
ಬಿಗ್‌ಬಾಸ್ 10ರಲ್ಲಿ ಕೊನೆಯವರೆಗೂ ಮಿಂಚಿದ ವರ್ತೂರು ಸಂತೋಷ್ ಅವರು ಹಳ್ಳಿಕಾರ್ ಎಂದೇ ಫೇಮಸ್ ಆದವರು. ಇವರು ಇನ್ನಷ್ಟು ಫೇಮಸ್ ಆಗಲು ಕಾರಣ, ಇವರು ಧರಿಸಿದ್ದ ಹುಲಿಯ ಪೆಂಡೆಂಟ್ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದ್ದರಿಂದ. ಬಿಗ್‌ಬಾಸ್ ಮನೆಯಿಂದ ಜೈಲಿಗೂ ಹೋಗಿ ರಾಜಕೀಯ ವಲಯದಲ್ಲಿಯೂ ಕೋಲಾಹಲ ಸೃಷ್ಟಿಸಿದ್ದು ಈಗ ಎಲ್ಲವೂ ಇತಿಹಾಸ. ಇಂತಿಪ್ಪ ವರ್ತೂರು ಫೇಮಸ್ ಆಗ್ತಿದ್ದಂತೆಯೇ ಅವರ ವೈಯಕ್ತಿಯ ಜೀವನದ ಬಗ್ಗೆಯೂ ಸಾಕಷ್ಟು ಚರ್ಚೆ, ಸುದ್ದಿ, ಗುಲ್ಲುಗಳು ಹರಡಿದ್ದವು. ಯುವತಿಯೊಬ್ಬರ ಜೊತೆ ವರ್ತೂರು ಸಂತೋಷ್ ಇರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ವರ್ತೂರು ಅವರಿಗೆ ಮದುವೆಯಾಗಿದ್ದರೂ ಆ ವಿಷಯವನ್ನು ಮುಚ್ಚಿಟ್ಟಿದ್ದಾರೆ ಎಂದೇ ಸದ್ದು ಮಾಡಿತು. ಅಲ್ಲಿಯವರೆಗೆ, ಹಳ್ಳಿಕಾರ್ ಹಸು ತಳಿಯನ್ನು ಪ್ರಚಾರ ಮಾಡಿ ಹೀರೋ ಆಗಿದ್ದ ವರ್ತೂರು ಅವರ ಸುತ್ತ ಮದುವೆಯ ವಿವಾದ ಹುಟ್ಟಿಕೊಂಡಿತ್ತು. ಹೀಗೆ ವಿವಾದಗಳಿಂದಲೇ ವರ್ತೂರು ಸಂತೋಷ್ ಅವರು ಸುತ್ತುವರೆದಿದ್ದರೂ, ಅವರ ಖ್ಯಾತಿಗೆ ಏನೂ ಕುಂದು ಬರಲಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿದ್ದಾರೆ.
ಇದೀಗ ಅವರು ತಮ್ಮ ಎಂಟು ಕೋಟಿ ರೂಪಾಯಿಯ ಮನೆಯನ್ನು ವೀಕ್ಷಕರಿಗೆ ತೋರಿಸಿದ್ದಾರೆ. ಎಫ್ಫ್ರೀಡಮ್ಆ್ಯಪ್ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇವರ ಈ ಮನೆಯ ವಿಡಿಯೋ ವೈರಲ್ ಆಗಿದೆ. ಏಳೆಂಟು ಕೋಟಿಯ ತಮ್ಮ ಮನೆಗೆ ಖರ್ಚಾಗಿದೆ ಎಂದಿರುವ ವರ್ತೂರು, ಇದನ್ನು ನನ್ನ ಅಮ್ಮನ ಆಸೆಯಂತೆ ಕಟ್ಟಿದ್ದೇನೆ. ಇಂಟೀರಿಯರ್ ಸೇರಿದಂತೆ ಡಿಸೈನ್ ಎಲ್ಲವೂ ಅಮ್ಮನ ಆಸೆಯಂತೆಯೇ ಇದೆ. ಯಾವುದರಲ್ಲಿಯೂ ಕಾಂಪ್ರಮೈಸ್ ಆಗಲಿಲ್ಲ ಎಂದಿದ್ದಾರೆ. ಗುಣಮಟ್ಟದ ವಸ್ತುಗಳನ್ನೇ ಬಳಸಲಾಗಿದೆ. ಸಂಪೂರ್ಣ ಟೀಕ್ವುಡ್ನಿಂದ ಮಾಡಲಾಗಿದೆ. ಅದರಲ್ಲಿಯೂ ದೇವರ ಮನೆಯನ್ನು ವಿಶೇಷ ರೀತಿಯಲ್ಲಿ ಕಟ್ಟಲಾಗಿದೆ ಎಂದು ದೇವರ ಮನೆಯನ್ನು ತೋರಿಸಿದ್ದಾರೆ.
ಬಿಗ್‌ಬಾಸ್ ವರ್ತೂರು ಮದುವೆ: ತನಿಷಾ ವಿಷ್ಯ ಹೇಳುತ್ತಲೇ ಭಾವಿ ಪತ್ನಿಯ ಗುಟ್ಟು ರಟ್ಟು ಮಾಡಿದ ಸಂತೋಷ್
ದೇವರ ಕೋಣೆಯನ್ನು ಸಿಂಗಲ್ ಮರದಲ್ಲಿ ಮಾಡಲಾಗಿದೆ. ಇದಕ್ಕೆ ಸುಮಾರು 150-200 ವರ್ಷಗಳ ಹಳೆಯ ಟೀಕ್‌ವುಡ್ ಬಳಸಲಾಗಿದೆ. ಎಲ್ಲಿಯೂ ಗಮ್ ಬಳಸಿಲ್ಲ. ಬಾಗಿಲಿಗೆ ಮಾತ್ರ ಮೊಳೆ ಹಾಕಿದ್ದು ಬಿಟ್ಟರೆ ಮೊಳೆಯನ್ನೂ ಎಲ್ಲಿಯೂ ಹಾಕಿಲ್ಲ. ದೇವರು ಕೂಡ ವಿಶೇಷವಾಗಿದೆ. ದೇವರ ಮೂರ್ತಿ ಎದ್ದು ಬಂದಂತೆ ಕಾಣಿಸುತ್ತದೆ. ಕೇವಲ ದೇವರ ಮನೆಗೆ 13-14 ಲಕ್ಷ ರೂಪಾಯಿ ಖರ್ಚಾಗಿದೆ. ಇದನ್ನು ಬಿಟ್ಟರೆ ಮೇಲೆ ಹೋಮ್ ಥಿಯೇಟರ್, ಜಿಮ್ ಎಲ್ಲವೂ ಇದೆ ಎಂದು ಮನೆಯ ಅಂದವನ್ನು ತೋರಿಸಿದ್ದಾರೆ ವರ್ತೂರು. ಅಂದಹಾಗೆ ದೇವರ ಕೋಣೆಯನ್ನು ಡಿಸೈನ್ ಮಾಡಿದವರು ಕೇರಳದ ವ್ಯಕ್ತಿ.
ಇನ್ನು ಸದ್ಯ ಅಮ್ಮ-ಮಗ ಇಬ್ಬರೇ ಇರುವ ಕಾರಣ, ಬೇಗ ಇನ್ನೊಬ್ಬಳ ಎಂಟ್ರಿ ಆಗಲಿ ಎನ್ನುವುದು ಅಭಿಮಾನಿಗಳ ಹಾರೈಕೆ. ಇದಾಗಲೇ ವರ್ತೂರು ಸಂತೋಷ್ ಅವರು, ಈ ಹಿಂದಿನ ಸಂದರ್ಶನವೊಂದರಲ್ಲಿ ತಾವು ಶೀಘ್ರದಲ್ಲಿ ಮತ್ತೊಂದು ಮದುವೆಯಾಗುವ ಬಗ್ಗೆ ತಿಳಿಸಿದ್ದರು. ನನ್ನ ಜೀವನದಲ್ಲಿ ಏನಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದೇನೋ ಹೇಳ್ತಾರಲ್ಲ, ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲುದೇ ಎಂದು. ಹಾಗೆ ಆಗಿದೆ ನನ್ನ ಜೀವನ. ಆದರೆ ನಾನು ಮುಂದಿನ ಹೆಜ್ಜೆ ಇಡುತ್ತಿದ್ದೇನೆ. ಮತ್ತೊಂದು ಮದುವೆಗೆ ಸಿದ್ಧನಾಗಿದ್ದೇನೆ. ಹುಡುಗಿಯೂ ನಮ್ಮ ಸಂಬಂಧಿಕಳೇ. ಅವಳ ಜೊತೆ ಒಡನಾಟವಿದೆ. ಶೀಘ್ರದಲ್ಲಿಯೇ ಮದುವೆಯಾಗುತ್ತೇವೆ ಎಂದಿದ್ದರು ಸಂತೋಷ್. ಇದೇ ವೇಳೆ, ತನಿಷಾ ಕುಪ್ಪಂಡ ಅವರ ವಿಷಯವನ್ನೂ ತಿಳಿಸಿದ ವರ್ತೂರು ಅವರು, ನಾನು ಮದ್ವೆಯಾಗ್ತಿದ್ದೇನೆ ಎಂದು ಹೇಳಿದ ತಕ್ಷಣ ಮತ್ತೆ ತನಿಷಾ ಹೆಸರನ್ನು ಎಳೆದು ತರಬೇಡಿ ಪಾಪ. ಅವಳು ನನ್ನ ಫ್ರೆಂಡ್ ಅಷ್ಟೇ. ಈ ವಿಡಿಯೋ ನೋಡ್ತಿರೋರಿಗೆ ನಾನು ಸ್ಪಷ್ಟನೆ ಕೊಡುತ್ತಿದ್ದೇನೆ. ನಾನು ಮದ್ವೆಯಾಗ್ತಿರೋ ಹುಡುಗಿ ನನ್ನ ಸಂಬಂಧಿಕಳು. ಇಬ್ಬರೂ ಮೀಟ್ ಆಗ್ತಾ ಇರ್ತೇವೆ, ಮತ್ತೆ ತನಿಷಾ ಅಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದಿದ್ದಾರೆ. ಹುಡುಗನಿಗೆ ಹುಡುಗಿ ಇರಬೇಕು, ಹುಡುಗಿಗೆ ಹುಡುಗನೊಬ್ಬ ಇರಬೇಕು. ಅಂದ್ರೆ ಮಾತ್ರ ಜೀವನ ಆಗುವುದು. ಎಲ್ಲರಿಗೂ ಒಬ್ಬೊಬ್ಬರು ಇದ್ದೇ ಇರುತ್ತಾರೆ ಎಂದೂ ಹೇಳಿದ್ದರು.
ಬಿಗ್ಬಾಸ್ನಲ್ಲಿ ಒಂದೂವರೆ ಲಕ್ಷದ ಬಟ್ಟೆ ತೋರಿಸುವಷ್ಟ್ರಲ್ಲಿ ಹೀಗಾಗೋಯ್ತು... ನಟಿ ಅನುಷಾ ರೈ ನೋವಿನ ನುಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.