ಪ್ರತೀ ದಿನ ಮದುಮಗಳ ಕಾಸ್ಟ್ಯೂಮ್ ತೊಟ್ಟು ಭುವಿಗೆ ಲೈಫಲ್ಲೇ ಬೇಜಾರು ಬಂದಿದೆಯಂತೆ. ಅವಳ ಮೇಲೆ ಕರುಣೆ ಬಂದು ಸೀರಿಯಲ್‌ನವ್ರು ಕೊನೆಗೂ ಹರ್ಷನ ಜೊತೆಗೆ ಅವಳ ಮದ್ವೆ ಮಾಡ್ತಾರಂತೆ. ಹರ್ಷನ ತಂಗಿ ಸುಚಿಯೇ ಖುದ್ದಾಗಿ ಇದನ್ನ ಅನೌನ್ಸ್ ಮಾಡಿದ್ದಾಳೆ. so, cool guys...
ಕನ್ನಡತಿ (Kannadathi)ಯಲ್ಲಿ ಹರ್ಷ ಭುವಿ ಮದ್ವೆ ಆಗುತ್ತಾ ಇಲ್ವಾ ಅನ್ನೋ ಗೊಂದಲವನ್ನು ತಲೆಯಲ್ಲಿಟ್ಟುಕೊಂಡು ನಿದ್ದೆ ಹೋಗಿ ಕನಸಲ್ಲೂ ವರೂ ದುಃಸ್ವಪ್ನದಂತೆ ಬಂದು ಚಡಪಡಿಸಿದವರು ಬಹಳ ಜನ. ಇಂಥವರ ಆರೋಗ್ಯದ ಬಗ್ಗೆ ಕರುಣೆಯಿಟ್ಟು ಬೆಳ ಬೆಳಗ್ಗೇ ಕನ್ನಡತಿ ಟೀಮ್‌ನವರು ಚಿಕ್ಕ ಹುಡುಗಿ ಸುಚಿ ಕೈಲಿ ಒಂದು ಅನೌನ್ಸ್ ಮೆಂಟ್ ಮಾಡಿಸಿದ್ದಾರೆ. ಇನ್ನು ಐದು ದಿನದಲ್ಲಿ ನಮ್ಮಣ್ಣ ಹರ್ಷನಿಗೆ ಮದುವೆ ಅಂತ. ಅದೇ ವರೂ ಜೊತೆಗಾದ್ರೆ ಅನ್ನೋ ಆಘಾತವೂ ವೀಕ್ಷಕರಿಗೆ ಆಗದೇ ಇರಲಿ ಅನ್ನುವ ಸದುದ್ದೇಶದಿಂದ ಹಸಿರುಪೇಟೆ ಹುಡುಗಿ ಜೊತೆಗೇ ಹರ್ಷನ ಮದುವೆ ಅನ್ನೋದನ್ನೂ ಅನೌನ್ಸ್ ಮಾಡಿಸಿದ್ದಾರೆ. ಅಲ್ಲಿಗೆ 'ನಮ್ಗೇನ್ ಬೇರೆ ಕೆಲ್ಸ ಇಲ್ವಾ?' ಅಂತ ಮುನಿಸಿಕೊಂಡಾದ್ರೂ ಪ್ರೇಕ್ಷಕರು ಈ ಸೀರಿಯಲ್ ನೋಡೋದು ಗ್ಯಾರಂಟಿ ಅನ್ನೋದು ಟಿವಿಯವ್ರಿಗೆ ಗೊತ್ತಾದ ಹಾಗಿದೆ.
ಹಿಂದೆ ಏನಾಗಿತ್ತು?
ಹರ್ಷ ಭುವಿಯ ಮದುವೆ ಫಿಕ್ಸ್ ಆಗಿತ್ತು. ಒಂದಿಷ್ಟು ಡ್ರಾಮಾ, ವಿಘ್ನಗಳ ನಡುವೆ ರೇಷ್ಮೆ ದಾರವನ್ನೇ ಉಂಗುರವಾಗಿ ಮಾಡಿ ಹರ್ಷ ಭುವಿ ಎಂಗೇಜ್‌ಮೆಂಟ್ ಶಾಸ್ತ್ರ ಮುಗಿಸಿದ್ರು. ಆಮೇಲೆ ಮದುವೆ ತಯಾರಿ ಜೋರಾಗಿತ್ತು. ಮದುವೆಗೆ ಅದ್ದೂರಿಯಾಗಿ ಸೆಟ್ ಹಾಕಿ, ಬೆಟ್ಟ ಗುಡ್ಡಗಳ ನಡುವೆ ಈವರೆಗೆ ಯಾವ ಸೀರಿಯಲ್‌ನಲ್ಲೂ ಇಲ್ಲದ್ದಕ್ಕಿಂತ ಹೆಚ್ಚು ಸೊಗಸಾಗಿ ಮಂಟಪದ ಅಲಂಕಾರ ಮಾಡಲಾಗಿತ್ತು. ಇಡೀ ಅಲಂಕಾರ, ಮದುವೆಯ ಶಾಸ್ತ್ರಗಳ ಬಗೆಗೆಲ್ಲ ವಿವರಣೆಯೂ ಇರುತ್ತಿತ್ತು.
Kannadathi : ಹರ್ಷ ಭುವಿಯ ಮದುವೆ ಆಗುತ್ತಾ ಇಲ್ವಾ, ದಿ ನೇಶನ್ ವಾಂಟ್ಸ್ ಟು ನೋ!
ಹೀಗಾಗಿ ಒಂದು ಅರ್ಥಪೂರ್ಣ ಮದುವೆಗೆ ಎಲ್ಲರೂ ಸಿದ್ಧವಾಗಿದ್ದರು. ಮದುವೆಯ ಸಂಭ್ರಮ, ಖುಷಿಯಲ್ಲಿ ಎಲ್ಲರೂ ತೇಲುವಂತಿದ್ದಾಗ ಸೀರಿಯಲ್ ಟೀಮ್ ಸಡನ್ ಶಾಕ್ ಕೊಟ್ಟಿತ್ತು. ಹರ್ಷನನ್ನು ಶುರುವಿನಿಂದಲೇ ಬಯಸುತ್ತಿದ್ದ ವರೂಧಿನಿ ತಾನೂ ಮದುಮಗಳ ಹಾಗೆ ಸಿಂಗರಿಸಿಕೊಂಡು ರೆಡಿ ಆಗಿದ್ಲು. ಮದುವೆ ಮುರಿದೇ ಮುರೀತೀನಿ ಅಂತ ಹಠ ಅವಳ ಮೈ ಇಡೀ ವ್ಯಾಪಿಸಿತ್ತು. ಹಸೆಮಣೆಗೆ ಹೊರಡಲು ಸಿದ್ಧಳಾದ ಭುವಿಯನ್ನು ತನ್ನ ರೂಮಿಗೆ ಎಳೆದುಕೊಂಡು ಹೋಗಿ ಹರ್ಷನನ್ನು ತನಗೆ ಬಿಟ್ಟುಕೊಡು ಅಂತ ಗೋಗರೆದಳು, ಅತ್ತು ಕರೆದು ಗೋಳಾಡಿದಳು.
ಆದರೆ ಭುವಿ ಇದಕ್ಕೆ ಬಗ್ಗದೇ, ಈ ಮದುವೆ ತನ್ನೊಬ್ಬಳ ನಿರ್ಧಾರ ಅಲ್ಲ. ಹರ್ಷ, ಮನೆಯವರೆಲ್ಲರ ನಿರ್ಧಾರ. ತಾನು ಹರ್ಷನನ್ನು ಬಿಟ್ಟುಕೊಡೋದಕ್ಕೆ ಸಿದ್ಧಳಿಲ್ಲ ಅಂತ ಖಡಾಖಂಡಿತವಾಗಿ ಹೇಳಿದಾಗ ಈಳಿಗೆಮಣೆಯಿಂದಲೇ ತನ್ನ ಕುಯ್ದುಕೊಂಡು ಆತ್ಮಹತ್ಯೆ ಪ್ರಯತ್ನ ಮಾಡ್ತಾಳೆ. ಹಸೆಮಣೆಗೆ ಹೋಗ್ಬೇಕಾದ ಭುವಿ ವರೂ ಎತ್ತಿಕೊಂಡು ಹಾಸ್ಪಿಟಲ್‌ಗೆ ಹೊರಡ್ತಾಳೆ.
Kannadathi: ಮದುಮಗಳಂತೆ ರೆಡಿಯಾದ ವರೂ, ಹರ್ಷನ ಹೆಂಡ್ತಿ ನಾನೇ ಅಂತಿದ್ದಾಳಲ್ಲಪ್ಪಾ!
ಪ್ರೇಕ್ಷಕರ ಸಿಟ್ಟು
ಇದನ್ನು ನೋಡಿ ಪ್ರೇಕ್ಷಕರಿಗೆ ಯಾವ ಲೆವೆಲ್‌ಗೆ ನಿರಾಸೆ ಆಯ್ತು ಅಂದರೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ಓಡಾಡಲು ಶುರುವಾದವು. ಇನ್ಮೇಲೆ ಕನ್ನಡತಿ ನೋಡಲ್ಲ ಅಂತಲೇ ಎಲ್ಲರೂ ಹೇಳಿದರು. ಸೀರಿಯಲ್ ತಂಡದ ಮೇಲೆ, ನಿರ್ದೇಶಕರ ಮೇಲೆ ತಮ್ಮ ಸಿಟ್ಟನ್ನು ಕಾರಿಕೊಂಡರು.
ಜನ ಸೀರಿಯಲ್ ನ ಇಷ್ಟು ಇಮೋಶನಲ್ಲಾಗಿ ತಗೊಳ್ತಾರೆ ಅನ್ನೋ ಐಡಿಯಾ ಸೀರಿಯಲ್ ಟೀಮ್‌ಗೆ ಮೊದಲೇ ಇತ್ತು ಅಂತ ಕಾಣುತ್ತೆ. ಆದರೂ ರಾತ್ರಿ ವೇಳೆ ನೆಗೆಟಿವ್ ಕಮೆಂಟ್‌ಗಳು ವಿಪರೀತ ಏರಿದ ಕಾರಣ ಎಲ್ಲಿ ಟಿಆರ್ ಪಿ ಸಂಪೂರ್ಣ ಬಿದ್ದು ಬಿಡುತ್ತೋ ಅನ್ನುವ ಅನುಮಾನ ಈ ಧಾರಾವಾಹಿ ತಂಡಕ್ಕೆ ಬಂದ ಹಾಗಿದೆ. ಹೀಗಾಗಿ ಇನ್ನು ಐದು ದಿನದಲ್ಲಿ ಹರ್ಷನಿಗೆ ಮದುವೆ, ಅದು ಭುವಿಯ ಜೊತೆಯಲ್ಲೇ ಅಂತ ಮೇಲಿಂದ ಮೇಲೆ ಪ್ರೋಮೋ ಬಿಡ್ತಿದ್ದಾರೆ. ಈ ಮದುವೆ ನಡೆಯಲು ಇಬ್ಬರು ತಂಗಿಯರಾದ ಸುಚಿ ಮತ್ತು ಬಿಂದು ಕಾರಣ ಅನ್ನೋ ರೀಸನ್ನನ್ನೂ ಕೊಡ್ತಿದ್ದಾರೆ. ಈ ಮೂಲಕ ಈ ಸಲ ಖಂಡಿತಾ ಯಾಮಾರಿಸ್ತಿಲ್ಲ ಅಂತ ಪ್ರಾಮಿಸ್ ಮಾಡ್ತಿದ್ದಾರೆ.
ಆದರೆ ಇದಕ್ಕೆಲ್ಲ ಫ್ಯಾನ್ಸ್ ಬಗ್ಗಿದಂತಿಲ್ಲ. ಫುಲ್ ಮದುವೆಯ ಸಂಭ್ರಮದಲ್ಲಿದ್ದ ನಮಗೆ ಭ್ರಮನಿರಸನ ಆಯ್ತು. ಮದುವೆಯನ್ನ ನೀವೇ ನೋಡ್ಕೊಳ್ಳಿ ಅಂತ ಕಮೆಂಟ್ ಮೂಲಕ ತಿರುಗೇಟು ಕೊಡ್ತಿದ್ದಾರೆ. 'ಕ್ಯಾಕರಿಸಿ ಉಗಿಯೋಣ ಅಂದ್ರೆ ಕೈಗೆ ಸಿಕ್ತಿಲ್ಲ, ಏನ್ ಕಥೆ ರೀ ನಿಮ್ದು' ಅಂತ ಒಬ್ರು ಕಮೆಂಟ್ ಮಾಡಿದ್ರೆ, 'ನಿಮ್ಗೆ ಮಾಡಕ್ಕೆ ಬೇರೆ ಕೆಲ್ಸ ಇಲ್ವಾ? ತಿಂಗಳಿಂದ ಮದ್ವೆ ಅಂತ ಕುಣಿದದ್ದನ್ನು ನೋಡಿದ್ದು ಸಾಲ್ದಾ, ಈಗ ಟಿಆರ್ ಪಿ ಎಲ್ ಹೋಗಿ ಬಿಡುತ್ತೋ ಅನ್ನೋ ಭಯಕ್ಕೆ ಹೀಗೆಲ್ಲ ಪ್ರೊಮೊ ಬಿಡ್ತಿದ್ದೀರಾ?' ಅಂತ ಮತ್ತೊಬ್ಬರು ಝಾಡಿಸಿದ್ದಾರೆ. 'ಹರ್ಷಣ್ಣನ ಮದ್ವಿ ಯಾರ್ ಜೊತೆ ಮಾಡ್ತೀಯವ್ವಾ ತಂಗಿ? ಐದೇ ಐದು ದಿನ ಸಾಕಾ?' ಅಂತ ಕಾಲೆಳೆದಿದ್ದಾರೆ ಮತ್ತೊಬ್ಬ ಅಭಿಮಾನಿ.
ಆದರೂ ಮದುವೆ ನಡೆದರೆ ಟಿಆರ್‌ಪಿ (TRP) ಏರೋದಂತೂ ಸತ್ಯ. ಇಂಥಾ ಹಲವು ದಾಳಗಳನ್ನು ಎಸೆಯುತ್ತಲೇ ಬಂದಿರುವ ಟಿವಿಯವ್ರಿಗೆ ಪ್ರೇಕ್ಷಕರ ಇಂಥಾ ಮನಸ್ಥಿತಿ ಏನೂ ಹೊಸತಲ್ಲ. ಅದಕ್ಕೆಲ್ಲ ಹೇಗೆ ಮದ್ದರೆಯಬೇಕು ಅನ್ನೋದು ಗೊತ್ತಿರೋ ಕಾರಣಕ್ಕೇ ಅವರಿಂದು ಆ ಲೆವೆಲ್‌ನಲ್ಲಿ ಮೆರೀತಿದ್ದಾರೆ ಅನ್ನೋದಂತೂ ಸುಳ್ಳಲ್ಲ.
Ramachari: ತನ್ನ ಹೆಸರು ಕೂಗಿ ಅರ್ಭಟಿಸಿದ ರಾಮಾಚಾರಿ ಕಂಡು ನಡುಗಿದ ಚಾರು!