
ಬಿಗ್‌ಬಾಸ್ ಕನ್ನಡ 11ನೇ ಸೀಸನ್ ಹಲವಾರು ಕಾರಣಗಳಿಂದ ವಿಭಿನ್ನ ಎನಿಸಿಕೊಂಡಿದೆ. ಉಳಿದ ಸೀಸನ್ಗಳಿಗಿಂತ ಭಿನ್ನವಾದ ಕಾನ್ಸೆಪ್ಟ್ ಸ್ವರ್ಗ-ನರಕದ ಮೂಲಕ ಸೀಸನ್ ಶುರುವಾಗಿತ್ತು. ಆದರೆ ಕೊನೆಗೆ ಈ ಕಾನ್ಸೆಪ್ಟ್ ವಿರುದ್ಧ ಅಪಸ್ವರ ಬಂದಿದ್ದರಿಂದ ಅದನ್ನು ಬದಲಾಯಿಸಲಾಗಿತ್ತು. ಇದರ ಹೊರತಾಗಿಯೂ ಈ ಸೀಸನ್ ಉಳಿದ ಸೀಸನ್ಗಳಿಗಿಂತ ಬೇರೆ ಬೇರೆ ರೀತಿಯಲ್ಲಿ ವಿಭಿನ್ನ ಎನಿಸಿಕೊಂಡಿತು. ಆದರೆ ಎಲ್ಲಕ್ಕಿಂತಲೂ ಮುಖ್ಯವಾಗಿ ಬಿಗ್‌ಬಾಸ್ 11 ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿಯಲು ಕಾರಣಾಗಿರುವುದು ಇದು ಕಿಚ್ಚ ಸುದೀಪ್ ಅವರ ಕೊನೆಯ ಷೋ ಎನ್ನುವ ಕಾರಣಕ್ಕೆ. ಮುಂದಿನ ಷೋನಲ್ಲಿ ಸುದೀಪ್ ಅವರು ತಾವು ಹೋಸ್ಟ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಈ ಬಗ್ಗೆ ಇನ್ನೂ ಬೇರೆ ಬೇರೆ ರೀತಿಯ ಸುದ್ದಿಗಳು ಸದ್ದು ಮಾಡುತ್ತಲೇ ಇವೆ. ಆದರೂ ಸದ್ಯದ ಮಟ್ಟಿಗೆ ನೋಡುವುದಾದರೆ, ಇದು ಸುದೀಪ್ ಅವರ ಕೊನೆಯ ಬಿಗ್‌ಬಾಸ್ ಷೋ ಎನ್ನಿಸಿಕೊಂಡಿದೆ. ಆದ್ದರಿಂದ ಅವರ ಅಸಂಖ್ಯ ಅಭಿಮಾನಿಗಳಿಗೆ ಇದು ನಿರಾಸೆಯುಂಟುಮಾಡಿದೆ. ಸುದೀಪ್ ಅವರು ಇಲ್ಲದ ಬಿಗ್‌ಬಾಸ್ ಊಹಿಸಿಕೊಳ್ಳುವುದೂ ಕಷ್ಟ ಎನ್ನುವುದು ಎಲ್ಲರ ಅಭಿಮತ.
ಅದೇ ಇನ್ನೊಂದೆಡೆ, ಇದೇ ಮೊದಲ ಬಾರಿಗೆ ವೈಲ್ಡ್‌ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಸ್ಪರ್ಧಿ ಬಿಗ್‌ಬಾಸ್ ಟ್ರೋಫಿ ಗೆದ್ದಿರುವುದು. ಹನುಮಂತ ಇವರು ವೈಲ್ಡ್‌ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರು. ಪ್ರತಿ ಬಾರಿಯೂ ಬಿಗ್ಬಾಸ್ನಲ್ಲಿ ವಿನ್ ಯಾರು ಆಗಬೇಕು ಎನ್ನುವ ಬಗ್ಗೆ ಹಲವರ ಹೆಸರು ಕೇಳಿಬಂದರೂ, ಈ ಸಲ ಮಾತ್ರ ಬಹುತೇಕರು ಮೊದಲಿನಿಂದಲೂ ಹನುಮಂತ ಅವರ ಹೆಸರನ್ನೇ ಹೇಳುತ್ತಿದ್ದುದು ಕೂಡ ವಿಶೇಷ. ಹೀಗೆ ಹಲವು ರೀತಿಯಲ್ಲಿ ಬಿಗ್‌ಬಾಸ್ ವಿಶೇಷ ಎನ್ನಿಸಿಕೊಂಡ ನಡುವೆಯೇ, ಈ ಸೀಸನ್ನಲ್ಲಿ ನಡೆದ ಬಹುದೊಡ್ಡ ದುರಂತ ಎಂದರೆ ಸುದೀಪ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡದ್ದು. ಇಷ್ಟಾದರೂ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಸುದೀಪ್ ಅವರು ಬಿಗ್ಬಾಸ್ಗೆ ಮತ್ತೆ ಮರಳಿದ್ದರು.
ಅಮ್ಮನ ಆಸೆ ಈಡೇರಿಸಿದ ಬಿಗ್‌ಬಾಸ್ ವರ್ತೂರು ಸಂತೋಷ್: 8 ಕೋಟಿ ರೂ. ಬಂಗಲೆ ಹೀಗಿದೆ ನೋಡಿ...
ಆದರೆ ತಾಯಿ ಮತ್ತು ತಂದೆಯ ಮೇಲೆ ಅಪಾರ ಪ್ರೀತಿ ಇರಿಸಿಕೊಂಡವರು ಸುದೀಪ್. ಬಿಗ್ಬಾಸ್ನ ಫಿನಾಲೆಗೆ ಸುದೀಪ್ ಅವರ ಅಪ್ಪ ಸಂಜೀವ್ ಹಾಗೂ ಮಗಳು ಸಾನ್ವಿ ಕೂಡ ಬಂದಿದ್ದರು. ಇದೇ ವೇಳೆ ಸುದೀಪ್ ಅವರ ತಾಯಿಯ ದನಿಯಲ್ಲಿ, ಮಗನಿಗೆ ಸಮಾಧಾನ ಮಾಡಿರುವ ಆಡಿಯೋ ಶೇರ್ ಮಾಡಲಾಯಿತು. ಮಗನೇ ನಾನಿಲ್ಲ ಎಂದು ಬೇಸರ ಪಡಬೇಡ ಎನ್ನುವ ದನಿ ಅದು. ಅದನ್ನು ಕೇಳುತ್ತಿದ್ದಂತೆಯೇ ಸುದೀಪ್ ಅವರ ತಂದೆ, ಮಗಳು ಸಾನ್ವಿ ಕಣ್ಣೀರಾದರು. ಸುದೀಪ್ ಅವರು ಉಕ್ಕಿ ಬರುತ್ತಿದ್ದ ಕಣ್ಣೀರನ್ನು ತಡೆಹಿಡಿದುಕೊಳ್ಳುವ ಪ್ರಯತ್ನ ಮಾಡಿರುವುದನ್ನು ಈಗ ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿರುವ ವಿಡಿಯೋದಲ್ಲಿ ನೋಡಬಹುದು.
ಈ ಬಾರಿಯ ಸೀಸನ್ ಇನ್ನೂ ವಿಶೇಷ ಕಳೆ ಕಟ್ಟಿದ್ದು, ಸುದೀಪ್ ಅವರ ತಂದೆ ಮತ್ತು ಮಗಳು ವೇದಿಕೆಯ ಮೇಲೆ ಬಂದಿರುವ ಕಾರಣಕ್ಕೆ. ಸಂಜೀವ್ ಅವರು ಇದೇ ಮೊದಲ ಬಾರಿಗೆ ಬಿಗ್ ಬಾಸ್ ವೇದಿಕೆ ಏರಿದರು. ತಂದೆ ವೇದಿಕೆಯ ಮೇಲೆ ಬಂದಾಗ ಸುದೀಪ್ ಅವರ ಬಳಿ ಕ್ಷಮೆ ಕೂಡ ಕೇಳಿದರು. ಅದಕ್ಕೆ ಕಾರಣ ಏನೆಂದರೆ, ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇರುವಾಗ ಬೇರೆ ಬೇರೆ ರಾಜ್ಯ, ಊರು, ದೇಶಗಳಿಗೆ ಹೋಗುವ ಸಮಯದಲ್ಲಿ ಎಷ್ಟೋ ಬಾರಿ ಅಮ್ಮ-ಅಪ್ಪನ ಕಾಳಜಿ ಮಾಡಲು ಆಗುವುದಿಲ್ಲ. ಹಾಗೆ ತಮ್ಮಿಂದಲೂ ಆಗಿರುವ ಕಾರಣ ಕ್ಷಮೆ ಕೋರಿದರು. ಆದರೆ ಸಾಧ್ಯವಾದಾಗಲೆಲ್ಲಾ ಏನೇ ಬಿಜಿ ಇದ್ದರೂ ಅಪ್ಪ-ಅಮ್ಮನ ಆಶೀರ್ವಾದ ಪಡೆದೇ ತಾವು ಶೂಟಿಂಗ್ಗೆ ಹೋಗುತ್ತಿರುವ ಬಗ್ಗೆ ಇದಾಗಲೇ ಸುದೀಪ್ ಹೇಳಿದ್ದಾರೆ. ಆದರೆ ಎಲ್ಲಾ ಸಮಯಗಳು ಹಾಗೆ ಇರುವುದಿಲ್ಲ. ಆದ್ದರಿಂದ ವೇದಿಕೆ ಮೇಲೆ ಅಪ್ಪನ ಕ್ಷಮೆ ಕೋರಿದರು ಸುದೀಪ್.
ಬಿಗ್‌ಬಾಸ್ ವರ್ತೂರು ಮದುವೆ: ತನಿಷಾ ವಿಷ್ಯ ಹೇಳುತ್ತಲೇ ಭಾವಿ ಪತ್ನಿಯ ಗುಟ್ಟು ರಟ್ಟು ಮಾಡಿದ ಸಂತೋಷ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.