರಿಂದ ಕಳ್ಳರು ಎಗರಿಸಿದ್ದ ಚಿನ್ನದ ಸರ ಹಿಂದಿರುಗಿಸಲಾಗಿದೆ.

ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಎಎಸ್‌ಐ ನಾರಾಯಣ ಜೋಗಿ ಮಡಿವಾಳ, ಸಿ.ಹೆಚ್.ಸಿ ರಾಮಾ ಎಮ್. ಕುದ್ರಗಿ, ಸಿ.ಹೆಚ್.ಸಿ ಕರಬಸಪ್ಪ ಇಂಗಳಸೂರ, ಸಿ.ಹೆಚ್.ಸಿ ರಮೇಶ ಕೂಡಲ, ಸಿ.ಪಿ.ಸಿ ಯಶ್ವಂತ ಬಿಳಗಿ, ಸಿ.ಪಿ.ಸಿ ಮೋಹನ ಗಾವಡಿ ಅವರಿಗೆ ನಗದು ಬಹುಮಾನ ಹಾಗೂ ಪ್ರಸಂಶನಾ ಪತ್ರ ನೀಡಿ ಗೌರವಿಸಲಾಯಿತು.