Feb 16, 2022, 1:04 PM IST
ಕೊಡಗು(ಫೆ.16): ಕೊಡಗು ಜಿಲ್ಲೆಯಲ್ಲಿ ಮಹಿಳೆಯರು ವಾಸ ಮಾಡುವ ಒಂಟಿ ಮನೆಗಳನ್ನು ದರೋಡೆಕೋರರು ಟಾರ್ಗೆಟ್ ಮಾಡುತ್ತಿದ್ದಾರೆ. ಇದೀಗ ಮತ್ತೊಂದು ಬೆಚ್ಚಿ ಬೀಳುವ ಘಟನೆ ನಡದಿದ್ದು, ಸಹೋದರಿಯರನ್ನು ಕಟ್ಟಿ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಇಬ್ಬರು ಸಹೋದರಿಯರಾದ ಜಾನಕ್ಕಿ ಹಾಗೂ ಅಮ್ಮಕ್ಕಿ ವಾಸಮಾಡುತ್ತಿದ್ದ ಮನೆಗೆ ಮಧ್ಯರಾತ್ರಿ ಮನೆಯ ಬಾಗಿಲು ಮುರಿದು ಒಳ ಬಂದ ಕಳ್ಳರು ಇಬ್ಬರನ್ನೂ ಕಟ್ಟಿಹಾಕಿ ಹಣ ಚಿನ್ನಾಭರಣಗಳನ್ನು ದೋಚಿದ್ದಾರೆ. ಎರಡೂವರೆ ಲಕ್ಷ ನಗದು ಹಾಗೂ ಮೂರುವರೆ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಮನೆಯ ಮೂಲೆ ಮೂಲೆಯನ್ನು ತಡಕಾಡಿದ ದುಷ್ಕರ್ಮಿಗಳು ಬ್ಯಾಂಕ್ ಪಾಸ್ ಬುಕ್ ಸೇರಿದಂತೆ ಇನ್ನತರ ವಸ್ತುಗಳನ್ನು ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ. ಬೆಳಗ್ಗಿನ ವೇಳೆಗೆ ಇಬ್ಬರು ಮಹಿಳೆಯರು ಕೈಕಾಲಿಗೆ ಕಟ್ಟಿದ್ದನ್ನು ಬಿಡಿಸಿಕೊಂಡು ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ.
ಕೋರ್ಟ್ ಆದೇಶಕ್ಕೂ ಡೋಂಟ್ ಕೇರ್: 'ಹಿಜಾಬ್, ಬುರ್ಕಾ ಧರಿಸಿಯೇ ಕ್ಲಾಸ್‌ನಲ್ಲಿ ಕೂರ್ತಿವಿ'
ಇನ್ನೂ ಈ ಮಹಿಳೆಯರು ನಮ್ಮ ಜೀವಕ್ಕ ಏನು ಮಾಡಬೇಡಿ. ಎಲ್ಲಾ ಹಣ, ಚಿನ್ನಾಭರಣ ತೆಗೆದುಕೊಂಡು ಹೋಗಿ ಎಂದು ಬೇಡಿಕೊಂಡ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ದುಷ್ಕರ್ಮಿಗಳು ಮನೆಯಲ್ಲಿದ್ದ ಮದ್ಯ ಸೇವನೆ ಮಾಡಿ ಟಿವಿ ವೀಕ್ಷಣೆ ಮಾಡಿದ್ದಾರೆ. ಇವರಿಬ್ಬರು ನಿವೃತ್ತ ನ್ಯಾಯಾಧೀಶರಾದ ಬೋಪಯ್ಯ ಅವರ ಸಹೋದರಿಯರಾಗಿದ್ದಾರೆ. ಬೋಪಯ್ಯ ಅವರು ಬೆಂಗಳೂರಿನಲ್ಲಿ ನೆಲಸಿದ್ದು ಸಹೋದರಿಯರು ತೋಟ ನೋಡಿಕೊಂಡು ಈ ಮನೆಯಲ್ಲಿ ವಾಸವಾಗಿದ್ದಾರೆ. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯಲ್ಲಿ ಸ್ಥಳೀಯರ ಕೈವಾಡ ವಿರಬಹುದು. ಈ ಹಿಂದೆ ಇಂತಹ ಘಟನೆ ನಡೆದಿದ್ದು ದರೋಡೆಕೋರರನ್ನು ಇನ್ನೂ ಬಂಧಿಸಲಾಗಿಲ್ಲ. ಆದ್ದರಿಂದ ನಮಗೆ ರಕ್ಷಣೆ ಕೊಡಿ ಎಂದು ಗ್ರಾಮಸ್ಥರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.