ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ನಿಂದ ಪ್ರೇರೇಪಣೆಗೊಂಡು ಮಗನ ಜೊತೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ ಈ ಮಹಿಳೆ, ಅವರು ಏನಂದ್ರು ಕೇಳಿ...
ಧಾರಾವಾಹಿಗಳು ಇಂದು ಅದೆಷ್ಟೋ ಮಂದಿಗೆ ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಇದೇ ಕಾರಣಕ್ಕೆ ಇಂದು ಧಾರಾವಾಹಿಗಳು ಈ ಪರಿಯಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಒಂದೇ ರೀತಿಯ ಕಥೆಗಳನ್ನು ವಿಭಿನ್ನ ರೀತಿಯಲ್ಲಿ ಹೇಳಿದರೂ, ಅದೇ ನಾಯಕಿಯ ಮುಗ್ಧತೆ, ಅದೇ ಲೇಡಿ ವಿಲನ್, ನಾದಿನಿ, ಅತ್ತೆ, ಚಿಕ್ಕಮ್ಮನೇ ವಿಲನ್ಗಳು ಏನೇ ಇದ್ದರೂ ಬಹುತೇಕರಿಗೆ ಸೀರಿಯಲ್ಗಳು ಬೇಕೇ ಬೇಕು. ಮಹಿಳಾ ವೀಕ್ಷಕರ ಸಂಖ್ಯೆ ಹೆಚ್ಚು ಎನ್ನುವ ಕಾರಣಕ್ಕೆ ಬಹುತೇಕ ಎಲ್ಲಾ ಸೀರಿಯಲ್ಗಳಲ್ಲಿಯೂ, ಭಾಷೆ ಯಾವುದೇ ಇರಲಿ ಮಹಿಳೆಯರಿಗೇ ಪ್ರಾಧಾನ್ಯತೆ ಹೆಚ್ಚು. ಸೀರಿಯಲ್ಗಳಲ್ಲಿ ಪುರುಷರು ನಾಮ್ ಕೇ ವಾಸ್ತೆ ಎನ್ನುವ ಹಾಗೆ ಇರುವುದೂ ಎಲ್ಲರಿಗೂ ಗೊತ್ತಿರುವ ಸತ್ಯವೇ. ಮಹಿಳಾ ಪ್ರಧಾನ ಸಿನಿಮಾಗಳು ಬೆರಳೆಣಿಕೆಯಷ್ಟು ಎಂದು ಸಿನಿತಾರೆಯರು ಕೊರಗುವುದು ಒಂದೆಡೆಯಾದರೆ, ಸೀರಿಯಲ್ ಮಟ್ಟಿಗೆ ಹೇಳುವುದಾದರೆ, ಕೊರಗುವ ಸರದಿ ಪುರುಷರದ್ದು!
ಅದೇನೇ ಇದ್ದರೂ, ಸೀರಿಯಲ್ಗಳು ಬಹುಬೇಗ ಪ್ರಭಾವ ಬೀರುವುದು ಉಂಟು. ಅಲ್ಲಿ ಕಾಣುವ ಪಾತ್ರಗಳಲ್ಲಿ ತಮ್ಮನ್ನು ತಾವು ಆಹ್ವಾನೆ ಮಾಡಿಕೊಂಡು, ಆ ಪಾತ್ರಗಳೇ ತಾವು ಎಂಬಂತೆ ವೀಕ್ಷಕರು ಅದನ್ನು ಆಸ್ವಾದಿಸುವುದು ಇದೆ. ಇದೇ ಕಾರಣಕ್ಕೆ ಅಲ್ಲಿನ ಪಾತ್ರಗಳು ಜನರಿಗೆ ಇಷ್ಟವಾಗಿ ಬಿಡುತ್ತವೆ. ಸಿನಿಮಾಗಳಲ್ಲಿ ಲಾಂಗು, ಮಚ್ಚು, ಕೊಲೆ, ರಕ್ತಪಾತ... ಇಂಥ ಕ್ರೌರ್ಯ ಪಾತ್ರಗಳಲ್ಲಿ ನಾಯಕರೇ ಹೆಚ್ಚು ವಿಜೃಂಭಿಸುವ ಕಾರಣದಿಂದ ಎಷ್ಟೋ ಮಂದಿ ಯುವಕರು ಈ ನಾಯಕರಿಗೆ ಪ್ರೇರೇಪಿತರಾಗಿ ನಿಜ ಜೀವನದಲ್ಲಿಯೂ ಅಪರಾಧ ಜಗತ್ತಿಗೆ ಹೋಗುವುದು ಉಂಟು. ಇದು ಸಿನಿಮಾದ ವಿಷಯವಾದರೆ, ಸೀರಿಯಲ್ಗಳು ಹೆಚ್ಚಾಗಿ ಮಹಿಳೆಯರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಅದು ಒಳ್ಳೆಯದ್ದೂ ಆಗಿರಬಹುದು, ಕೆಟ್ಟದ್ದೂ ಆಗಿರಬಹುದು.
ಭಲೇ ಗೌತಮ್.. ನಿಜ ಜೀವನದಲ್ಲೂ ಇಂಥ ಗಂಡ ಇರೋಕೆ ಸಾಧ್ಯನಾ ಕೇಳ್ತಿದ್ದಾರೆ ಮಹಿಳಾ ಫ್ಯಾನ್ಸ್!
ಆದರೆ ಇಲ್ಲೊಂದು ಘಟನೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ನಾಯಕಿ ಭಾಗ್ಯ ಮಗಳ ಜೊತೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರುವುದನ್ನು ನೋಡಿ ಪ್ರೇರೇಪಿತರಾಗಿರುವ ಮಹಿಳೆಯೊಬ್ಬರು ಮಗನ ಜೊತೆಗೆ ಪರೀಕ್ಷೆ ಬರೆದಿದ್ದಾರೆ. ಯುಗಾದಿ ವಿಶೇಷ ಸಂಚಿಕೆಯಲ್ಲಿ ಇವರನ್ನು ವೇದಿಕೆ ಮೇಲೆ ಕರೆದು ಅವರ ಅನುಭವವನ್ನು ಹೇಳಲಾಗಿದೆ. ತಾವು ಭಾಗ್ಯಲಕ್ಷ್ಮಿ ಸೀರಿಯಲ್ ನೋಡಿ ಹೀಗೆ ಮಾಡಿರುವುದಾಗಿ ಹೇಳಿದ್ದಾರೆ, ಮಗ ಕೂಡ ನನ್ನ ಅಮ್ಮ ನನ್ನೊಟ್ಟಿಗೆ ಪರೀಕ್ಷೆ ಬರೆಯುತ್ತಿರುವುದಕ್ಕೆ ತುಂಬಾ ಖುಷಿಯಾಯಿತು ಎಂದಿದ್ದಾನೆ. ಪರೀಕ್ಷೆಯಲ್ಲಿ ತೇರ್ಗಡೆಯಾಗುವವರೆಗೂ ಪ್ರಯತ್ನ ಬಿಡುವುದಿಲ್ಲ ಎಂದು ಮಹಿಳೆ ಹೇಳಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಕೂಡ ಇದೇ ರೀತಿ ಆಗಿತ್ತು. ಗಂಡ ಇಲ್ಲದವರು, ಗಂಡ ಬಿಟ್ಟು ಹೋದವರು, ಹೆಣ್ಣು ಮಕ್ಕಳ ಜವಾಬ್ದಾರಿಯಿಂದ ಕಂಗೆಟ್ಟುಹೋಗಿದ್ದ ಮಹಿಳೆಯರು ಪುಟ್ಟಕ್ಕನಿಂದ ಪ್ರೇರೇಪಣೆಗೊಂಡು ಸ್ವಂತ ಜೀವನ ನಡೆಸಲು ಶುರು ಮಾಡಿದ್ದರು. ಸೀರಿಯಲ್ ತಮಗೆ ಪ್ರೇರಣೆ ನೀಡಿತು ಎಂದು ವೇದಿಕೆಯ ಮೇಲೆ ಹೇಳಿದ್ದರು. ಸದಾ ಕುತಂತ್ರ ಹೆಣೆಯುವುದು, ವಿಲನ್ಗಳ ಅಬ್ಬರ, ಚಿಕ್ಕಮ್ಮ-ಅತ್ತೆಯಂದಿರ ಕಿರುಕುಳ, ಹೆಣ್ಣು ಎಂದರೆ ಅಗತ್ಯಕ್ಕಿಂತ ಹೆಚ್ಚು ಸಹನೆ ತಾಳಬೇಕು ಕೊನೆಯವರೆಗೂ ಅವಳು ಮುಗ್ಧಳಂತೆಯೇ ಇರಬೇಕು... ಇತ್ಯಾದಿ ಇತ್ಯಾದಿ ಪಾತ್ರಗಳ ಹೊರತಾಗಿ ಭಾಗ್ಯ, ಪುಟ್ಟಕ್ಕನಂಥ ಪ್ರೇರಣೆಯಿರುವ ಸೀರಿಯಲ್ಗಳು ಹೆಚ್ಚೆಚ್ಚು ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ತುಕಾಲಿ ಸಂತೋಷ್ರ ಯಾರಿಗೂ ತಿಳಿಯದ ಎರಡು ಸೀಕ್ರೆಟ್ಗಳನ್ನು ನಮ್ರತಾ ರಿವೀಲ್ ಮಾಡೇ ಬಿಟ್ರು!