ಕಿರುತೆರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯ ಜಾಹ್ನವಿ ಪಾತ್ರಧಾರಿ ಚಂದನಾ ಅನಂತಕೃಷ್ಣ ಅವರು ಸೀರಿಯಲ್ ತೊರೆದಿದ್ದಾರೆಂದು ಸುದ್ದಿ ಹಬ್ಬಿದೆ.
ಕಿರುತೆರೆ ನಟಿ, ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿಯಾಗಿ ಮಿಂಚುತ್ತಿರುವ ಚಂದನಾ ಅನಂತಕೃಷ್ಣ ಅವರು ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಭರತನಾಟ್ಯ ಕಲಾವಿದೆ. ಮಾಜಿ ಬಿಗ್‌ಬಾಸ್ ಸ್ಪರ್ಧಿ, ಗಾಯಕಿ ಮಾತ್ರವಲ್ಲ ನಿರೂಪಕಿ ಆಗಿಯೂ ಗುರುತಿಸಿಕೊಂಡಿರುವ ನಟಿ ಚಂದನಾ ಅನಂತಕೃಷ್ಣ ಭಾವ ತೀರ ಯಾನ ಎಂಬ ಸಿನೆಮಾದ ಮೂಲಕ ಸ್ಯಾಂಡಲ್‌ವುಡ್ ಗೆ ಕಾಲಿಡುತ್ತಿದ್ದಾರೆ.
ಸದ್ಯ ಚಂದನಾ ಅನಂತಕೃಷ್ಣ ಅವರು ಕಿರುತೆರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸೈಕೋ ಗಂಡನೊಬ್ಬನ ಹೆಂಡತಿಯಾಗಿ ಕಷ್ಟ ಪಡುತ್ತಿರುವ ಪಾತ್ರವದು.
"ಭಾವ ತೀರ ಯಾನ" ಸಿನೆಮಾದಲ್ಲಿ ಧೃತಿ ಎಂಬ ಪಾತ್ರದಲ್ಲಿ ಚಂದನಾ ಮಿಂಚುತ್ತಿದ್ದು, ಇತ್ತೀಚೆಗಷ್ಟೇ ಫಸ್ಟ್ ಲುಕ್ ರಿವೀಲ್ ಆಗಿತ್ತು. ಇದೀಗ ಸಿನೆಮಾಗಾಗಿ ನಟಿ ಚಂದನ ಅನಂತ ಕೃಷ್ಣ ಅವರು ಲಕ್ಷ್ಮೀ ನಿವಾಸ ಧಾರವಾಹಿಯನ್ನು ತೊರೆದಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿದ್ದೇ ತಡ. ಜಯಂತ್ ನ ಕಾಟಕ್ಕೆ ಜಾಹ್ನವಿ ಸೀರಿಯಲ್ ಬಿಟ್ಟಿದ್ದಾರೆಂದು ತರಹೇವಾರಿ ಕಮೆಂಟ್‌ಗಳು ಬರುತ್ತಿದೆ.
ಶೂಟಿಂಗ್‌ಗೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಸೀರಿಯಲ್ ನಿಂದ ಹೊರಬಂದಿದ್ದಾರೆಂದು ಸುದ್ದಿ ಹಬ್ಬಿದೆ. ಈ ಕುರಿತಾಗಿ ಚಂದನಾ ಯಾವುದೇ ಸ್ಪಷ್ಟತೆ ನೀಡಿಲ್ಲ. ಆದರೆ ಈ ಬಗ್ಗೆ ಸುವರ್ಣ ನ್ಯೂಸ್ ವೆಬ್ ಟೀಂ ಜೀ ಕನ್ನಡ ವಾಹಿನಿಯನ್ನು ಸಂಪರ್ಕಿಸಿದಾಗ ಚಂದನಾ ಅವರು ಸೀರಿಯಲ್ ತೊರೆದಿಲ್ಲ. ಆ ರೀತಿಯ ಯಾವುದೇ ಬೆಳವಣಿಗೆ ಈವರೆಗೆ ಆಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಭಾವ ತೀರ ಯಾನ ಸಿನೆಮಾವನ್ನು ಕನ್ನಡದ ಶಾಖಾಹಾರಿ ಚಿತ್ರಕ್ಕೆ ಸಂಗೀತ ನೀಡಿದ್ದ ಮಯೂರ ಅಂಬೇಕಲ್ಲು ಮತ್ತು ಅವರ ಸ್ನೇಹಿತ ತೇಜಸ್ ಕಿರಣ್ ಡೈರೆಕ್ಟ್ ಮಾಡುತ್ತಿದ್ದಾರೆ. ಯುವ ಪ್ರತಿಭೆಗಳು ಈ ಚಿತ್ರದಲ್ಲಿ ಹೆಚ್ಚಾಗಿದ್ದು, ಇದು ಹೊಸಬರ ಸಿನೆಮಾ ಎಂದರೆ ತಪ್ಪಾಗಲ್ಲ.