
ಏಷ್ಯಾಕಪ್ ಟೂರ್ನಿ ಮುಗಿದು ಮೂರು ದಿನ ಕಳೆದಿದೆ. ಹೀಗಿದ್ದೂ ಚಾಂಪಿಯನ್ ಭಾರತಕ್ಕೆ ಇನ್ನೂ ಟ್ರೋಫಿ ಸಿಕ್ಕಿಲ್ಲ. ಏಷ್ಯಾಕಪ್ ಫೈನಲ್‌ನಲ್ಲಿ ಬದ್ದ ಎದುರಾಳಿ ಪಾಕಿಸ್ತಾವನ್ನು ಮಣಿಸಿದ ಟೀಂ ಇಂಡಿಯಾ ಒಂಬತ್ತನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಆದ್ರೆ ಪಾಕಿಸ್ತಾನದ ಗೃಹ ಸಚಿವ ಹಾಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಟೀಂ ಇಂಡಿಯಾ ನಿರಾಕರಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ.
ಟ್ರೋಪಿ ನಾನೇ ನೀಡಬೇಕು ಎಂದು ಹಠಕ್ಕೆ ಬಿದ್ದಂತೆ ವರ್ತಿಸಿದ ಮೊಹ್ಸಿನ್ ನಖ್ವಿಗೆ ಕೊನೆಗೂ ದುಬೈ ಸ್ಟೇಡಿಯಂನಲ್ಲಿ ಮುಖಭಂಗವಾಯಿತು. ಇದಾದ ಮೇಲೆ ಟ್ರೋಫಿ ಹಾಗೂ ಮೆಡಲ್ ಸಮೇತ ನಖ್ವಿ ಮೈದಾನ ತೊರೆದು ಹೊಟೆಲ್‌ಗೆ ಹೋಗಿದ್ದರು. ಇದಾದ ಮೇಲೆ ಭಾರತ ಟ್ರೋಪಿ ಇಲ್ಲದೇ ಸಂಭ್ರಮಾಚರಣೆ ಮಾಡಿತ್ತು. ಇನ್ನು ನಖ್ವಿಯ ಹಠಮಾರಿ ನಡೆಯನ್ನು ಟೀಂ ಇಂಡಿಯಾ ಆಟಗಾರರು ಹಾಗೂ ಬಿಸಿಸಿಐ ಖಂಡಿಸಿತ್ತು.
ಇದೆಲ್ಲದರ ಹೊರತಾಗಿಯೂ ತಮ್ಮ ಮೊಂಡು ವಾದ ಮುಂದುವರೆಸಿರುವ ನಖ್ವಿ, ದುಬೈನಲ್ಲಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ಸೂರ್ಯಕುಮಾರ್ ಯಾದವ್ ಬಂದು 2025ರ ಏಷ್ಯಾಕಪ್ ಟ್ರೋಫಿ ಹಾಗೂ ಮೆಡಲ್‌ಗಳನ್ನು ಸ್ವೀಕರಿಸಲಿ ಎಂದು ಹೇಳಿದ್ದಾರೆ.