Apr 13, 2023, 8:22 PM IST
ನಟ ರಮೇಶ್ ಅರವಿಂದ್ ಅಭಿನಯದ ಪತ್ತೇದಾರಿ ಸಿನಿಮಾ 'ಶಿವಾಜಿ ಸುರತ್ಕಲ್'ನ ಮುಂದುವರೆದ ಭಾಗ 'ಶಿವಾಜಿ ಸುರತ್ಕಲ್-ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿʼ ಸಿನಿಮಾ ಇದೇ ಶುಕ್ರವಾರ (ಏಪ್ರಿಲ್ 14) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ಮಿಸಿದ್ದಾರೆ. ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. 2020ರಲ್ಲಿ ಬಿಡುಗಡೆಯಾದ ಮೊದಲ ಭಾಗದಂತೆಯೇ ಈ ಚಿತ್ರವು ಸಹ ಒಂದು ಮರ್ಡರ್ ಮಿಸ್ಟ್ರಿಯಾಗಿದೆ. ಚಿತ್ರದಲ್ಲಿ ನಡೆಯುವ ಕೊಲೆಗಳಿಗೂ, ನಾಯಕ ಶಿವಾಜಿಗೂ ಒಂದು ನಂಟಿರುತ್ತದೆ. ಆ ನಂಟೇನು? ಕೊಲೆಗಳ ಹಿಂದಿರುವ ರಹಸ್ಯವೇನು? ಮತ್ತು ಕೊಲೆಗಾರ ಯಾರು? ಎಂಬುದೇ ಈ ಚಿತ್ರದ ಮುಖ್ಯ ಕಥಾ ಹಂದರ. ಮೊದಲ ಭಾಗ ನೋಡಿದವರಿಗೆ ಈ ಚಿತ್ರವು ಖಂಡಿತಾ ಇಷ್ಟವಾಗುತ್ತದೆ. ಇಲ್ಲಿ ಕೊಲೆಗಳ ಜೊತೆಗೆ ಮನರಂಜನೆ ಮತ್ತು ಭಾವನಾತ್ಮಕ ಸನ್ನಿವೇಶಗಳು ಸಹ ಇದೆ. ಚಿತ್ರ ನೋಡುತ್ತಿದ್ದಂತೆ ಇಲ್ಲಿ ಎರಡು ಪಾತ್ರಗಳಿವೆಯೋ ಅಥವಾ ನಾಯಕನ ಮನಸ್ಸಿನಲ್ಲಿ ಆಗುವ ತಳಮಳಗಳೋ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಕಾಡುತ್ತದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಚಿತ್ರತಂಡ ಹಂಚಿಕೊಂಡ ವಿಚಾರಗಳಿವು.