ತಮ್ಮ ತಾಯಿ ಸರೋಜಾ ಅವರ 11ನೇ ದಿನದ ಕಾರ್ಯದಂದು ನಡೆದ ಪವಾಡದ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ಕೇಳಿ...
ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸುದೀಪ್ ಅವರ ತಾಯಿ ಸರೋಜಾ ಕಳೆದ ಅಕ್ಟೋಬರ್‌ನಲ್ಲಿ ನಿಧನರಾದರು. ಖುದ್ದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸರೋಜಾ ಅವರ ಅಗಲಿಕೆಗೆ ದುಃಖ ವ್ಯಕ್ತಪಡಿಸಿ ಸುದೀಪ್ ಅವರ ಬೆಂಬಲಕ್ಕೆ ನಿಂತಿದ್ದರು. 11ನೇ ದಿನದ ಕಾರ್ಯ ನಡೆಯುವ ಸಂದರ್ಭದಲ್ಲಿ ನಡೆದ ಕುತೂಹಲದ ಘಟನೆಯೊಂದನ್ನು ಸುದೀಪ್ ಅವರು ಆ್ಯಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ. ಅನುಶ್ರೀ ಅವರು ಸುದೀಪ್ ಅವರಿಗೆ ಅಮ್ಮ-ಮಗ ಒಟ್ಟಿಗೆ ಇರುವ ಪೇಂಟಿಂಗ್ ಒಂದನ್ನು ಗಿಫ್ಟ್ ಮಾಡಿದರು. ಅದನ್ನು ನೋಡಿ ಭಾವುಕರಾದ ಸುದೀಪ್ ಅವರು, ಅಂದು ನಡೆದ ಘಟನೆಯ ಬಗ್ಗೆ ವಿವರಿಸಿದರು. ಅಮ್ಮ ನಿಧನರಾದ ಸಂದರ್ಭದಲ್ಲಿ ಸುದೀಪ್ ಅವರು ಇಂಗ್ಲಿಷ್ನಲ್ಲಿ ಭಾವುಕ ಪತ್ರವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು, ಯಾವಾಗಲೂ ಪ್ರೀತಿಯ ಧಾರೆ ಹರಿಸುತ್ತಾ, ರಕ್ಷಣೆ ನೀಡುತ್ತಾ, ಕ್ಷಮಿಸುತ್ತಾ , ಪೂರ್ವಾಗ್ರಹ ಪೀಡಿತ ಯೋಚನೆಗಳನ್ನು ಹೊಂದಿರದ ನನ್ನಮ್ಮ ಈಗ ಇಲ್ಲ. ಅವರ ಜೊತೆಗಿದ್ದ ಜೀವನ ಚೆನ್ನಾಗಿತ್ತು, ಸಂಭ್ರಮಿಸಿದ್ದೆ, ಯಾವಾಗಲೂ ನೆನಪಿನಲ್ಲಿ ಇಟ್ಟುಕೊಂಡಿದ್ದೆ. ಮಾನವ ರೂಪದಲ್ಲಿದ್ದ ದೇವರು ನನ್ನ ತಾಯಿ. ನನ್ನ ತಾಯಿಯೇ ನನಗೆ ಹಬ್ಬ, ಟೀಚರ್ ಆಗಿದ್ದರು, ಹಿತೈಷಿಯೂ ಹೌದು. ಅಷ್ಟೇ ಅಲ್ಲದೆ ನನ್ನ ಮೊದಲ ಅಭಿಮಾನಿಯೂ ಹೌದು ಎಂದಿದ್ದರು.
ರೊಮಾನ್ಸ್ ಸೀನ್ ಮಾಡುವಾಗ ಕೆಲವು ನಟಿಯರು ಕೊಡೋ ಕಾಟದ ಬಗ್ಗೆ ಕಿಚ್ಚ ಸುದೀಪ್ ಓಪನ್ ಮಾತು!
undefined
ಇದೀಗ 11ನೇ ದಿನ ನಡೆದ ಪವಾಡದ ಬಗ್ಗೆ ಅವರು ವಿವರಿಸಿದ್ದಾರೆ. 'ಬಹುಶಃ ಇದನ್ನು ಹೇಳಿದರೆ ಕೆಲವರು ನಂಬಲಿಕ್ಕಿಲ್ಲ. ಅಂದು ನಡೆದದ್ದು ನಿಜಕ್ಕೂ ಪವಾಡ. ಅಲ್ಲಿದ್ದವರು ಒಂದೆರಡು ಮಾತನ್ನಾಡಲು ಹೇಳಿದರು. ಆದರೆ ನಾನು ಮೌನಕ್ಕೆ ಜಾರಿದ್ದೆ. ಮಾತು ಬರುತ್ತಿರಲಿಲ್ಲ. ಆದರೆ ತುಂಬಾ ಕೇಳಿಕೊಂಡಾಗ ಅಮ್ಮನ ಬಗ್ಗೆ ಮಾತನಾಡಲು ಶುರು ಮಾಡುತ್ತಿದ್ದಂತೆಯೇ ಜೋರಾಗಿ ಮಳೆ ಬಂತು. ಅಬ್ಬಬ್ಬಾ ಎಂದರೆ ಒಂದು ನಿಮಿಷ ಮಾತನಾಡಿದ್ದೆ ಅಷ್ಟೇ ಅನ್ನಿಸತ್ತೆ. ಮಾತು ನಿಲ್ಲಿಸಿದಾಗ ಜೋರಾಗಿ ಬರುತ್ತಿದ್ದ ಮಳೆ ಥಟ್ ಎಂದು ನಿಂತಿತು. ಅದಕ್ಕಿಂತಲೂ ಆಶ್ಚರ್ಯ ಏನೆಂದರೆ, ನಾನು ಮಾತನಾಡುತ್ತಿದ್ದ ಆ ಸ್ಥಳದಲ್ಲಿ ಮಾತ್ರ ವರ್ಷಧಾರೆಯಾಗಿತ್ತು. 100 ಮೀಟರ್ ಅತ್ತ ಮಳೆಯೇ ಬಂದಿರಲಿಲ್ಲ. ಆ ಚೌಕದ ಜಾಗದಲ್ಲಿ ಮಾತ್ರ ಮಳೆಯಾಗಿತ್ತು. ಇದು ನಿಜಕ್ಕೂ ಪವಾಡವೇ ಸರಿ' ಎಂದಿದ್ದಾರೆ.
ಇದೇ ವೇಳೆ, ಆ ಫೋಟೋ ನೋಡಿ ತುಂಬಾ ಭಾವುಕರಾದ ಸುದೀಪ್ ಅವರು, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾವುಕ ಸನ್ನಿವೇಶ ಬರುತ್ತದೆ. ಸಾಮಾನ್ಯವಾಗಿ ವೇದಿಕೆ ಮೇಲೆ ಹೋದವರೆಲ್ಲಾ ಆ ಕ್ಷಣದಲ್ಲಿ ಭಾವುಕರಾಗುವುದು ಸಹಜ. ಆದರೆ ನಾನೊಬ್ಬನೇ ಇರಬೇಕು, ಕಣ್ಣೀರು ಹಾಕಿರಲಿಲ್ಲ. ಆದರೆ ಇಂದು ನೀವು ನನ್ನ ಕಣ್ಣಲ್ಲಿ ನೀರು ತರಿಸಿದ್ರಿ ಎಂದು ಆ್ಯಂಕರ್ ಅನುಶ್ರೀ ಅವರಿಗೆ ಸುದೀಪ್ ಹೇಳಿದರು. ಜೊತೆಗೆ ಈ ಫೋಟೋದಲ್ಲಿ ಇದ್ದದ್ದು ನನ್ನ ತಾಯಿ ಅಲ್ಲ, ಅವರು ನನ್ನ ಅಹಂ ಎಂದರು.
'ನನ್ನ ಮನದಾಳದಲ್ಲಿನ ನೋವನ್ನು ದುಃಖವನ್ನು ಹೊರಹಾಕಲು ನನಗೆ ಪದಗಳಿಲ್ಲ. ಏನಾಗಿದೆಯೋ ಅದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ 24 ಗಂಟೆಗಳಲ್ಲಿ ಎಲ್ಲವೂ ಬದಲಾಗಿದೆ. ನಿತ್ಯವೂ ನನಗೆ ಬೆಳಗ್ಗೆ 5.30ಗೆ ಗುಡ್ ಮಾರ್ನಿಂಗ್ ಕಂದ ಎಂಬ ಸಂದೇಶ ಬರುತ್ತಿತ್ತು. ನನಗೆ ಕಳೆದ ಅಕ್ಟೋಬರ್ 18ಕ್ಕೆ ಕೊನೆಯದಾಗಿ ಮೆಸೇಜ್ ಬಂದಿತ್ತು. ಬಿಗ್ ಬಾಸ್ ಮನೆಯಲ್ಲಿದ್ದ ಸಮಯದಲ್ಲಿ ನಾನು ಎದ್ದಾಗ ನನಗೆ ಮತ್ತೆ ಮೆಸೇಜ್ ಬರಲೇ ಇಲ್ಲ. ಅಂದು ಎಲ್ಲವೂ ಸರಿ ಇದೆಯಾ ಎಂದು ಕೇಳಲು ನನಗೆ ಆಗಿಯೇ ಇರಲಿಲ್ಲ. . ನಾನು ವೇದಿಕೆ ಮೇಲೆ ಹೋದಾಗ ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಯ್ತು ಅಂತ ಗೊತ್ತಾಯ್ತು. ಆಗ ನಾನು ಸಹೋದರಿಗೆ ಫೋನ್ ಮಾಡಿ ಡಾಕ್ಟರ್ ಜೊತೆಯೂ ಮಾತನಾಡಿದೆ. ಆಮೇಲೆ ಸ್ವಲ್ಪ ಹೊತ್ತಾದ ಬಳಿಕ ಮತ್ತೆ ನಾನು ವೇದಿಕೆಗೆ ಹೋದಾಗ ತಾಯಿ ಪರಿಸ್ಥಿತಿ ಕಷ್ಟ ಇದೆ ಅಂತ ಸಂದೇಶ ಬಂತು. ಆಮೇಲೆ ಆದದ್ದೆಲ್ಲಾ ದುರಂತ' ಎಂದು ಸುದೀಪ್ ತಮ್ಮ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಇದನ್ನೆಲ್ಲ ಹೇಗೆ ಸರಿ ಮಾಡೋದು ಅಂತ ನನಗೆ ಅರ್ಥ ಆಗ್ತಿಲ್ಲ. ಈ ವಾಸ್ತವವನ್ನು ಹೇಗೆ ಒಪ್ಪಿಕೊಳ್ಳಬೇಕು ಅಂತ ನನಗೆ ಅರ್ಥ ಆಗ್ತಿಲ್ಲ ಎಂದು ನೊಂದುಕೊಂಡಿದ್ದರು.
ಉಪೇಂದ್ರ ಇರೋ ಕಡೆ ಬಿಗ್ಬಾಸ್ ಯಾಕೆ? ಅವ್ರೊಂದು ಹೇಳಿದ್ರೆ, ಇವ್ರೊಂದು ಹೇಳ್ತಾರೆ- ಸುದೀಪ್ ಮಾತು ಕೇಳಿ...