Davanagere Crime: ಶಾದಿ ಮರ್ಡರ್: ನಿಖಾ ಆಗಲಿಲ್ಲ ಅಂತ ಚಿಕ್ಕಮ್ಮನ ಮಗಳನ್ನೇ ಕೊಂದು ಬಿಟ್ಟ!

Dec 24, 2022, 5:59 PM IST

ದಾವಣಗೆರೆ (ಡಿ.24): ಆಕೆ ನೋಡಲು ಸುಂದರ ಯುವತಿ, ಹುಟ್ಟಿದ್ದು ಬಡತನ ಕುಟುಂಬದಲ್ಲಿ, ಬಡತನದಲ್ಲೂ ಕಷ್ಟ ಪಟ್ಟು ಓದಿ ಎಂಕಾಂ ಪದವಿ ಪಡೆದಿದ್ದಳು. ಸುಂದರ ಭವಿಷ್ಯಕ್ಕಾಗಿ ಸಿಎ ತರಬೇತಿ ಸಹ ಪಡೆಯುತ್ತಿದ್ದಳು. ಮುಂದಿನ ತಿಂಗಳು ಸಹೋದ್ಯೋಗಿ ಜೊತೆಯಲಿ ಮದುವೆ ಕೂಡ ನಿಶ್ಚಯವಾಗಿತ್ತು. ಸುಖ ದಾಂಪತ್ಯ ಜೀವನದ ಕನಸು ಕಾಣುತ್ತಿದ್ದ ಆ ಯುವತಿ ಬಾಳಲ್ಲಿ ಓರ್ವ ಸೈಕೊ ಕಿರಾತಕ ಎಂಟ್ರಿ ಕೊಟ್ಟು ಅವಳ ಉಸಿರನ್ನೆ ನಿಲ್ಲಿಸಿದ್ದಾನೆ.

ಹೌದು ಮೆಹಂದಿ ಹಚ್ಚಿ ಹಸೆಮಣೆ ಏರಬೇಕಿದ್ದ ಆ ಯುವತಿ ರಕ್ತದ ಮಡುವಿನಲ್ಲಿ ಬಿದ್ದು ಮಣ್ಣಲ್ಲಿ ಮಣ್ಣಾಗಿದ್ದಾಳೆ. ಆ ಯುವತಿಯ ದುರಂತ ಕತೆ ಕುರಿತ ಸ್ಟೋರಿ ಇದು...! ಮೆಹಂದಿ ಹಾಕಿಕೊಂಡು, ಎಲ್ಲ ಹೆಣ್ಣು ಮಕ್ಕಳಂತೆ ಸಿಂಗಾರಗೊಂಡು ಹಸೆಮಣೆ ಏರಿ ಗಂಡ ಕಟ್ಟುವ ತಾಳಿಗೆ ಕೊರಳೊಡ್ಡಬೇಕು ಎಂಬ ಕನಸು ಕಾಣುತ್ತಿದ್ದ ಸುಂದರಿ ಆಕೆ. ಮಧುರ ಕನಸಿನಲ್ಲಿ ತೇಲುತ್ತಿದ್ದ ಆ ಯುವತಿ ಬಾಳಲ್ಲಿ ಓರ್ವ ಸೈಕೊ  ಎಂಟ್ರಿಯಾಗಿದೆ. ಆ ಕಿರಾತಕನ ಹುಚ್ಚುತನಕ್ಕೆ ಆ ಸುಂದರ ಯುವತಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಉಸಿರು ಚೆಲ್ಲಿದ್ದಾಳೆ.

ಕಷ್ಟಪಟ್ಟು ಜೀವನ ಕಟ್ಟಿಕೊಳ್ಳುತ್ತಿದ್ದ ಜೀವಕ್ಕೆ ಬೆಂಕಿ: ಆಕೆ ಹೆಸರು ಚಾಂದ್ ಸುಲ್ತಾನಾ  ವಯಸ್ಸು 28. ಬೆಣ್ಣೆನಗರಿ ದಾವಣಗೆರಯ ವಿನೋಬ ನಗರದ ನಿವಾಸಿಯಾಗಿದ್ದಾಳೆ. ಕಡುಬಡತನದಲ್ಲಿ ಹುಟ್ಟಿ ಬೆಳೆದ ಈಕೆ ಕಷ್ಟ ಪಟ್ಟು ಓದಿ ಎಂಕಾಂ ಪದವಿ ಪಡೆದಿದ್ದಳು. ನಗರದ ತೆರಿಗೆ ಸಲಹೆಗಾರ ಕೆ. ಮಹ್ಮದ್ ಭಾಷಾ ಕಡೆ ಚಾರ್ಟೆಡ್‌ ಅಕೌಂಟೆಂಟ್‌ (ಸಿಎ)ಗಾಗಿ ತೆರಬೇತಿ ಪಡೆಯುತ್ತಿದ್ದಳು. ಮುಂದಿನ ತಿಂಗಳಷ್ಟೆ ತನ್ನ ಸಹೋದ್ಯೋಗಿಯೊಂದಿಗೆ ಮದುವೆ ಕೂಡ ನಿಶ್ಚಯವಾಗಿತ್ತು. ಮದುವೆ ಕನಸು ಕಾಣುತ್ತಿದ್ದಾಕೆಯ ಬಾಳಿಗೆ ಕಿರಾತಕ ಕೊಳ್ಳಿ ಇಟ್ಟಿದ್ದಾನೆ. ಈತನ ಹೆಸರು ಸಾದತ್ ಅಲಿಯಾಸ್ ಚಾಂದ್ ಪೀರ್. ಮೂಲತಃ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದವನು. ಯುವತಿಯನ್ನು ಮಾತನಾಡಿಸುವ ನೆಪ ಮಾಡಿ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದಾನೆ.

Davanagere crime: ಪ್ರೀತಿ ನಿರಾಕರಿಸಿದ ಯವತಿಯನ್ನು ನಡುರಸ್ತೆಯಲ್ಲೇ ಕತ್ತು ಸೀಳಿ ಕೊಂದು, ವಿಷ ಸೇವಿಸಿದ ಪಾಗಲ್ ಪ್ರೇಮಿ

ಮದುವೆ ಮಾಡಿಕೊಳ್ಳಲು ಒಪ್ಪದ ಸಾದತ್: ಮೃತ ಯುವತಿ ಚಾಂದ್ ಸುಲ್ತಾನಾ ಹಾಗೂ ಆರೋಪಿ ಸಾದತ್ ಇಬ್ಬರು ಸೋದರ ಸಂಬಂಧಿಗಳು. ಕಳೆದ 5 ವರ್ಷಗಳ ಹಿಂದೆ ಇವರಿಬ್ಬರ ಮದುವೆ ಮಾಡಲು ಯುವತಿ ಮನೆಯವರು ನಿರ್ಧಾರ ಮಾಡಿದ್ದರು. ಅದರಂತೆ ಕೆಲ ಸಮಾಜದ ಮುಖಂಡರ ಸೇರಿ ಸಾದತ್ ಮನೆಗೆ ಹೋಗಿ ಆತನ ಕುಟುಂಬದ ಸದಸ್ಯರ ಬಳಿ ಮದುವೆ ಪ್ರಸ್ತಾಪ ಮಾಡಿದ್ದಾರೆ. ಆ ವೇಳೆ ಸಾದತ್ ಮತ್ತು ಆತನ ಮನೆಯವರು ಈ ಮದುವೆಗೆ ಸಮ್ಮತಿ ನೀಡಲಿಲ್ಲ. ಸುಮಾರು ನಾಲ್ಕೈದು ಬಾರಿ ಈ ಮದುವೆ ಮಾತುಕತೆ ನಡೆಸಿ ಯುವತಿ ಮನೆಯವರು ವಿಫಲರಾಗಿದ್ದರು.

ಸಹೋದ್ಯೋಗಿ ಜೊತೆ ಮದುವೆ ನಿಶ್ಚಯ: ತಮ್ಮ ಮಗಳನ್ನು ಮದುವೆ ಮಾಡಿಕೊಳ್ಳಲು ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಬೇರೆ ಕಡೆ ಕೊಟ್ಟು ಮದುವೆ ಮಾಡುವುದಾಗಿ ಸಾದತ್‌ ಅವರ ಮನೆಯವರಿಗೆ ಯುವತಿ ಮನೆಯವರು ತಿಳಿಸಿದ್ದಾರೆ. ಇದಕ್ಕೆ ಸಾದತ್ ಮತ್ತು ಆತನ ಮನೆಯವರು ಒಪ್ಪಿಗೆಯನ್ನು ಸೂಚಿಸಿದ್ದರು. ಅದರಂತೆ ಕುಟುಂಬಸ್ಥರು ಚಾಂದ್ ಮದುವೆಯನ್ನು ಅವಳ ಸಹೋದ್ಯೋಗಿ ಜೊತೆ ನಿಶ್ಚಯಿಸಿದ್ದಾರೆ. ಆದರೆ ಕಳೆದ ಕೆಲ ತಿಂಗಳುಗಳಿಂದ ಮತ್ತದೇ ಸಾದತ್ ನೀನು ನನ್ನನ್ನೇ ಮದುವೆಯಾಗಬೇಕು ಅಂತ ಯುವತಿ ಹಿಂದೆ ಬಿದ್ದಿದ್ದನು. ಆದರೆ ಆಕೆ ಇವನ ಬಗ್ಗೆ, ತಲೆಕೆಡಿಸಿಕೊಂಡಿಲ್ಲ. ಆದರೆ ಇಂದು ಏಕಾಏಕಿ ಚಾಂದ್ ಸುಲ್ತಾನಾಳನ್ನು ಕತ್ತು ಸೀಳಿ ಕೊಲೆ ಮಾಡಿ ಬಿಟ್ಟಿದ್ದಾನೆ.

Davanagere: ಅನಧಿಕೃತವಾಗಿ ವನ್ಯಜೀವಿಗಳ ಸಾಕಾಣಿಕೆ: ಮಾಜಿ ಸಚಿವ ಮಲ್ಲಿಕಾರ್ಜುನ್ ಫಾರ್ಮ್‌ ಹೌಸ್‌ ಮೇಲೆ ಸಿಸಿಬಿ ಪೊಲೀಸರ ದಾಳಿ

ತನ್ನ ಕೊಲೆಯ ಬಗ್ಗೆ ತಿಳಿಯುವ ಮೊದಲೇ ಪ್ರಾಣಪಕ್ಷಿ ಹಾರಿ ಹೋಗಿತ್ತು: ಆರೋಪಿ ಸಾದತ್ ತನ್ನ ಮನೆಯಲ್ಲಿ ಚಾಂದ್ ಸುಲ್ತಾನಾಳನ್ನು ಕೊಲೆ ಮಾಡುವುದಾಗಿ ಹೇಳಿ ಹೋಗಿದ್ದನು. ಈ ವಿಷಯವನ್ನು ಆರೋಪಿ ಕುಟುಂಬಸ್ಥರು ಚಾಂದ್ ಸಂಬಂಧಿಕರಿಗೆ ತಿಳಿಸಿದ್ದಾರೆ. ವಿಷಯ ಚಾಂದ್ ಸುಲ್ತಾನಾಳನ್ನು ತಲುಪುವ ಹೊತ್ತಿಗೆ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮತ್ತೊಂದೆಡೆ ಚಾಂದ್ ಉಸಿರು ನಿಲ್ಲಿಸಿದ ಆರೋಪಿ ಸಾದತ್ ಕೊಲೆ ಮಾಡಿದ ನಂತರ ತಾನು ಸಹ ವಿಷ ಸೇವಿಸಿ  ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಆರೋಪಿಗೆ ನಗರದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನು ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ‌. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಬಡಾವಣೆ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಳಿ ಬದುಕ ಬೇಕಾದ  ಚಿನ್ನದಂತಹ ಹುಡುಗಿ ದುಷ್ಟನ ಕೈಗೆ ಸಿಕ್ಕು ಕೊಲೆಯಾಗಿ ದುರಂತ ಅಂತ್ಯ ಕಂಡಿದ್ದು ಮಾತ್ರ  ದೊಡ್ಡ ಅನ್ಯಾಯ.