ಲಾಯರ್ ರುದ್ರಪ್ರತಾಪನ ಜೊತೆಗೆ ಸೀತಾ ಮದುವೆ ನಡೀತಿದೆ. ಇಂಥಾ ಟೈಮಲ್ಲೇ ರುದ್ರನ ದುರಾಸೆ ಸಿಹಿಗೆ ಗೊತ್ತಾಗಿದೆ. ಈಗಾಗಲೇ ಸೀರಿಯಲ್‌ನಲ್ಲಿ ಡಿಡಿಎಲ್‌ಜೆ ಸಿನಿಮಾ ಕಥೆ ಪ್ರಸ್ತಾಪ ಆಗಿದೆ. ರೀಕ್ರಿಯೇಟ್ ಆಗಬಹುದಾ?
ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ 'ಸೀತಾ ರಾಮ' ಸೀರಿಯಲ್ ನಲ್ಲಿ ಬಿಗ್ ಟ್ವಿಸ್ಟ್ ಎದುರಾಗಿದೆ. ವೀಕ್ಷಕರೆಲ್ಲ ಈಗ ಡಿಡಿಎಲ್‌ಜೆ ಸಿನಿಮಾದ ಸೀನ್ ಇಲ್ಲೂ ರೀಕ್ರಿಯೇಟ್ ಆಗುತ್ತಾ ಅಂತ ಎದುರು ನೋಡ್ತಿದ್ದಾರೆ. ಸದ್ಯಕ್ಕೆ ಇಲ್ಲಿ ವಿಲನ್ ರುದ್ರಪ್ರತಾಪನ ಜೊತೆ ಸೀತಾ ಮದುವೆ ಶಾಸ್ತ್ರ ಶುರುವಾಗಿದೆ. ಅತ್ತ ತನ್ನ ಪ್ರೀತಿಯ ಹುಡುಗಿ ಇನ್ನೊಬ್ಬರ ಕೈ ಹಿಡಿಯೋದನ್ನು ಎದುರಿಸಲಾಗದೇ ರಾಮ ಮಲೇಷ್ಯಾ ಹಾದಿ ಹಿಡಿದಿದ್ದಾನೆ. 'ನೀನು ಮದ್ವೆ ಮಂಟಪದಿಂದ ಸೀತಾ ಅವರನ್ನು ಹಾರಿಸಿಕೊಂಡು ಬರ್ತೀಯ ಅಂತ ಕಾದಿದ್ರೆ ನೀನು ಹೀಗೆ ಎಸ್ಕೇಪ್ ಆಗ್ತಾ ಇದ್ದೀಯ' ಅಂತ ಗೆಳೆಯ ಅಶೋಕ ಹೇಳಿದ ಮಾತು ರಾಮನಲ್ಲಿ ಯಾವ ಬದಲಾವಣೆಯನ್ನೂ ತರುತ್ತಿಲ್ಲ. ಪ್ರೀತಿಯನ್ನು ತ್ಯಾಗ ಮಾಡಿ ಮಲೇಷ್ಯಾಗೆ ಹೋಗಲು ಆತ ಫಿಕ್ಸ್ ಆಗಿದ್ದಾನೆ. ಆದರೆ ಇಲ್ಲಿ ಬೇರೆಯದೇ ಸೀನ್ ನಡೀತಿದೆ. ಸತ್ಯ ಏನು ಅನ್ನೋದು ಸಿಹಿಗೆ ಗೊತ್ತಾಗಿದೆ. ಆ ಸತ್ಯ ಮಲೇಷ್ಯಾಗೆ ಹೊರಟಿರೋ ರಾಮನಿಗೆ ಗೊತ್ತಾಗುತ್ತಾ? ಡಿಡಿಎಲ್‌ಜೆ ಸೀನ್ 'ಸೀತಾರಾಮ'ದಲ್ಲಿ ರಿಪೀಟ್ ಆಗಲಿ ಅಂತ ಅಶೋಕನ ಥರ ಜನರೂ ಕಾಯ್ತಿದ್ದಾರೆ.
ಈ ಹಿಂದೆಯೇ ರಾಮನ ತಾತ ಸೂರ್ಯ ಪ್ರಕಾಶ್ ದೇಸಾಯಿ 'ಡಿಡಿಎಲ್‌ಜೆ' ಸಿನಿಮಾದ ಪ್ರಸ್ತಾಪ ಮಾಡಿದ್ದರು. ಈ ಸಿನಿಮಾದಲ್ಲಿ ಹೇಗೆ ಹೀರೋಯಿನ್ ಅನ್ನು ಹೀರೋ ಹಾರಿಸ್ಕೊಂಡು ಹೋಗ್ತಾನೋ ಆ ಥರ ಸೀತೆಯನ್ನು ರಾಮ ಹಾರಿಸಿಕೊಂಡು ಹೋಗಬಹುದಿತ್ತು ಅನ್ನೋ ಥರ ಮಾತಾಡ್ತಾರೆ. ಆದರೆ ಅದೆಲ್ಲ ಸಿನಿಮಾದಲ್ಲಿ ಮಾತ್ರ ಅಂತ ಅಶೋಕ್ ಹೇಳ್ತಾನೆ. ಆದರೆ ಸುಮ್ ಸುಮ್ಮನೇ ಹೀಗೊಂದು ಪ್ರಸ್ತಾಪ ಬರೋದಿಲ್ಲ. ಮುಂದೇನಾಗುತ್ತೆ ಅನ್ನೋದಕ್ಕೆ ಇದು ಹಿಂಟ್ ಆಗಿರಬೇಕು ಎಂದೇ ವೀಕ್ಷಕರು ಭಾವಿಸಿದ್ದಾರೆ. ಹೀಗಾಗಿ ರಾಮ ಸೀತೆಯನ್ನು ಹಾರಿಸ್ಕೊಂಡು ಹೋಗ್ತಾನಾ ಅಥವಾ ರಾಮಾಯಣದ ಥರ ಎಲ್ಲರನ್ನೂ ಎದುರಿಸಿ ಸೀತಾರಾಮ ಆಗ್ತಾನಾ ಅನ್ನೋದು ಈಗಿರುವ ಸಸ್ಪೆನ್ಸ್.
ತೋಳಿಲ್ಲದ ಲೈಲಾಕ್ ಡ್ರೆಸ್‌ನಲ್ಲಿ ಮಿಂಚಿದ ವೈಷ್ಣವಿ ಗೌಡ, ಸೀತಮ್ಮ ಏನ್ ನಿನ್ನ ಅವಸ್ಥೆ ಎಂದ ಫ್ಯಾನ್ಸ್!
ಇದಕ್ಕೂ ಮುನ್ನ ಸೀತಾಳ ಬಳಿ ಬಂದು ನಾನು ಮಲೇಷ್ಯಾಕ್ಕೆ ಹೊರಟಿರುವ ವಿಚಾರವನ್ನು ಈಗಾಗಲೇ ಹೇಳಿಕೊಂಡಿದ್ದಾನೆ ರಾಮ. ನಡೀತಿರೋ ಮದುವೆಗೆ ನೀವೇ ಕಾರಣ, ನೀವೇ ಇರದಿದ್ದರೆ ಹೇಗೆ ಎಂದಿದ್ದಾಳೆ ಸೀತಾ. ಬಾಸ್ ಕರೆದಾಗ ಹೋಗಲೇಬೇಕು ಎಂದಿದ್ದಾನೆ ರಾಮ. ನಾನು ನಿನ್ನನ್ನು ಹೋಗೋಕೆ ಬಿಡಲ್ಲ, ನನಗೆ ನೀನು ಬೇಕು ಎಂದಿದ್ದಾಳೆ ಸಿಹಿ. ನಾನು ಬದುಕಿರೋವರೆಗೂ ನೀನು ನನ್ನ ಎದೆಯಲ್ಲಿಯೇ ಇರುತ್ತಿಯಾ ಎಂದು ಸಿಹಿಯನ್ನು ಸಂಭಾಳಿಸಿದ್ದಾನೆ ರಾಮ. ಸಿಹಿ ಮಾತ್ರ ರಾಮನನ್ನು ಬಿಗಿದಪ್ಪಿ ಕಣ್ಣೀರಿಟ್ಟಿದ್ದಾಳೆ. ಇಬ್ಬರಿಗೂ ಕೊನೆಯದಾಗಿ ಬೈ ಹೇಳಿ ಹೊರಟೇ ಬಿಟ್ಟಿದ್ದಾನೆ ರಾಮ.
ರಾಮ್ ಮತ್ತೆ ಮಲೇಷ್ಯಾಕ್ಕೆ ತೆರಳುತ್ತಿದ್ದಿದ್ದಕ್ಕೆ ಮನೆ ಮಂದಿ ಬೇಸರಲ್ಲಿದ್ದರೆ, ಭಾರ್ಗವಿ ಮಾತ್ರ ಗೆದ್ದು ಬೀಗುತ್ತಿದ್ದಾಳೆ. ತನ್ನ ಹಳೇ ಛಾಳಿ ಮುಂದುವರಿಸುವ ಪ್ಲಾನ್‌ನಲ್ಲಿದ್ದಾಳೆ. ತಾತನ ಮುಂದೆ ಮತ್ತೆ ಮಲೇಷ್ಯಾಕ್ಕೆ ಹೊರಡುವ ಬಗ್ಗೆ ತಿಳಿಸಿದ್ದಾನೆ ರಾಮ. ಆದರೆ, ತಾತ ಸೂರ್ಯಪ್ರಕಾಶ್ ಮಾತ್ರ, ಮೊಮ್ಮಗನ ನಿರ್ಧಾರವನ್ನು ಒಪ್ಪುತ್ತಿಲ್ಲ. ಇದೇ ವೇಳೆ ಮತ್ತೆ ಅಡ್ಡ ಬಂದ ಭಾರ್ಗವಿ, ಹೋಗುವವರನ್ನು ಕಟ್ಟಿ ಹಾಕೋಕೆ ಆಗಲ್ಲ ಮಾವಯ್ಯ ಎಂದಿದ್ದಾಳೆ.
ಇತ್ತ ಕಾರ್‌ನಲ್ಲಿ ಅಶೋಕ ಮತ್ತು ರಾಮನ ನಡುವೆ ಮಾತುಕತೆ ಮುಂದುವರಿದಿದೆ. ಸೀತಾಗಿನ್ನು ಮದುವೆ ಆಗಿಲ್ಲ. ನಿನಗಿನ್ನು ಟೈಮಿದೆ ಎಂದು ಮನವೊಲಿಸಲು ಪ್ರಯತ್ನಿಸಿದ್ದಾನೆ. ಆದರೆ ರಾಮ ಮಾತ್ರ ತನ್ನ ನಿರ್ಧಾರ ಬದಲಿಸುತ್ತಿಲ್ಲ. ಸೀತಾಳ ಫೋನ್ ಬಂದರೂ ಪಿಕ್ ಮಾಡದೇ, ನೇರವಾಗಿ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಮಲೇಷ್ಯಾಕ್ಕೆ ಹೋದಮೇಲಷ್ಟೇ ಕಾಲ್ ಮಾಡುವುದಾಗಿ ಹೇಳಿದ್ದಾನೆ.
ಅಂದರೆ ಇನ್ನು ಫೋನ್ ಕಾಲ್‌ಗೂ ರಾಮ ಸಿಗೋ ಚಾನ್ಸ್ ಇಲ್ಲ. ಇತ್ತ ಆ ಇಬ್ಬರು ವ್ಯಕ್ತಿಗಳನ್ನು ಭೇಟಿಯಾದ ರುದ್ರಪ್ರತಾಪ್, ಮದುವೆ ಆದ ಬಳಿಕ ಈ ಪ್ರಾಪರ್ಟಿಯನ್ನು ನಿಮ್ಮ ಹೆಸರಿಗೆ ಮಾಡಿಕೊಡುವ ಬಗ್ಗೆ ಗದರಿದ್ದಾನೆ. ಇವತ್ತೇ ನನ್ನ ಮದುವೆ. ತಾಳಿ ಕಟ್ಟುವ ವರೆಗೂ ಸ್ವಲ್ಪ ಸಮಾಧಾನವಾಗಿರಿ ಎಂದು ಹೇಳಿ ಕಳುಹಿಸಿದ್ದಾನೆ. ಶಾಸ್ತ್ರ ಬೇಗ ಮುಗಿಬೇಕು. ಮದುವೆ ಮುಗೀತಿದ್ದಂತೆ, ಸಿಹಿ ಅನಾಥಾಶ್ರಮ ಸೇರ್ಕೋಬೇಕು. ಅವಳು ಯಾವುದೇ ಕಾರಣಕ್ಕೂ ನನ್ನ ಕಣ್ಣಮುಂದಿರಬಾರದು ಎಂದು ಸುಲೋಚನಾಗೆ ಆಗ್ರಹಿಸಿದ್ದಾನೆ.
ಇತ್ತ ಕಣ್ಣಾಮುಚ್ಚಾಲೆ ಆಟ ಆಡುತ್ತ, ಮನೆಯಲ್ಲಿಯೇ ಅಡಗಿ ಕೂತಿದ್ದ ಸಿಹಿ, ಅತ್ತಿಗೆ ಮತ್ತು ರುದ್ರಪ್ರತಾಪನ ಮಾತುಗಳನ್ನು ಕೇಳಿಸಿಕೊಂಡು ಕಣ್ಣೀರಿಟ್ಟಿದ್ದಾಳೆ. ಹಾಗಾದರೆ, ಸಿಹಿ ಈ ವಿಚಾರವನ್ನು ಸೀತಾಳ ಗಮನಕ್ಕೆ ತರ್ತಾಳಾ? ಅಥವಾ ತನ್ನ ಫ್ರೆಂಡ್ ರಾಮನಿಗೆ ಹೇಳಿ ಮದುವೆ ನಿಲ್ಲಿಸುತ್ತಾಳಾ? ಮಲೇಷ್ಯಾಕ್ಕೆ ಹೊರಟು ನಿಂತ ರಾಮನಿಗೆ ವಿಷಯ ಹೇಗೆ ತಿಳಿಸ್ತಾಳೆ ಅನ್ನೋದೆಲ್ಲ ವೀಕ್ಷಕರನ್ನು ಚೇರ್ ತುದೀಲಿ ಕೂರೋ ಹಾಗೆ ಮಾಡಿದೆ.