ಬಿಹಾರದ ಎಮ್ಮೆ, ಮೇಕೆ ಜೊತೆ ಕಾಣಿಸಿಕೊಂಡ ಡಾ.ಬ್ರೋ: ಫೋಟೋ ನೋಡಿ ಕುಣಿದಾಡಿದ ಫ್ಯಾನ್ಸ್‌

By Suvarna News  |  First Published Dec 27, 2023, 1:32 PM IST

ಡಾ.ಬ್ರೋ  ಬಿಹಾರದಲ್ಲಿರುವ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದು, ಫ್ಯಾನ್ಸ್‌ ಇದನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. 
 


ಪ್ರತಿಯೊಬ್ಬ ಕನ್ನಡಿಗರ ಹೃದಯ ಗೆದ್ದಿರುವ ಡಾ.ಬ್ರೋ ಕಾಣೆಯಾಗಿದ್ದಾರೆ ಎನ್ನುವ ಚರ್ಚೆ ಕಳೆದ ಒಂದು ತಿಂಗಳಿನಿಂದ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಲೇ ಇದೆ. ವಿದೇಶ ಸುತ್ತಲೂ ಇಂಗ್ಲಿಷ್​ ಬೇಕೇ ಬೇಕು ಎನ್ನುವ ಈ ಕಾಲಘಟ್ಟದಲ್ಲಿ ಅತ್ತ ಇಂಗ್ಲಿಷ್​ ಕೂಡ ಸರಿಯಾಗಿ ಬರದೇ, ಇತ್ತ ಹಿಂದಿಯೂ ಬರದೇ ಇದ್ದರೂ ವಿದೇಶಿಗರಿಗೇ ಕನ್ನಡ ಕಲಿಸಿ ಬರುತ್ತಿರುವ ಸ್ಮಾರ್ಟ್​, ಧೀಮಂತ ಹಾಗೂ ಅಪ್ರತಿಮ ಪ್ರತಿಭೇ ಡಾ. ಬ್ರೋ ಅಲಿಯಾಸ್​ ಗಗನ್​. ಯಾವೊಬ್ಬ ಯೂಟ್ಯೂಬರ್​ ಒಂದಿಷ್ಟು ದಿನ ಕಾಣಿಸಿಕೊಳ್ಳದೇ ಇದ್ದರೆ ಅವರ ಫ್ಯಾನ್ಸ್​ ಅಷ್ಟೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲವೇನೋ. ಆದರೆ ಗಗನ್​ ಕಳೆದೊಂದು ತಿಂಗಳಿನಿಂದ ಯಾವುದೇ ವಿಡಿಯೋ ಅಪ್​ಲೋಡ್​ ಮಾಡದೇ ಇರುವುದಕ್ಕೆ ಸೋಷಿಯಲ್​  ಮೀಡಿಯಾದಲ್ಲಿ ಭಾರಿ ಚರ್ಚೆಯೇ  ನಡೆದುಬಿಟ್ಟಿದೆ. ಹಲವು ರೀತಿಯ ಊಹಾಪೋಹ, ಗಾಳಿಸುದ್ದಿಗಳೂ ಹರಿದಾಡಿವೆ. ಚೀನಾವನ್ನು ಹೊಗಳಿದ ಬಳಿಕ ಗಗನ್​ ನಾಪತ್ತೆಯಾಗಿರುವುದಕ್ಕೆ ಕೆಲವರು ತಮ್ಮದೇ ಅತಿಬುದ್ಧಿವಂತಿಕೆ ಉಪಯೋಗಿಸಿ ಮನಸ್ಸಿಗೆ ಬಂದದ್ದನ್ನೂ ಬರೆದುಕೊಂಡೂ ಆಗಿದೆ.

ಆದರೆ ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡಕ್ಕೆ ಅಸೈನ್‌ಮೆಂಟ್‌ಗಳಲ್ಲಿ ಡಾ. ಬ್ರೋ ಬಿಜಿಯಾಗಿದ್ದಾರೆ. ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಬಿಜಿಯಾಗಿದ್ದರು. ಇದಾದ ಬಳಿಕ ವಿದೇಶಗಳಿಗೆ ಹೋಗುವಾಗ ಹಲವಾರು ರೀತಿಯ ತಯಾರಿ ಮಾಡಿಕೊಳ್ಳಬೇಕಾಗಿದ್ದು, ಅವುಗಳಲ್ಲಿ ಡಾ.ಬ್ರೋ ಬಿಜಿಯಾಗಿದ್ದಾರೆ ಎಂದು ಯೂಟ್ಯೂಬ್​ಗಳಿಗೆ ಡಾ.ಬ್ರೋ ತಿಳಿಸುವ ಮೂಲಕ ಅಭಿಮಾನಿಗಳ ಮನಸ್ಸಿಗೆ ಸಮಾಧಾನ ತಂದಿದ್ದಾರೆ. ಆದರೆ ಇದರ ಮಧ್ಯೆಯೇ ತಮ್ಮ ಅಭಿಮಾನಿಗಳು ಗಾಬರಿ ಬೀಳಬಾರದು ಎನ್ನುವ ಕಾರಣಕ್ಕೆ ಹಳೆಯ ವಿಡಿಯೋಗಳ ತುಣುಕುಗಳನ್ನೇ ಗಗನ್​ ಮತ್ತೆ ಮತ್ತೆ ಶೇರ್ ಮಾಡುತ್ತಿದ್ದರು.

Tap to resize

Latest Videos

ಕಾಶ್ಮೀರದಲ್ಲಿ ಸಿಕ್ಕಾಕ್ಕೊಂಡ ಡಾ.ಬ್ರೋ: ಕ್ಯಾಮೆರಾ ಬಂದ್​ ಮಾಡಲ್ಲ, ಕನ್ನಡಿಗರಿಗೆ ತೋರಿಸ್ತೀನಿ ಎಂದು ಓಡಿದ ಗಗನ್​! 

ಇದೀಗ ಬಿಹಾರದಲ್ಲಿ ಕಾಣಿಸಿಕೊಂಡಿರುವ ಡಾ.ಬ್ರೋ ಅಲ್ಲಿ ಕೆಲವು ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಬಿಹಾರ ಎಂದು ಸೋಷಿಯಲ್‌ ಮೀಡಿಯಾದಲ್ಲಿ ತಿಳಿಸಿರುವ ಗಗನ್‌ ಅವರು, ಅಲ್ಲಿಯ ಮೇಕೆ, ಎಮ್ಮೆಯ ಜೊತೆ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ. ಇದೆ ವೇಳೆ ಆಟೋದ ಮುಂದೆಯೂ ಒಂದು ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಡಾ.ಬ್ರೋ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಕಮೆಂಟ್‌ ಬಾಕ್ಸ್‌ಗಳು ಹಾರ್ಟ್‌ ಇಮೋಜಿಯಿಂದ ತುಂಬಿ ಹೋಗಿವೆ. ಇಷ್ಟು ದಿನ ಎಲ್ಲಿದ್ದೀರಿ? ಯಾಕೆ ಕಾಣಿಸಿಕೊಂಡಿರಲಿಲ್ಲ? ನಿಮ್ಮನ್ನು ನೋಡದೇ ತುಂಬಾ ಬೇಸರವಾಗಿತ್ತು ಎಂದೆಲ್ಲಾ ಒಂದೇ ಸಮನೆ ಪ್ರಶ್ನೆಗಳ ಸುರಿಮಳೆಯನ್ನು ಕಮೆಂಟ್‌ಗಳಲ್ಲಿ ಕೇಳುತ್ತಿದ್ದಾರೆ. ದೇವ್ರು ದೇವ್ರು ಎನ್ನುವ ಮೂಲಕ ಕಮೆಂಟ್‌ ಹಾಕುತ್ತಿದ್ದಾರೆ. 

ಈಚೆಗಷ್ಟೇ ಗಗನ್‌ ಅವರು ಹಳೆಯ ಕೆಲವು ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದರು. ಮೊನ್ನೆಯಷ್ಟೇ ಕಾಶ್ಮೀರದ ಐಸ್​ ಗೋಪುರದಲ್ಲಿರುವ ರೆಸ್ಟೋರೆಂಟ್​ಗೆ ಭೇಟಿ ಕೊಟ್ಟ ಗಗನ್​ ಅಲ್ಲಿನ ಸೌಂದರ್ಯವನ್ನು ತೋರಿಸಿದ್ದರು. ಇದಕ್ಕೂ ಮುನ್ನ ಬೇರೆ ಬೇರೆ ದೇಶಗಳಿಗೆ ಈ ಹಿಂದೆ ಭೇಟಿ ಕೊಟ್ಟಿದ್ದ ವಿಡಿಯೋಗಳನ್ನು ಡಾ.ಬ್ರೋ ಶೇರ್‌ ಮಾಡಿಕೊಂಡಿದ್ದರು. ಸದ್ಯ ಹೊಸ ವಿಡಿಯೋ ಜೊತೆ ಮುಂದಿನ ತಿಂಗಳು ಅಂದರೆ ಜನವರಿಯಲ್ಲಿ ಮತ್ತೆ ಹೊಸ ಹೊಸ ವಿಡಿಯೋ ಮಾಡಲಿದ್ದಾರೆ ಎನ್ನಲಾಗಿದೆ. 

ಚೀನಾ ಹೊಗಳಿ ಪೇಚಿಗೆ ಸಿಲುಕಿದ್ರಾ ಡಾ.ಬ್ರೋ ಸುದ್ದಿ ಬೆನ್ನಲ್ಲೇ ಅಪಾಯಕಾರಿ ವಿಡಿಯೋ ಶೇರ್: ಫ್ಯಾನ್ಸ್​ ಡವಡವ...

 

click me!