Murugha Mutt Row: ವಿಚಾರಣೆ ವೇಳೆ ಮುರುಘಾ ಶ್ರೀಗಳದ್ದು ಮಾತಿಲ್ಲ, ಕಥೆಯಿಲ್ಲ, ಬರಿ ಮೌನ!

Sep 3, 2022, 4:46 PM IST

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಮುರುಘಾ ಶರಣರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಪೊಲೀಸರ ಪ್ರಶ್ನೆಗಳಿಗೆ ಮುರುಘಾ ಶರಣರು ತುಟಿ ಬಿಚ್ಚುತ್ತಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಮುರುಘಾ ಶರಣರು ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಮೌನಕ್ಕೆ ಶರಣಾಗಿದ್ದಾರೆ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ. ಸದ್ಯ ಶಿವಾಚಾರ್ಯರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ನ್ಯಾಯಾಲಯ ನಾಲ್ಕು ದಿನಗಳ ಕಾಲ ವಿಚಾರಣೆಗಾಗಿ ಶರಣರನ್ನು ಪೊಲೀಸ್‌ ಕಸ್ಟಡಿಗೆ ನೀಡಿದೆ. ಇಂದು ಕಸ್ಟಡಿಯ ಎರಡನೇ ದಿನವಾಗಿದ್ದು, ಪೊಲೀಸರ ಪ್ರಶ್ನೆಗಳಿಗೆ ಉತ್ತರಗಳು ಇನ್ನೂ ಸಿಕ್ಕಿಲ್ಲ. ಹೀಗಾಗಿ ಕಸ್ಟಡಿಯನ್ನು ಮುಂದುವರೆಸುವಂತೆ ಪೊಲೀಸರು ಮನವಿ ಮಾಡುವ ಸಾಧ್ಯತೆಯಿದೆ. 

ಶರಣರಿಗೆ ಪುರುಷತ್ವ ಪರೀಕ್ಷೆ:

ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಶಿವಾಚಾರ್ಯ ಶರಣರ ಪುರುಷತ್ವ ಪರೀಕ್ಷೆ ಮಾಡಿದ್ದಾರೆ. ವರದಿಯಲ್ಲಿ ಶರಣರು ಗಂಡಸತ್ವ ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ. ಶರಣರ ಡಿಎನ್‌ಎ, ರಕ್ತ, ಮೂತ್ರ, ಕೂದಲು ಸೇರಿದಂತೆ ಹಲವು ಸ್ಯಾಂಪಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಪಡೆದಿದೆ. 

ಇದನ್ನೂ ಓದಿ: Murugha Sri case: ಪುರುಷತ್ವ ಪರೀಕ್ಷೆ ಎಂದರೇನು ? ಟೆಸ್ಟ್ ಯಾವ ರೀತಿ ನಡೆಯುತ್ತೆ ?

ಮೂಲಗಳ ಪ್ರಕಾರ, ನಿನ್ನೆ ಸಂಜೆಯೇ ಶಿವಾಚಾರ್ಯರಿಗೆ ಪುರುಷತ್ವ ಪರೀಕ್ಷೆ (Shivacharya Seer undergoes fertility test) ನಡೆಸಲಾಗಿತ್ತು. ಇಂದು ಬೆಳಗ್ಗೆಯೇ ಈ ಸಂಬಂಧ ವರದಿಯನ್ನು ಕೂಡ ನೀಡಲಾಗಿದೆ. ಉಳಿದ ಮಾದರಿಗಳನ್ನು ಮಡಿವಾಳದ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಈ ಹಿಂದೆ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿ ಪುರುಷನಲ್ಲ ಎಂದು ಅಫಿಡವಿಟ್‌ ಸಲ್ಲಿಸಿದರೆ ಮಾತ್ರ ಪರೀಕ್ಷೆಗೊಳಪಡಿಸಲಾಗುತ್ತಿತ್ತು. ನಿತ್ಯಾನಂದ ಪ್ರಕರಣದಲ್ಲಿ ಇದೇ ರೀತಿ ಅಫಿಡವಿಟ್‌ ಸಲ್ಲಿಕೆಯ ನಂತರ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು. ಅಸಾರಾಂ ಬಾಪುವನ್ನು ಕೂಡ ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಗಿತ್ತು. 

ಇದನ್ನೂ ಓದಿ: Murugha Sri case: ಮುರುಘಾ ಶರಣರಿಗೆ ಪುರುಷತ್ವ ಪರೀಕ್ಷೆ, ವರದಿಯಲ್ಲಿ ಗಂಡಸ್ತನ ಸಾಬೀತು

ಆದರೆ ಇತ್ತೀಚಿನ ಪ್ರಕರಣಗಳಲ್ಲಿ, ಕಡ್ಡಾಯವಾಗಿ ಪುರುಷತ್ವ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞ ಡಾ. ಗಿರೀಶ್‌ ಏಷ್ಯಾನೆಟ್‌ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಮುರುಘಾ ಶರಣರ ಪುರುಷತ್ವ ಪರೀಕ್ಷೆ ನಡೆಸಲಾಗಿದೆ.