ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2026ರ ಅದ್ಧೂರಿ ವೇದಿಕೆಯು ಅತ್ಯಂತ ಅಪರೂಪದ, ಭಾವನಾತ್ಮಕ ಮತ್ತು ಕರುನಾಡಿನ ಪ್ರಸಿದ್ಧ ಕಲಾವಿದರ ಕೌಟುಂಬಿಕ ಪ್ರೀತಿಗೆ ಸಾಕ್ಷಿಯಾಗಿದೆ. ಹೌದು. ಡಾ. ರಾಜ್‌ಕುಮಾರ್ ಕುಟುಂಬದ ಕುಡಿಗಳಾದ, ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಪ್ರತಿಭಾವಂತ ನಟಿ ಮಾಲತಿ ಶ್ರೀನಿವಾಸ್ ಅವರ ನಡುವಿನ ಅಣ್ಣ-ತಂಗಿಯ ಬಾಂಧವ್ಯ ವೇದಿಕೆಯಲ್ಲಿದ್ದ ಪ್ರತಿಯೊಬ್ಬರ ಕಣ್ಣಂಚು ತೇವಗೊಳಿಸಿದೆ. ಅಷ್ಟಕ್ಕೂ ಅಲ್ಲಿ ಏನಾಯ್ತು? ಇಲ್ಲಿದೆ ನೋಡಿ ಮಾಹಿತಿ.
ಕಾರ್ಯಕ್ರಮದ ವೇಳೆ ನಿರೂಪಕಿ ಶ್ವೇತಾ ಚೆಂಗಪ್ಪ, "ಮಾಲತಿ ಮೇಡಂ, ನಿಮ್ಮದೊಂದು ಅಪರೂಪದ ಎಕ್ಸ್‌ಕ್ಲೂಸಿವ್ ಫೋಟೋ ನಮ್ಮಲ್ಲಿದೆ" ಎಂದು ವೇದಿಕೆಯ ಎಲ್‌ಇಡಿ ಸ್ಕ್ರೀನ್ ಮೇಲೆ ಹಳೆಯ ಕಪ್ಪು-ಬಿಳುಪಿನ ಫೋಟೋವೊಂದನ್ನು ಪ್ರದರ್ಶಿಸಿದರು. ಅದರಲ್ಲಿ ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕಿ ದಿವಂಗತ ಪಾರ್ವತಮ್ಮ ರಾಜಕುಮಾರ್ ಅವರ ಮಡಿಲಲ್ಲಿ ಒಂದು ಪುಟ್ಟ ಮಗು ಮುದ್ದಾಗಿ ಕುಳಿತಿತ್ತು.
"ಪಾರ್ವತಮ್ಮನವರ ಮಡಿಲಲ್ಲಿರುವ ಆ ಪುಟಾಣಿ ಮಗು ಯಾರು?" ಎಂದು ನಿರೂಪಕಿ ಕೇಳುತ್ತಿದ್ದಂತೆ, ಮಾಲತಿ ಶ್ರೀನಿವಾಸ್ ಅವರು ಮುಗುಳ್ನಗುತ್ತಾ "ನಾನೇ, ನಾನೇ!" ಎಂದರು. ಮುಂದುವರಿದು ಮಾತನಾಡಿದ ಅವರು, "ಇಡೀ ಜಗತ್ತಿಗೆ ಅವರು ಪಾರ್ವತಮ್ಮ, ಆದರೆ ನನಗೆ ಅವರು ದೊಡ್ಡತ್ತೆ. ಅವರು ನನ್ನ ತಂದೆಯವರ ಸ್ವಂತ ಅಕ್ಕ" ಎಂದು ತಮ್ಮ ಕುಟುಂಬದ ಬಾಂಧವ್ಯವನ್ನು ಹೆಮ್ಮೆಯಿಂದ ನೆನೆದರು.
ಈ ಭಾವುಕ ಕ್ಷಣ ಮುಗಿಯುತ್ತಿದ್ದಂತೆ ನಿರೂಪಕಿ "ಈಗ ತಾನೇ ಅಣ್ಣ ಬಂದಿದ್ದಾರೆ!" ಎಂದರು. ತಕ್ಷಣವೇ ರೋರಿಂಗ್ ಸ್ಟಾರ್ ಶ್ರೀಮುರಳಿ ವೇದಿಕೆಗೆ ಪ್ರವೇಶಿಸಿ ಪ್ರೀತಿಯಿಂದ ಫ್ಲೈಯಿಂಗ್ ಕಿಸ್ ನೀಡಿದರು. ತಂಗಿ ಮಾಲತಿಯನ್ನು ನೋಡಿ ಹೆಮ್ಮೆಯಿಂದ ಮಾತನಾಡಿದ ಶ್ರೀಮುರಳಿ, ತಮ್ಮ ಬಾಲ್ಯದ ದಿನಗಳು ಹಾಗೂ ಚಿತ್ರರಂಗದಲ್ಲಿ ಪಟ್ಟ ಕಷ್ಟಗಳನ್ನು ಮೆಲುಕು ಹಾಕಿದರು.
"ನನ್ನ ತಂಗಿ ಬಗ್ಗೆ ಮಾತನಾಡಬೇಕು. ನಾವೆಲ್ಲ ಚಿಕ್ಕವರಿದ್ದಾಗ, ಈ ರೀತಿ ಆನ್‌ಸ್ಕ್ರೀನ್‌ನಲ್ಲಿ ಜೊತೆಯಾಗಿ ನಿಲ್ಲುತ್ತೇವೆ ಎಂದು ನಾವ್ಯಾರೂ ಊಹಿಸಿರಲಿಲ್ಲ. ನಮ್ಮ ತಂದೆಯವರು ಸಿನಿಮಾದಲ್ಲಿ ನಿರ್ಮಾಪಕರಾಗಿ, ಡಿಸ್ಟ್ರಿಬ್ಯೂಟರ್‌ಗಳಾಗಿ ಬಹಳ ಏಳು-ಬೀಳುಗಳನ್ನು ಕಂಡಿದ್ದಾರೆ. ಚಿತ್ರರಂಗದಲ್ಲಿ ನಾವು ಬಹಳ ಕಷ್ಟಪಟ್ಟಿದ್ದೇವೆ... ಹೌದಲ್ವಾ ಲಚ್ಚಿ?" ಎಂದು ಮಾಲತಿಯನ್ನು ಪ್ರೀತಿಯಿಂದ ರೇಗಿಸಿದರು.
ಮುಂದುವರಿದು ತಂಗಿಯ ಸಾಧನೆಯನ್ನು ಕೊಂಡಾಡಿದ ಶ್ರೀಮುರಳಿ, "ಇವತ್ತು ನಮ್ಮ ಲಚ್ಚಿ ಜೀ಼ ಕುಟುಂಬದಲ್ಲಿ ಪ್ರಶಸ್ತಿ ಪಡೆಯುತ್ತಿರುವುದನ್ನು ನೋಡಿದಾಗ ನನಗೆ ತಡೆಯೋಕೆ ಆಗ್ಲಿಲ್ಲ. 'ಏ ಲಚ್ಚಿ' ಅಂತ ನಾನೇ ಕೂಗಿ ರೇಗಿಸಿದೆ. ಮನೆಯಲ್ಲೂ ನಾವಿಬ್ಬರು ಹೀಗೆ ತುಂಟಾಟ ಮಾಡುತ್ತಿರುತ್ತೇವೆ. ಆಕೆಗೆ ಯಾವಾಗಲೂ ಒಳ್ಳೆಯದಾಗಲಿ. ಸ್ಟೇಟ್ ಅವಾರ್ಡ್, ನ್ಯಾಷನಲ್ ಅವಾರ್ಡ್ ಜೊತೆಗೆ ಆಸ್ಕರ್ ಕೂಡ ತಗೊಂಡು ಬಿಡಮ್ಮ" ಎಂದು ಮನದುಂಬಿ ಹಾರೈಸಿದರು.
ಅಣ್ಣನ ಈ ಮಾತಿಗೆ ನಗುತ್ತಲೇ ಉತ್ತರಿಸಿದ ಮಾಲತಿ, "ನಾನು ಈಗಾಗಲೇ ಸ್ಟೇಟ್ ಅವಾರ್ಡ್ ತಗೊಂಡಿದ್ದೀನಿ ಅಲ್ವಾ..." ಎಂದು ತಮಾಷೆಯಾಗಿ ನೆನಪಿಸಿದರು. ಇದಕ್ಕೆ ಶ್ರೀಮುರಳಿ ನಗುನಗುತ್ತಲೇ ತಂಗಿಗೆ ಶುಭ ಹಾರೈಸಿ ವೇದಿಕೆಯಿಂದ ನಿರ್ಗಮಿಸಿದರು.
ಚಿತ್ರರಂಗದ ಹಿನ್ನೆಲೆಯಿದ್ದರೂ ಸ್ವಂತ ಪ್ರತಿಭೆಯಿಂದ ಗುರುತಿಸಿಕೊಂಡಿರುವ ಅಣ್ಣ-ತಂಗಿಯರ ಈ ಮುದ್ದಾದ ಒಡನಾಟ, ಸರಳತೆ ಮತ್ತು ಕುಟುಂಬದ ಪ್ರೀತಿಯನ್ನು ಕಂಡು ಇಡೀ ಸಭಾಂಗಣವೇ ಚಪ್ಪಾಳೆಯ ಸುರಿಮಳೆಗರೆಯಿತು. ಸದ್ಯ ಈ ಭಾವುಕ ಕ್ಷಣದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿವೆ.
ಅಂದಹಾಗೆ ಪ್ರಸ್ತುತ ಮಾಲತಿ ಶ್ರೀನಿವಾಸ್ ಅವರು ಕರ್ಣ ಸೀರಿಯಲ್‌ನಲ್ಲಿ ನಾಯಕ ಕರ್ಣನ ಅಮ್ಮ ಪಾತ್ರ ನಿರ್ವಹಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.