
ಏನ್ ತಿಪ್ಪರಲಾಗ ಹಾಕಿದ್ರೂ ಸರಿ, ರೇಟಿಂಗ್ ಒಂದು ಸಖತ್ತಾಗಿ ಬರಬೇಕು ಇದು ಚಾನಲ್‌ಗಳ ಮುಖ್ಯಸ್ಥರು ಸದಾ ಗುನುಗೋ ಮಂತ್ರ. ಸೀರಿಯಲ್ ಟಿಆರ್‌ಪಿ ರೇಸಲ್ಲಿ ಮುಂದೆ ಹೋದಷ್ಟೂ ಆ ಸೀರಿಯಲ್‌ಗೆ ಬಜೆಟ್, ಅವಾರ್ಡು ಅದು ಇದು ಎಲ್ಲ ಸಿಗುತ್ತೆ. ಅದೇ ರೇಟಿಂಗ್ ಬಿತ್ತು ಅಂದ್ಕೊಳ್ಳಿ ಅದರ ಕಥೆ ಯಾರಿಗೂ ಬೇಡ. ರೇಟಿಂಗ್ ಬಂದಿಲ್ಲ ಅನ್ನೋ ಕಾರಣಕ್ಕೆ ಎಷ್ಟೋ ಸೀರಿಯಲ್‌ಗಳು ನೂರು ಎಪಿಸೋಡ್ ದಾಟೋ ಮೊದಲೇ ಗೇಟ್‌ಪಾಸ್ ತಗೊಂಡ ಉದಾಹರಣೆ ಇದೆ. ಕಲರ್ಸ್ ಕನ್ನಡದಲ್ಲಂತೂ ಮನೆ ದೇವ್ರು ಸೀರಿಯಲ್ ಇದಕ್ಕೆ ಇತ್ತೀಚಿನ ಎಕ್ಸಾಂಪಲ್. ಅದರಲ್ಲಿ ಮಯೂರಿ ಕ್ಯಾತರಿ ಮುಖ್ಯ ಪಾತ್ರದಲ್ಲಿ ನಟಿಸಿದ್ರು. ಅವಿನಾಶ್ ಕೂಡ ಮೇನ್ ಲೀಡ್ ಪಾತ್ರ ಮಾಡುತ್ತಿದ್ದರು. ಹಾಗೆ ಇನ್ನೊಂದಿಷ್ಟು ಸೀರಿಯಲ್‌ಗಳು ಕೂಡ ಸರಿಯಾಗಿ ಫಾರ್ಮಿಗೆ ಬರೋ ಮೊದಲೇ ಆಚೆ ಹೊಂಟೋಗ್ಬಿಟ್ಟವು. ಇದರ ಸಾಫ್ಟ್ ವರ್ಶನ್‌ನಂತೆ ಒಂದು ಜನಪ್ರಿಯತೆ ಪಡೆದಿದ್ದ ಸೀರಿಯಲ್‌ನ ಟೈಮಿಂಗ್ ಬದಲಾಗಿದೆ. ಪ್ರೈಮ್ ಟೈಮಲ್ಲಿ ಬರ್ತಿದ್ದ ಸೀರಿಯಲ್ ಇದೀಗ ಹೊತ್ತಲ್ಲದ ಹೊತ್ತಲ್ಲಿ ಪ್ರಸಾರ ಕಾಣೋ ಹಾಗಾಗಿದೆ. ಈ ಸೀರಿಯಲ್‌ನ ಕತೆಯೇ ಇದಕ್ಕೆ ಶಾಪವಾದ ಹಾಗಿದೆ. ಸೋ ಬೇರೇನು ಮಾಡಲಾಗದೇ ಟೈಮಿಂಗ್ ಬದಲಿಸಿದಂತೆ ಕಾಣುತ್ತದೆ.
ಅಂದಹಾಗೆ ಹೀಗೆ ಪ್ರೈಮ್ ಟೈಮಿಂದ ಹಿಂದಕ್ಕೆ ಚಲಿಸಿರೋ ಸೀರಿಯಲ್ ಸೀತಾರಾಮ. ಈ ಸೀರಿಯಲ್ ಶುರುವಿಗೆ ಟಿಆರ್‌ಪಿಯಲ್ಲಿ ಮುಂದಿತ್ತು. ಪುಟ್ಟ ಹುಡುಗಿಯ ಕಥೆ ಗಮನ ಸೆಳೆಯೋಹಾಗೂ ಇತ್ತು. ಒಂದು ಲವ್‌ಸ್ಟೋರಿಯೂ ಕಾಣಿಸಿಕೊಂಡು ಲೈವ್ಲೀ ಆಗಿ ಸೀರಿಯಲ್ ಮೂಡಿಬಂತು. ಆದರೆ ಈಗೀಗಿನ ಪ್ರೇಕ್ಷಕರಿಗೆ ಅಳೋದು, ಯಾವಾಗಲೂ ಬೇಸರ ಇರೋದು, ನೋವು ತರೋ ತರದ ಸೀರಿಯಲ್‌ಗಳು ಅಂದರೆ ಅಷ್ಟಕ್ಕಷ್ಟೇ. ಬಕೆಟ್‌ಗಟ್ಟಲೆ ಕಣ್ಣೀರು ಸುರಿಸೋ ಸ್ಟೋರಿಗಿಂತ ಲವಲವಿಕೆಯ ಕಥೆಯನ್ನೆ ಈಗ ಸೀರಿಯಲ್ ವೀಕ್ಷಕರು ಮೆಚ್ಚಿಕೊಳ್ತಾರೆ. ಸೀತಾರಾಮದಲ್ಲಿ ಸಿಹಿ ಎಂಬ ಪುಟಾಣಿ ಸೀರಿಯಲ್‌ನ ಮುಖ್ಯ ಭಾಗ ಆಗೋವರೆಗೆ ಎಲ್ಲವೂ ಚೆನ್ನಾಗಿತ್ತು. ಆದರೆ ಯಾವಾಗ ಈ ಸೀರಿಯಲ್‌ನ ಜೀವಾಳವೇ ಆಗಿದ್ದ ಪಾತ್ರವನ್ನು ಟಿಆರ್‌ಪಿ ಹೆಚ್ಚಿಸೋಕೆ ಅಂತ ಸಾಯಿಸಿಬಿಟ್ರೋ ಆಗ ಇದ್ದಬದ್ದ ಟಿಆರ್‌ಪಿಯೂ ಇಳಿದುಬಿಡ್ತು. ಆಮೇಲೆ ಆ ಮಗುವನ್ನೇ ಡಬಲ್ ರೋಲ್‌ನಲ್ಲಿ, ಏಂಜಲ್ ಲುಕ್‌ನಲ್ಲಿ ತೋರಿಸಿದ್ರೂ ಏನೇನೂ ವರ್ಕೌಟ್ ಆಗಿಲ್ಲ.
ಕಿರುತೆರೆ ಮೇಕಪ್ ಆರ್ಟಿಸ್ಟ್ ಮದುವೆಯಾದ ಖ್ಯಾತ ನಟ ಕಾರ್ತಿಕ್; ಹೆಂಡತಿ ಸೀಮಂತ ಫೋಟೋ ವೈರಲ್!
ಬೇರೆ ದಾರಿಯಿಲ್ಲದೇ ಈ ಸೀರಿಯಲ್ ಟೈಮಿಂಗನ್ನೇ ಚಾನಲ್ ಚೇಂಜ್ ಮಾಡಿಬಿಟ್ಟಿದೆ. ಈ ಹಿಂದೆ ಈ ಸೀರಿಯಲ್ ರಾತ್ರಿ ಒಂಭತ್ತೂವರೆಗೆ ಪ್ರಸಾರ ಆಗ್ತಿತ್ತು. ಈಗ ಸೀರಿಯಲ್ ಟೈಮಿಂಗನ್ನು ಐದೂವರೆಗೆ ಶಿಫ್ಟ್ ಮಾಡಲಾಗಿದೆ. 'ಇನ್ಮುಂದೆ ನಿಮ್ಮ ಧಾರಾವಾಹಿ ಸಮಯ ಐದೂವರೆಯಿಂದಲೇ ಶುರು' ಎಂಬ ಆಕರ್ಷಕ ಟ್ಯಾಗ್‌ಲೈನ್ ಕೊಟ್ಟು ಬದಲಾದ ಟೈಮನ್ನು ಹೇಳಿದ್ದಾರೆ. ಈ ಸೀರಿಯಲ್ ಅನ್ನು ಮನಸ್ಸಿಗೆ ಹಚ್ಕೊಂಡಿದ್ದ ಒಂದಿಷ್ಟು ಜನ ಈ ಪ್ರೋಮೋದಲ್ಲೇ ಕಣ್ಣೀರು ಸುರಿಸೋ ಇಮೋಜಿ ಹಾಕಿ ತಮ್ಮ ನೋವನ್ನು ಹೊರಹಾಕಿದ್ದಾರೆ. 'ಐದೂವರೆಗೆ ಹಾಕಿದ್ರೆ ಯಾರು ನೋಡ್ತಾರೆ. ಬಹಳ ಡಿಸಪಾಯಿಂಟ್ ಆಗಿದೆ' ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಇನ್ನು ಇದ್ದಬದ್ದ ರೇಟಿಂಗೂ ಬಿದ್ದೋದಂತೆ. ಈ ಸೀರಿಯಲ್ ಕಥೆ ಅಷ್ಟೇ' ಅಂದಿದ್ದಾರೆ.
ಕುಡಿದ ಮತ್ತಿನಲ್ಲಿ ಪೊಲೀಸ್ ಕೆನ್ನೆಗೆ ಬಾರಿಸಿ ಜೈಲು ಸೇರಿದ ಅಪೇಕ್ಷಾಗೆ ಭೂಮಿಯೇ ಕಾವಲು
ಹಾಗೆ ನೋಡಿದರೆ ಈ ಸೀರಿಯಲ್‌ನ ಪಾತ್ರವರ್ಗ ಚೆನ್ನಾಗಿದೆ. ಆದರೆ ಇತ್ತೀಚೆಗೆ ಕತೆ ಬಹಳ ಲ್ಯಾಗ್ ಆಗ್ತಿತ್ತು ಅನ್ನೋ ಕಂಪ್ಲೇಂಟ್ ಕೇಳಿ ಬರ್ತಿತ್ತು. ಅಲ್ಲದೇ ಏಕತಾನತೆ ಸ್ಟೋರಿಯಲ್ಲಿ ಎದ್ದು ಕಾಣ್ತಿತ್ತು ಅನ್ನೋ ಅಭಿಪ್ರಾಯವೂ ಬಂದಿದೆ. ಸೋ ಐದೂವರೆಗೆ ಸೀರಿಯಲ್ ಟೈಮಿಂಗ್ ಶಿಫ್ಟ್ ಆಯ್ತು ಅಂದರೆ ಅಲ್ಲಿಗೆ ಈ ಸೀರಿಯಲ್ ಕತೆ ಮುಗಿದಂತೆ ಅಂತ ಈ ಸೀರಿಯಲ್ ಫ್ಯಾನ್ಸ್ ಅಂದ್ಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.