ಕಿರುತೆರೆ ಲೋಕದಲ್ಲಿ ಒಂದು ಪ್ರಮುಖ ಪಾತ್ರ ಸಿಗುವುದು ಸುಲಭದ ಮಾತಲ್ಲ. ಅದರಲ್ಲೂ ಹೊಸಬರಿಗೆ ಇಂತಹ ಅವಕಾಶ ಸಿಕ್ಕಾಗ ಎದುರಾಗುವ ಸವಾಲುಗಳು ಅಷ್ಟಿಷ್ಟಲ್ಲ. 'ಸೀತೆ' ಧಾರಾವಾಹಿಯಲ್ಲಿ ಮುಖ್ಯ ಪಾತ್ರಕ್ಕೆ ಜೀವ ತುಂಬಿದ ನಟಿ ಶರ್ಮಿಳಾ ಚಂದ್ರಶೇಖರ್, ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಹಾಗೂ ಸೆಟ್ನಲ್ಲಿ ತಾವು ಅನುಭವಿಸಿದ ಕಹಿ ಘಟನೆಗಳು ಮತ್ತು ದೈವಾನುಗ್ರಹದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಮಾತುಗಳು ಕೆಲವರಿಗೆ ನಕಾರಾತ್ಮಕವಾಗಿ ಅನಿಸಬಹುದಾದರೂ, ವಾಸ್ತವವನ್ನು ಹೇಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ತಮ್ಮ ಕಷ್ಟದ ದಿನಗಳನ್ನು ನೆನೆದ ಶರ್ಮಿಳಾ, "ಯಾವುದೇ ಪಾತ್ರ ಸುಮ್ಮನೆ ಹುಡುಕಿಕೊಂಡು ಬರುವುದಿಲ್ಲ. ನಾನು ಸೀತೆಯಂತಹ ದೇವಿಯ ಪಾತ್ರ ಮಾಡುತ್ತಿದ್ದರೂ, ಸೆಟ್ನಲ್ಲಿ ಅನೇಕರಿಂದ ತೀವ್ರ ಕೆಟ್ಟ ನಡವಳಿಕೆಯನ್ನು ಎದುರಿಸಬೇಕಾಯಿತು. 'ಯಾರೋ ಹೊಸಬಳನ್ನು ಕರೆದುಕೊಂಡು ಬಂದಿದ್ದಾರೆ, ಇವಳಿಗೆ ಏನು ಬರುತ್ತದೆ?' ಎಂದು ಹೀಯಾಳಿಸಿದ್ದರು. ಆದರೆ, ಆರಂಭದಲ್ಲಿ ಎಲ್ಲರೂ ಹೊಸಬರೇ ಅಲ್ಲವೇ?" ಎಂದು ಪ್ರಶ್ನಿಸಿದ್ದಾರೆ. ಈ ಪಾತ್ರ ನಿರ್ವಹಿಸುವಾಗ ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಇನ್ನು ಸಹ-ಕಲಾವಿದರ ವರ್ತನೆಯ ಕುರಿತು ಮಾತನಾಡುತ್ತಾ, "ಸೆಟ್ನಲ್ಲಿ ಕೆಲವು ಸಹ-ಕಲಾವಿದರು ತುಂಬಾ ಅದ್ಭುತವಾಗಿದ್ದರು ಹಾಗೂ ಉತ್ತಮ ಬೆಂಬಲ ನೀಡಿದರು. ಆದರೆ ಇನ್ನೂ ಕೆಲವರು ತುಂಬಾ ಅವಮಾನಕರವಾಗಿ ನಡೆದುಕೊಂಡರು. ಬಹುಶಃ ತಮಗೆ ಸಿಗದ ಅವಕಾಶ ಯಾರೋ ಹೊಸಬಳಿಗೆ ಸಿಕ್ಕಿಬಿಟ್ಟಿದೆ ಎಂಬ ಕಾರಣಕ್ಕೆ ಅವರು ಆ ರೀತಿ ವರ್ತಿಸಿರಬಹುದು. ಆದರೂ ಪರವಾಗಿಲ್ಲ. ಒಂದು ಪಾತ್ರ ಮಾಡಿ ಮುಗಿಸಿದ ಮೇಲೆ ಜನ ಅದನ್ನು ಮರೆತುಬಿಟ್ಟರೆ ಸರಿ, ಆದರೆ, ಈ ಪಾತ್ರವನ್ನು ಜನ ಎಂದಿಗೂ ಮರೆಯುವುದಿಲ್ಲ" ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.
ಧಾರಾವಾಹಿಯ ಶೀರ್ಷಿಕೆಯ ಬಗ್ಗೆ ವಿಶ್ಲೇಷಿಸಿದ ಅವರು, "ಎಲ್ಲಾ ಅಡೆತಡೆಗಳ ನಡುವೆ ಕೊನೆಗೂ ಉಳಿದುಕೊಂಡಿದ್ದು ಯಾರು? ಆ ಪಾತ್ರವನ್ನು ನಿಭಾಯಿಸಿದವರೇ ತಾನೇ! ಇಂದು ಸೀತೆಯ ಪಾತ್ರವೇ ಉಳಿದುಕೊಳ್ಳುವುದು, ಏಕೆಂದರೆ ಈ ಧಾರಾವಾಹಿಯೇ 'ಸೀತೆ'. ಬೇಕಿದ್ದರೆ ಇದನ್ನು 'ರಾಮಾಯಣ' ಎಂದು ಮಾಡಬಹುದಿತ್ತು, ಆದರೆ ಯಾಕೆ 'ಸೀತೆ' ಎಂದು ಹೆಸರಿಟ್ಟರು ಎಂಬ ಆಲೋಚನೆಯನ್ನು ಒಮ್ಮೆ ಗಮನಿಸಿ" ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ತಮ್ಮ ಯಶಸ್ಸಿನ ಹಿಂದೆ ದೈವಿಕ ಶಕ್ತಿ ಇದೆ ಎಂದು ನಂಬಿರುವ ನಟಿ, "ಇಂದು ನಾವು ಬ್ರಹ್ಮಾಂಡದ ಶಕ್ತಿ ಹಾಗೂ 'ಮ್ಯಾನಿಫೆಸ್ಟೇಶನ್' ಬಗ್ಗೆ ಮಾತನಾಡುತ್ತೇವೆ. ನನ್ನ ಜೀವನದಲ್ಲೂ ಎಲ್ಲವೂ ಒಂದಕ್ಕೊಂದು ಸರಿಯಾಗಿ ಹೊಂದಾಣಿಕೆಯಾಗಿದೆ. ಮೊದಲ ಬಾರಿಗೆ ನನಗೆ ಸೀತೆಯ ಪಾತ್ರ ಸಿಕ್ಕಿದ್ದು ನನ್ನ ಪುಣ್ಯ ಹಾಗೂ ದೇವರ ಆಶೀರ್ವಾದವೆಂದೇ ಭಾವಿಸುತ್ತೇನೆ. ಬಹುಶಃ ನಾನು ಈ ಸೀತೆಯ ಪಾತ್ರವನ್ನು ಮಾಡಬೇಕೆಂದೇ ದೇವರು ನನ್ನನ್ನು ಈ ಹಿಂದೆ ವೇದಿಕೆಯ ಮೇಲೆ ಅಷ್ಟೊಂದು ಬಾರಿ ಸಿದ್ಧಪಡಿಸಿದ್ದಿರಬೇಕು. ಖಂಡಿತವಾಗಿಯೂ ಇದರಲ್ಲಿ ದೈವ ಇಚ್ಛೆ ಇದೆ ಅನಿಸುವುದಿಲ್ಲವೇ?" ಎಂದು ಭಾವುಕರಾಗಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ತಮಗೆ 'ಸೀತೆ' ಪಾತ್ರ ಸಿಕ್ಕ ಕುತೂಹಲಕಾರಿ ಹಿನ್ನೆಲೆಯನ್ನು ನಟಿ ಶರ್ಮಿಳಾ ಚಂದ್ರಶೇಖರ್ ಈ ಹಿಂದೆ ಹಂಚಿಕೊಂಡಿದ್ದರು. "ಆಗ ನಾನು 'ನಮ್ಮಮ್ಮ ಶಾರದೆ' ಧಾರಾವಾಹಿಯಲ್ಲಿ ನಟಿಸಬೇಕಿತ್ತು. ಅದೇ ಸಮಯದಲ್ಲಿ ನನಗೆ 'ಸೀತೆ' ಧಾರಾವಾಹಿಯ ಅವಕಾಶ ಸಿಕ್ಕಿತು. ಆರಂಭದಲ್ಲಿ ಊರ್ಮಿಳಾ ಪಾತ್ರಕ್ಕೆ ಆಡಿಷನ್ ನೀಡಲು ನನಗೆ ಹೇಳಿದ್ದರು. ಆದರೆ, ಆಡಿಷನ್ ಕೊಟ್ಟ ಬಳಿಕ ಏನಾಯಿತೋ ಗೊತ್ತಿಲ್ಲ, ನನ್ನನ್ನೇ ಸೀತೆ ಪಾತ್ರ ಮಾಡುವಂತೆ ಕೇಳಿದರು" ಎಂದು ಅವರು ತಿಳಿಸಿದ್ದಾರೆ.
ಮುಂದುವರಿದು, "ಅಷ್ಟಕ್ಕೂ ಸೀತೆ ಪಾತ್ರಕ್ಕೆ ಆಗಲೇ ಬೇರೊಬ್ಬ ಹುಡುಗಿಯ ಆಯ್ಕೆ ಆಗಿತ್ತು. ಆದರೆ, ಆಕೆಗಿಂತ ನಾನು ಚೆನ್ನಾಗಿ ಕಾಣಿಸುತ್ತೇನೆ ಎನಿಸಿತೋ ಏನೋ, ಕೊನೆಗೆ ನನ್ನನ್ನೇ ಆಯ್ಕೆ ಮಾಡಿದರು. ಅಷ್ಟೇ ಅಲ್ಲದೆ, ನನ್ನ ಹಾಗೂ ಆ ಇನ್ನೊಬ್ಬ ಹುಡುಗಿಯಲ್ಲಿ ಯಾರು ಸೀತೆಯಾಗಿ ಚೆನ್ನಾಗಿ ಕಾಣಿಸುತ್ತಾರೆ ಎಂದು ತಿಳಿಯಲು ವಾಹಿನಿಯಲ್ಲಿದ್ದವರ ಬಳಿಯೇ ಮತದಾನ (ವೋಟ್) ಮಾಡಿಸಿ ಆಯ್ಕೆ ಮಾಡಿದ್ದರಂತೆ. ಅದರಲ್ಲಿ ನನಗೆ ಹೆಚ್ಚು ಮತಗಳು ಸಿಕ್ಕಿ ಸೀತೆಯಾಗಿ ಆಯ್ಕೆಯಾದೆ. ಆದರೆ ಆ ಇನ್ನೊಬ್ಬ ಹುಡುಗಿ ಯಾರು ಎಂಬುದು ನನಗೆ ನಿಜಕ್ಕೂ ತಿಳಿದಿಲ್ಲ" ಎಂದು ಶರ್ಮಿಳಾ ಚಂದ್ರಶೇಖರ್ ಆ ದಿನಗಳನ್ನು ನೆನೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.