
ಜೀ ಕನ್ನಡ ವಾಹಿನಿಯು ಈಗ ಎರಡು ಹೊಸ ಶೋಗಳನ್ನು ಪ್ರಾರಂಭಿಸುತ್ತಿದೆ. ಜೂನ್ 14ರಂದು ರಾತ್ರಿ 7.30ಕ್ಕೆ ‘ಮಹಾನಟಿ ಸೀಸನ್ 2’ ಹಾಗೂ ಜೂನ್ 16 ರಿಂದ ಪ್ರತಿದಿನ ರಾತ್ರಿ 8ಕ್ಕೆ ಹೊಸ ಧಾರಾವಾಹಿ ‘ಕರ್ಣ ಪ್ರಸಾರವಾಗಲಿದೆ. ಕರ್ಣ ಧಾರಾವಾಹಿಯು ತ್ಯಾಗ ಪ್ರೀತಿ ಮತ್ತು ಭಾವನೆಗಳಿಗೆ ಒತ್ತು ಕೊಟ್ಟರೆ ʼಮಹಾನಟಿʼ ಸೀಸನ್ 2 ಶೋ ಮಹಾನಟಿ ಆಗುವ ಕನಸು ಕಂಡವರ ಬಗ್ಗೆ ಇದೆ.
ʼಮಹಾನಟಿʼ ಸೀಸನ್ 1 ರ ಯಶಸ್ಸಿನ ನಂತರ ಈಗ ‘ಮಹಾನಟಿ ಸೀಸನ್ 2' ನಿಮ್ಮನ್ನು ಮನರಂಜಿಸಲು ಸಜ್ಜಾಗಿದೆ . ಮೊದಲ ಆವೃತ್ತಿಯ ವಿಜೇತೆ ಪ್ರಿಯಾಂಕಾ ಅವರು, ನಿರ್ದೇಶಕ ತರುಣ್ ಸುಧೀರ್ ಅವರ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರೋದು ಈ ಶೋನ ಯಶಸ್ಸಿಗೆ ಒಂದು ಉತ್ತಮ ಉದಾಹರಣೆ.
ಈಗ, ಜೂನ್ 14ರಂದು ರಾತ್ರಿ 7:30ಕ್ಕೆ ಮಹಾನಟಿ ಸೀಸನ್ 2 ಪ್ರಾರಂಭವಾಗಲಿದೆ. 18-25 ವಯಸ್ಸಿನ 12 ಪ್ರತಿಭಾವಂತ ಯುವತಿಯರು ಈ ಶೋನಲ್ಲಿ ಭಾಗವಹಿಸಲಿದ್ದಾರೆ. 18 ವಾರಗಳ ಕಾಲ ಇವರಿಗೆ ರಂಗಭೂಮಿ ಕಲಾವಿದರು, ತಾಂತ್ರಿಕ ತಜ್ಞರಿಂದ ನಟನೆ ತರಬೇತಿ ಸಿಗಲಿದೆ.
ನಿಶ್ವಿಕಾ ನಾಯ್ಡು, ಪ್ರೇಮಾ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರು ಈ ಶೋನ ತೀರ್ಪುಗಾರರಾಗಿದ್ದು ನಟ ರಮೇಶ್ ಅರವಿಂದ್ ಅವರು ಮಾಸ್ಟರ್ ಮೈಂಡ್ ಆಗಿ ಇವರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಅನುಶ್ರೀ ಅವರು ನಿರೂಪಣಾ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇನ್ನು ಕನಸುಗಳು ಹೇಗೆ ನನಸಾಗುತ್ತೆ ಅನ್ನೋದಕ್ಕೆ ಮಹಾನಟಿ ರಿಯಾಲಿಟಿ ಶೋ ಒಂದು ಉತ್ತಮ ಉದಾಹರಣೆ.
ಕರ್ಣ ಧಾರಾವಾಹಿ ಕಥೆ ಏನು?
ಕಸದಬುಟ್ಟಿಯಲ್ಲಿ ಅನಾಥವಾಗಿ ಬಿದ್ದಿದ್ದ ಕರ್ಣ ಎನ್ನುವ ಮಗುವನ್ನು ಪ್ರತಿಷ್ಠಿತ ಕುಟುಂಬದ ರಾಮಕೃಷ್ಣ ವಸಿಷ್ಠ ಅವರು ರಕ್ಷಿಸುತ್ತಾರೆ. ತಾತನಿಗೆ ಕೊಟ್ಟ ಮಾತಿನಂತೆ ಕರ್ಣನು ದೊಡ್ಡವನಾದ ಮೇಲೆ ಪ್ರಸೂತಿ, ಸ್ತ್ರೀರೋಗ ತಜ್ಞನಾಗಿ ತಾತ ಕಟ್ಟಿಸಿದ ಆಸ್ಪತ್ರೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಾನೆ. ಜನಪ್ರಿಯ ಸ್ತ್ರೀರೋಗ ತಜ್ಞ ಆಗಿರುವ ಈತ ಬಡವರಿಗಾಗಿ ತೋರಿಸುವ ಕಾಳಜಿ, ವೃತ್ತಿಪರ ನಿಷ್ಠೆ ಎಲ್ಲರಿಗೂ ಮಾದರಿಯಾಗಲಿದೆ. ಇದು 'ಕರ್ಣ' ಧಾರಾವಾಹಿ ಕಥೆಯ ಮುಖ್ಯ ಹಂದರವಾಗಿದ್ದು ಜನರ ಮನಗೆಲ್ಲೋದರಲ್ಲಿ ಎರಡನೇ ಮಾತಿಲ್ಲ. ಕರ್ಣ ಯಾರನ್ನು ಪ್ರೀತಿ ಮಾಡ್ತಾನೆ? ಯಾರನ್ನು ಮದುವೆ ಆಗ್ತಾನೆ ಎನ್ನೋದು ಇಲ್ಲಿರುವ ದೊಡ್ಡ ಪ್ರಶ್ನೆ ಆಗಿದೆ. ಇದರ ಜೊತೆಗೆ ನಿಧಿಗೆ ಕರ್ಣನ ಮೇಲೆ ಲವ್ ಇರುತ್ತದೆ. ನಿತ್ಯಾ ಹಾಗೂ ಕರ್ಣನ ಮಧ್ಯೆ ಪ್ರೀತಿ ಹುಟ್ಟತ್ತಾ? ನಿತ್ಯಾ ಹಾಗೂ ನಿಧಿ ನಡುವೆ ಕರ್ಣನಿಗೆ ಜೋಡಿ ಆಗೋರು ಯಾರು ಎನ್ನೋದು ಇಲ್ಲಿರುವ ಪ್ರಶ್ನೆಯಾಗಿದೆ.
ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ ಕಥೆಯಿದು!
ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟ ಕಿರಣ್ ರಾಜ್ ಕರ್ಣನಾಗಿ ಈ ಧಾರಾವಾಹಿಯ ಮೂಲಕ ಮತ್ತೆ ವೀಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಪ್ರೋಮೊ ಹಾಗೂ ಈಗಾಗಲೇ ರಿಲೀಸ್ ಆಗಿರೋ ಹಾಡಿನಲ್ಲಿ ಭವ್ಯ ಗೌಡ, ಕಿರಣ್ ರಾಜ್ ಜೋಡಿ ಪ್ರೇಕ್ಷಕರ ಮನ ಗೆದ್ದಿದೆ. ನಮ್ರತಾ ಗೌಡ ಕೂಡ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಹಿರಿಯ ಕಲಾವಿದರಾದ ನಾಗಭರಣ, ಅಶೋಕ್, ಮಹಾಲಕ್ಷ್ಮಿ ವಸಿಷ್ಠ ಈ ಧಾರಾವಾಹಿಯಲ್ಲಿ ವಿಭಿನ್ನ ಪಾತ್ರದ ಮೂಲಕ ವೀಕ್ಷಕರಿಗೆ ಮತ್ತಷ್ಟು ಮನರಂಜನೆಯನ್ನು ನೀಡಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.