
ಕನ್ನಡತಿ (Kannadathi) ಸೀರಿಯಲ್ (Serial) ಇಂಟರೆಸ್ಟಿಂಗ್ ಘಟ್ಟವನ್ನು ಹಾದು ಹೋಗಿದೆ. ಮಾಲಾ ಕೆಫೆಯ ಸಿಇಓ ಹರ್ಷ (Harsha) ಹಾಗೂ ಹಸಿರು ಪೇಟೆ ಟೀಚರ್ ಭುವಿ (Bhuvi) ಸ್ನೇಹಿತರಾಗಿ, ಪ್ರೇಮಿಗಳಾಗಿ ಒಂದಿಷ್ಟು ದಿನಗಳ ಬಳಿಕ ಕಥೆ ಎಂಗೇಜ್‌ಮೆಂಟ್‌ಗೆ ತನಕ ಬಂದು ನಿಂತಿದೆ. ನಿನ್ನೆ ತಾನೇ ಈ ಜೋಡಿಯ ಎಂಗೇಜ್‌ಮೆಂಟ್ (Engagement) ಕಥೆ ವೂಟ್‌ನಲ್ಲಿ ಪ್ರಸಾರವಾಗಿದೆ. ಮಾಲಾ ಕೆಫೆಯ ಒಡತಿ, ಹರ್ಷನ ತಾಯಿ ರತ್ನಮಾಲಾ ಈ ಜೋಡಿಗೆ ಶುಭ ಹಾರೈಸಿದ್ದಾರೆ. ಹರ್ಷನ ನಿಶ್ಚಿತಾರ್ಥಕ್ಕಾಗಿ ತಾನು ಹಂಬಲಿಸಿದ್ದನ್ನು, ಅದು ಈಗ ಈಡೇರುತ್ತಿರುವುದನ್ನು ಕಂಡು ಭಾವುಕರಾಗಿ ಮಾತನಾಡಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್ ಎದುರಾಗಿದೆ. ಅದನ್ನು ಈ ಜೋಡಿ ಎದುರಿಸಿದ ರೀತಿ ಎಲ್ಲ ಪ್ರೇಮಿಗಳಿಗೂ ಮಾದರಿ ಅನಿಸೋ ಥರ ಇದೆ. ಅಲ್ಲಿಗೆ ಇಲ್ಲಿಯವರೆಗೆ ಸರಳವಾಗಿ ಅರ್ಥಪೂರ್ಣವಾಗಿ ಮೂಡಿಬಂದಿದ್ದ ಎಂಗೇಜ್‌ಮೆಂಟ್ ಎಪಿಸೋಡ್ ಇನ್ನಷ್ಟು ಅರ್ಥಪೂರ್ಣತೆಯತ್ತ ಸಾಗಿದೆ. ಪ್ರೇಮ ಸರಳ, ಪ್ರಕೃತಿ ಸಹಜ ಅನ್ನೋದನ್ನು ಈ ಸೀರಿಯಲ್ ಹೊಸ ಬಗೆಯಲ್ಲಿ ಸಾರಿ ಹೇಳಿದೆ.
ಇದನ್ನೂ ಓದಿ: Alia Ranbir wedding ಏಪ್ರಿಲ್ 15ರಂದು ಮದುವೆ, ಮೆಹಂದಿ, ಹಳದಿ ಸಂಪೂರ್ಣ ಗೆಸ್ಟ್ ವಿವರ
ಅದು ಸಾಗರದಿಂದ ಏಳೂವರೆ ಕಿಮೀ ದೂರದ ಉದ್ರಿ ಅನ್ನೋ ಹಳ್ಳಿ. ಅಲ್ಲಿ ಕಳೆದ ತಿಂಗಳು ಭುವಿ-ಹರ್ಷ ನಿಶ್ಚಿತಾರ್ಥದ ಎಪಿಸೋಡ್ ಶೂಟಿಂಗ್ ನಡೆದಿದೆ. ಹಳ್ಳಿಯ ಪರಿಸರ ಎಲ್ಲೆಲ್ಲೂ ಹಸಿರು, ಪ್ರಕೃತಿಯ ಆಹ್ಲಾದತೆ. ಇಲ್ಲಿ ಚಿತ್ರೀಕರಣಗೊಂಡಿರುವ ಎಂಗೇಜ್‌ಮೆಂಟ್ ಎಪಿಸೋಡ್ ಇದೀಗ ಪ್ರಸಾರವಾಗುತ್ತಿದೆ. ಸದ್ಯ ಭುವಿಯ ಅಷ್ಟೂ ಎಂಗೇಜ್‌ಮೆಂಟ್ ಪ್ರಕ್ರಿಯೆಗಳು ಅಚ್ಚ ಹಳ್ಳಿ ಸಂಪ್ರದಾಯದಲ್ಲಿ ನಡೆಯುತ್ತಿವೆ. ಆದರೆ ಎಂಥಾ ಹಳ್ಳಿಯೇ ಆದರೂ ಮಧುಮಕ್ಕಳು ಎಂಗೇಜ್‌ಮೆಂಟ್‌ಗೆ ರಿಂಗ್ ಅದಲು ಬದಲು ಮಾಡಿಕೊಳ್ಳುವ ಸಂಪ್ರದಾಯ ಇದ್ದೇ ಇದೆ. ಇದಕ್ಕಾಗಿ ಹರ್ಷ ಭುವಿ ಎಂಗೇಜ್‌ಮೆಂಟ್ ರಿಂಗ್ ಖರೀದಿಸಿಯೂ ಆಗಿತ್ತು. ಅದನ್ನು ನಿಶ್ಚಿತಾರ್ಥ ಮಂಟಪದಲ್ಲಿ ತೊಡಿಸೋದಕ್ಕೆ ಎಲ್ಲ ವ್ಯವಸ್ಥೆಯೂ ಆಗಿತ್ತು.
ಆದರೆ ಇವರ ನಿಶ್ಚಿತಾರ್ಥ ನಡೆಯೋದು ಮೂವರಿಗೆ ಇಷ್ಟ ಇಲ್ಲ. ಮೊದಲನೆಯವರು ಮಂಗಳಮ್ಮ, ಭುವಿಯ ಅಜ್ಜಿ. ಎರಡನೆಯವಳು ಸಾನಿಯಾ, ಸಂಬಂಧದಲ್ಲಿ ಹರ್ಷನ ತಮ್ಮನ ಹೆಂಡತಿ, ಅವಳಿಗೆ ಈ ಮದುವೆಯಿಂದ ಎಲ್ಲ ಆಸ್ತಿ ಭುವಿಯ ಪಾಲಾಗೋ ಚಿಂತೆ ಇದೆ. ಅದಕ್ಕಾಗಿ ಆಕೆ ರತ್ನಮಾಲಾರನ್ನು, ಭುವಿಯನ್ನು ನಿಶ್ಚಿತಾರ್ಥ ನಡೆಯೋ ಮನೆಯಲ್ಲೇ ಮುಗಿಸಲು ಎಲ್ಲಾ ಪ್ಲಾನ್ ಮಾಡಿದ್ದಾರೆ. ಆದರೆ ದೈವಕೃಪೆಯಿಂದ ಹರ್ಷ, ಭುವಿ ಹಾಗೂ ರತ್ನಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂರನೆಯವಳು ವರೂಧಿನಿ. ಹರ್ಷನಿಗಾಗಿ ಜೀವ ಕೊಡಲೂ ಸಿದ್ಧಳಿರುವ ಭಗ್ನಪ್ರೇಮಿ. ತನ್ನ ಜೀವದ ಗೆಳತಿ ಭುವಿ ತನ್ನ ಹೀರೋ ಕೈ ಹಿಡಿಯುತ್ತಿರುವುದು ಅವಳಿಗೆ ನುಂಗಲಾರದ ತುತ್ತು.
ಇದನ್ನೂ ಓದಿ: Hrithik Roshan Saba Azad ಭೇಟಿಯಾಗಿದ್ದು ಎಲ್ಲಿ? ಹೇಗೆ ಶುರುವಾಯಿತು ಪ್ರೀತಿ?
ಸದ್ಯ ಎಲ್ಲ ಕಂಟಕ ಮುಗಿದು ಎಂಗೇಜ್‌ಮೆಂಟ್ ನಡೆದಿದೆ. ಆದರೆ ಮಂಟಪದಲ್ಲಿ ಇನ್ನೇನು ನಿಶ್ಚಿತಾರ್ಥದ ಉಂಗುರ ತೊಡಿಸಬೇಕು ಅಂತ ಭುವಿ ಉಂಗುರದ ಬಾಕ್ಸ್ ತೆರೆದರೆ ಅಲ್ಲಿ ಉಂಗುರವೇ ಇಲ್ಲ! ಎಲ್ಲಿ ಹುಡುಕಿದರೂ ಉಂಗುರ ಸಿಕ್ಕಿಲ್ಲ. ಬಂದವರೆಲ್ಲ ನಿಬ್ಬೆರಗಾಗಿ ನೋಡುತ್ತಿದ್ದಾರೆ. ಎಂಗೇಜ್‌ಮೆಂಟ್ ನಿಂತೇ ಹೋಯ್ತೇನೋ ಅಂತನ್ನುವಾಗ ಹರ್ಷ ಅದೇ ಮಂಟಪದಲ್ಲಿ ಮಾಸ್ಟರ್ ಪ್ಲಾನ್ ಮಾಡುತ್ತಾನೆ. ಅಲ್ಲೇ ಇದ್ದ ರೇಷ್ಮೆ ದಾರಕ್ಕೆ ಅರಶಿನ ಕುಂಕುಮ ಹಚ್ಚಿ, ಅದನ್ನು ಉಂಗುರದಂತೆ ಸುತ್ತಿ, ರೇಷ್ಮೆ ದಾರದ ಉಂಗುರ ಮಾಡಿದ್ದಾನೆ. ಪುರೋಹಿತರು ಇದು ಬಹಳ ಶುಭ ಅಂದಿದ್ದಾರೆ.
ಅಚ್ಚರಿಯಿಂದ ನಿಂತಿರೋ ಜನರ ನಡುವೆಯೇ ಹರ್ಷ ಭುವಿಗೆ ಉಂಗುರ ತೊಡಿಸುತ್ತಾನೆ. ಅವಳೂ ನಾಚುತ್ತಾ ಹರ್ಷನ ಬೆರಳಿಗೆ ಪ್ರೇಮದುಂಗುರ ತೊಡಿಸುತ್ತಾಳೆ. ಅಲ್ಲಿಗೆ ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಈ ಜೋಡಿಯ ನಿಶ್ಚಿತಾರ್ಥ ಸಿಕ್ಕಾಪಟ್ಟೆ ಅರ್ಥಪೂರ್ಣವಾಗಿ ನಡೆದ ಹಾಗಾಗಿದೆ. ಇದನ್ನು ಪ್ರೇಕ್ಷಕರೂ ಮೆಚ್ಚಿಕೊಂಡಿದ್ದಾರೆ. ಎಲ್ಲ ಕಡೆ ಅದ್ದೂರಿತನವೇ ಮೆರೆಯುತ್ತಿದ್ದು, ಅಂತಃಕರಣ, ನಿಜಪ್ರೀತಿ ಮಾಯವಾಗುತ್ತಿರುವಾಗ ಇವರು ಅರ್ಥಪೂರ್ಣವಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವುದು ಧನಾತ್ಮಕ ಸಂದೇಶವನ್ನೂ ಸಮಾಜಕ್ಕೆ ನೀಡಿದಂತಾಗಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಮಗಳು ಅಪ್ಪನ ಚಿತೆಗೆ ಬೆಂಕಿ ನೀಡುವ ಸೀನ್‌ನಿಂದ ಪ್ರೇರಿತರಾಗಿ ಹಲವೆಡೆ ಹೆಣ್ಮಕ್ಕಳೇ ಗತಿಸಿದ ತಂದೆಯ ಚಿತೆಗೆ ಬೆಂಕಿ ನೀಡಿ ಸಾರ್ಥಕತೆ ಮೆರೆದಿದ್ದರು, ಇದೀಗ ಸರಳ ನಿಶ್ಚಿತಾರ್ಥದ ಸಂದೇಶವನ್ನೂ ಈ ಸೀರಿಯಲ್ ಟೀಮ್ ನೀಡಿದೆ.
ಇದನ್ನೂ ಓದಿ: ಮದುವೆಯಾಗಲು ತಯಾರಿದ Hema Malini Jeetendra ಜೋಡಿ ತಪ್ಪಿಸಿದ Dharmendra
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.