ಸೀರಿಯಲ್‌ನ ಕೆಲವು ಪಾತ್ರಗಳು ಜನರಿಗೆ ಅದೆಷ್ಟು ಇಷ್ಟ ಆಗುತ್ತೆ ಅಂದ್ರೆ ಇವ್ರು ರಿಯಲ್ ಲೈಫ್‌ನಲ್ಲೂ ಜೊತೆಯಾಗಿರಲಿ ಅಂತ ಬಯಸ್ತಾರೆ. ಆದರೆ ಸೀರಿಯಲ್‌ನಲ್ಲಿ ಮಾತ್ರ ನಾವು ಲವರ್ಸ್ ಅಂತ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಸ್ನೇಹ, ಕಂಠಿ ಪಾತ್ರಧಾರಿಗಳಾದ ಸಂಜನಾ ಬುರ್ಲಿ, ಧನುಷ್ ಎನ್ ಎಸ್ ಹೇಳಿದ್ದಾರೆ.
ವರ್ಷಾನುಗಟ್ಟಲೆ ನಡೆಯೋ ಸೀರಿಯಲ್‌ಗಳಿಗೆ ಜನ ಯಾವ ರೀತಿ ಕನೆಕ್ಟ್ ಅಗಿರ್ತಾರೆ ಅಂದರೆ ರೀಲ್, ರಿಯಲ್ ನಡುವಿನ ವ್ಯತ್ಯಾಸವನ್ನೇ ಮರೆತು ಮಾತಾಡ್ತಾರೆ. ನಟ, ನಟಿಯರು ಆ ಪಾತ್ರಗಳ ಹೆಸರಿಂದಲೇ ಗುರುತಿಸುತ್ತಾರೆ. ಎಲ್ಲಾದರೂ ಸಿಕ್ಕರೆ ಆ ಹೆಸರಿಂದಲೇ ಕರೆಯುತ್ತಾರೆ. ಅದೊಂದು ಕಥೆ ಅನ್ನೋದನ್ನೂ ಮರೆತು ವಿಲನ್‌ಗೆ ನೇರಾ ನೇರ ಉಗಿದು ಉಪ್ಪಿನಕಾಯಿ ಹಾಕ್ತಾರೆ. ಹೀರೋ ಹೀರೋಯಿನ್ ಗೆ ಏನೇನೋ ಸಲಹೆ ಕೊಡ್ತಾರೆ. ಅಲ್ರವ್ವಾ, ಯಾರೋ ಬರ್ದು ಕೊಟ್ಟ ಡೈಲಾಗನ್ನಷ್ಟೇ ಉದುರಿಸ್ತೀವಿ, ಅದು ಬಿಟ್ರೆ ನಮ್ದೇನಿಲ್ಲ ಅನ್ನೋ ಕಲಾವಿದರ ಮಾತುಗಳೆಲ್ಲ ಅವರ ತಲೆಗೂ ಹೋಗಲ್ಲ. ವಿಷ್ಯ ಇಷ್ಟೇ ಆದ್ರೆ ಓಕೆ, ಆದರೆ ಈಗಿನ ಕಾಲ ಹೇಗಪ್ಪ ಅಂದ್ರೆ ಬೆಳ್ ಬೆಳಗ್ಗೆ ಕಣ್ ಬಿಡೋಕೂ ಮೊದಲು ಕೈ ಮೊಬೈಲ್‌ಗಾಗಿ ತಡಕಾಡುತ್ತಾ ಇರುತ್ತೆ. ಸೋ ಮೊಬೈಲ್‌ನಲ್ಲಿ ಟ್ರೋಲ್, ರೀಲ್ಸ್, ವೀಡಿಯೋಗಳ ಹಾವಳಿ. ಹೀರೋ ಹೀರೋಯಿನ್ ನಡುವೆ ಕೊಂಚ ಕ್ಲೋಸ್ ಆಗಿರೋ ಸೀನ್ ಬಂದ ಕೂಡಲೇ ಕಟ್ ಮಾಡಿ ರೀಲ್ಸ್ ಮಾಡೋದು, ಬರೀ ಸೀರಿಯಲ್‌ನಲ್ಲಿ ಹೀರೋ ಹೀರೋಯಿನ್ ರೊಮ್ಯಾನ್ಸ್ ನೋಡಿ ಸುಮ್ಮನಾಗ್ತಿದ್ದ ಜನ ಅದನ್ನೇ ಪದೇ ಪದೆ ನೋಡೋಹಂಗಾದಾಗ ಇನ್ನಷ್ಟು ತೀವ್ರವಾಗಿ ಆ ಪಾತ್ರಗಳಿಗೆ ಅಂಟಿಕೊಳ್ಳೋ ಹಾಗಾಗುತ್ತೆ.
ಇದೆಲ್ಲದರ ಪರಿಣಾಮ ಅಂದ್ರೆ ಜನ ಸೀರಿಯಲ್ ಪಾತ್ರಗಳನ್ನು ರಿಯಲ್ ಅಂತಲೇ ಭಾವಿಸಿ ರಿಯಲ್‌ನಲ್ಲೂ ಅವರಿಬ್ಬರೂ ಜೊತೆಯಾಗಿ ಇರಬೇಕು ಅಂದುಕೊಳ್ಳೋದು. ಪಬ್ಲಿಕ್‌ನಲ್ಲಿ ಇಂಥ ಬಿಹೇವಿಯರ್ ನೋಡ್ತಿದ್ರೆ ಕಲಾವಿದರಿಗೆ ಬಾಯಲ್ಲಿ ಬಿಸಿ ತುಪ್ಪ ಇಟ್ಕೊಂಡಂಥಾ ಸ್ಥಿತಿ. ಅತ್ತ ಉಗುಳೋಕೂ ಆಗಲ್ಲ ಇತ್ತ ನುಂಗೋಕೂ ಆಗಲ್ಲ. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ 'ಪುಟ್ಟಕ್ಕನ ಮಕ್ಕಳು' ಸೀರಿಯಲ್‌ನ ಫೇಮಸ್ ಜೋಡಿ ಸ್ನೇಹ ಮತ್ತು ಕಂಠಿ. ಈ ಪಾತ್ರವನ್ನು ಸಂಜನಾ ಬುರ್ಲಿ ಮತ್ತು ಧನುಷ್ ಎನ್ ಎಸ್ ನಿರ್ವಹಿಸ್ತಾ ಇದ್ದಾರೆ. ಸ್ಕ್ರೀನ್ ಮೇಲೆ ಈ ಜೋಡಿಯನ್ನ ನೋಡಿರೋ ಜನ ಇವರ ವೀಡಿಯೋಗಳನ್ನು ರೀಲ್ಸ್ ಮಾಡಿದ್ದೂ ಇದೆ. ನಂಬರ್ ೧ ಸ್ಥಾನದಲ್ಲಿರೋ ಈ ಸೀರಿಯಲ್‌ನ ಈ ಜೋಡಿಯನ್ನೂ ನಂಬರ್ 1 ಅಂತಲೇ ಹೇಳಬಹುದು. ಆದರೆ ಮುದ್ದಾದ ಈ ಜೋಡಿಯನ್ನು ರಿಯಲ್ ಲೈಫನಲ್ಲೂ ಲವರ್ಸ್ ಥರ ನೋಡಿದಾಗ ಇಬ್ಬರಿಗೂ ಒಂಥರಾ ಫೀಲ್ ಆಗಿದೆ. ಇದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡ ಸಂಜನಾ ಬುರ್ಲಿ, 'ಸ್ಕ್ರೀನ್ ಮೇಲಷ್ಟೇ ನಾವಿಬ್ರೂ ಲವರ್ಸ್. ಸ್ಕ್ರೀನ್ ಮೇಲಿನ ಸಂಗತಿಗಳನ್ನು ಸ್ಕ್ರೀನ್‌ನ ಆಚೆನೂ ಅದೇ ರೀತಿ ನೋಡಬೇಡಿ' ಅಂದಿದ್ದಾರೆ.
ತುಂಬಾ ಕಮಿಟ್ಮೆಂಟ್ ಇದೆ ಮನೆ ಲೋನ್ ತೀರಿಸಬೇಕು: ಗಿಚ್ಚಿ ಗಿಲಿಗಿಲಿ ಜಾನ್ವಿಗೆ ತಲೆ ಬಿಸಿ!
ಈ ಹಿಂದೆಯೂ ಈ ಥರದ ಸಂಗತಿಗಳು ನಡೆದಿವೆ. ತೆಲುಗಿನ ಫೇಮಸ್ ಸೀರಿಯಲ್ ಒಂದು ಹೊಂಗನಸು ಅನ್ನೋ ಹೆಸರಲ್ಲಿ ಕನ್ನಡಕ್ಕೆ ಡಬ್ ಆಗಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಿದೆ. ಇದಕ್ಕೆ ಹೆಚ್ಚಿನ ಸಂಖ್ಯೆಯ ಫಾಲೋವರ್ಸ್ ಸಹ ಇದ್ದಾರೆ. ಇದರಲ್ಲಿ ರಿಷಿ ಸರ್ ಮತ್ತು ವಸುಧಾರ ಜೋಡಿಯನ್ನು ಜನ ಯಾವ ಪಾಟಿ ಇಷ್ಟ ಪಡ್ತಾರೆ ಅಂದ್ರೆ ಇವರು ಹೊರಗೆಲ್ಲಾದರೂ ಕಾಣಿಸಿಕೊಂಡರೆ ಕೇಳೋ ಮೊದಲ ಪ್ರಶ್ನೆ ನಿಮ್ಮಿಬ್ಬರ ಮದುವೆ ಯಾವಾಗ ಅಂತ. ಸಾಧ್ಯವಾದಾಗಲೆಲ್ಲ ನಾವಿಬ್ಬರೂ ಸ್ಕ್ರೀನ್‌ನಲ್ಲಷ್ಟೇ ಪ್ರೇಮಿಗಳು. ಸ್ಕ್ರೀನ್‌ನ ಆಚೆ ಒಳ್ಳೆ ಫ್ರೆಂಡ್ಸ್ ಅಷ್ಟೇ. ಅದರಾಚೆ ನಮ್ಮಿಬ್ಬರ ನಡುವೆ ಯಾವ ಫೀಲ್ ಕೂಡ ಇಲ್ಲ ಅಂತ ಹೇಳ್ತಾನೇ ಬರ್ತಿದ್ದಾರೆ. ಆದರೆ ಸ್ಕ್ರೀನ್ ಮೇಲೆ ಇವರಿಬ್ಬರ ಕೆಮೆಸ್ಟ್ರಿ ಜನರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಜೋಡಿಯಲ್ಲಿ ರಿಷಿ ಪಾತ್ರ ಮಾಡ್ತಿರೋ ಮುಕೇಶ್ ಅನ್ನೋ ಮೈಸೂರು ಮೂಲದ ನಟ. ಯಾರೋ ಹುಡುಗಿ ಫ್ರೆಂಡ್ ಜೊತೆಗೆ ನಿಂತಿರೋ ಹಳೇ ಫೋಟೋ ಸಿಕ್ಕರೂ ಜನ ಕ್ಲಾಸ್ ತಗೊಳ್ಳೋ ಹಾಗಾಗಿದೆ. ವಸು ಪಾತ್ರ ಮಾಡ್ತಿರೋ ಬೆಂಗಳೂರು ಹುಡುಗಿ ರಕ್ಷಾ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ.
ಸೋ ಈ ಬಗೆಯ ಟ್ರೆಂಡ್ ಅನ್ನು ಹೇಗೆ ಸ್ವೀಕರಿಸೋದೋ ತಿಳಿಯದೇ ಕಲಾವಿದರು ಕಂಗಾಲಾಗಿರೋದು ಮಾತ್ರ ಸತ್ಯ.
'ರಾಮಾಚಾರಿ' ಧಾರಾವಾಹಿಯಿಂದ ಹೊರ ನಡೆದ ನಟಿ ಸಿರಿ: ಕಾರಣವೇನು?