ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯ ಸದ್ಗೃಹಿಣಿ. ತನ್ನ ಅತ್ತೆ, ಮಾವ, ಗಂಡ, ಮಕ್ಕಳೇ ಪ್ರಪಂಚ ಅಂದ್ಕೊಂಡಿರೋಳು. ಇದೀಗ ಅವಳಿಗೆ ಅವಳ ಮಗಳಿಂದಲೇ ಅವಮಾನ ಆದರೂ ಕಲ್ಲು ಕಚ್ಚಿ ಸಹಿಸಿ ಅಳ್ತಾ ಕೂತಿದ್ದಾಳೆ. ನಮಗೆ ಈ ಅಳುಮುಂಜಿ ಭಾಗ್ಯ ಬೇಡ ಅಂತಿದ್ದಾರೆ ವೀಕ್ಷಕರು. ಅವರ ಆಸೆ ಈಡೇರೋ ಟೈಮ್ ಬಂದಂಗಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರ ಸಂಜೆ ಏಳುಗಂಟೆಗೆ ಪ್ರಸಾರ ಆಗುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್ ಟಿಆರ್‌ಪಿಯಲ್ಲೂ ಮುಂದಿದೆ. ಆದರೆ ಭಾಗ್ಯಳ ಅಳುಮುಂಜಿ ಅವತಾರ ವೀಕ್ಷಕರಿಗೆ ತಲೆ ಚಿಟ್ಟು ಹಿಡಿಯುವಷ್ಟು ಬೇಸರ ತರಿಸಿದೆ. 'ಈ ಅಳುಮುಂಜಿ ಭಾಗ್ಯನ ನೋಡೋದಕ್ಕಾಗಲ್ಲ' ಅಂತ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡ್ತಿದ್ದಾರೆ. ನಾಯಕಿ ಭಾಗ್ಯ ಪಾತ್ರವನ್ನ ಮುಗ್ಧೆಯಾಗಿ, ವಿನಯಶೀಲೆಯಾಗಿ ನೋಡಿ ನೋಡಿ ಸಾಕಾಗಿದೆ. ದಯಮಾಡಿ ಆ ಪಾತ್ರಕ್ಕೆ ಶಕ್ತಿ ತುಂಬಿ. ಮಧ್ಯಮ ವರ್ಗದ ಗೃಹಿಣಿಯರ ಪ್ರತಿರೂಪದಂಗಿರುವ ಭಾಗ್ಯ ಗಟ್ಟಿಯಾದರೆ ಈ ಥರ ಇರೋ ಹೆಣ್ಮಕ್ಕಳಿಗೂ ಪಾಠ ಆಗುತ್ತೆ ಅನ್ನೋ ಮಾತನ್ನು ವೀಕ್ಷಕರು ಕಳೆದ ಕೆಲವು ಸಮಯದಿಂದ ಹೇಳ್ತಿದ್ದಾರೆ. ಆದರೆ ಸೀರಿಯಲ್‌ನಲ್ಲಿ ಭಾಗ್ಯಳ ಸ್ವಾಭಿಮಾನಕ್ಕೆ ಪೆಟ್ಟಿನ ಮೇಲೆ ಪೆಟ್ಟು ಬಿದ್ದರೂ ಆಕೆ ಎದ್ದು ನಿಲ್ಲೋ ಪ್ರಯತ್ನ ಮಾಡ್ತಿಲ್ಲ. ಬದಲಾಗಿ ಅಳುತ್ತಾ ಕೂತಿದ್ದಾಳೆ. ಆದರೆ ಈಗ ಅವಳ ತಂಗಿ ಲಡ್ಡು ಅಕ್ಕನಿಗೆ ಧೈರ್ಯ ತುಂಬಿದ್ದಾಳೆ. ಹಾಗಿದ್ರೆ ಅಳುಮುಂಜಿ ಭಾಗ್ಯ ಸ್ಟ್ರಾಂಗ್ ಲೇಡಿ ಆಗಿ ಬದಲಾಗ್ತಾಳ?
ಅಪ್ಪ ಅಮ್ಮ ಹೇಳಿದ್ರು ಅಂತ ತಾಂಡವ್ ಇಷ್ಟವಿಲ್ಲದಿದ್ರೂ ಕೂಡ ಭಾಗ್ಯಳನ್ನು ಮದುವೆಯಾಗಿದ್ದಾನೆ, ಇವರಿಬ್ಬರಿಗೆ ಇಬ್ಬರು ಮಕ್ಕಳು. ಈಗ ತಾಂಡವ್‌ಗೆ ಭಾಗ್ಯ ಜೊತೆ ಬದುಕಲು ಇಷ್ಟ ಇಲ್ಲ, ಅವನು ಏನಾದರೂ ಮಾಡಿ ಶ್ರೇಷ್ಠ ಜೊತೆ ಜೀವನ ಮಾಡಬೇಕು ಎಂದುಕೊಂಡಿದ್ದಾನೆ. ಆದರೆ ಅದಕ್ಕೆ ತಾಂಡವ್ ಅಮ್ಮ ಕುಸುಮ ತಡೆಯಾಗಿದ್ದಾಳೆ. ಹೀಗಾಗಿ ಭಾಗ್ಯಳನ್ನ ಮನೆಯಿಂದ ಆಚೆ ಹಾಕಿದ್ರೂ ಅವಳು ಆ ಮನೆಯಲ್ಲಿ ಮತ್ತೆ ಸೇರಿಕೊಳ್ಳೋ ಹಾಗಾಗಿದೆ. ಆದರೆ ತಾಂಡವ್‌ನ ಪ್ರತಿರೂಪದ ಹಾಗಿರುವ ಮಗಳು ತನ್ವಿ ಇದೀಗ ಅಮ್ಮನ ವಿರುದ್ಧ ನಿಂತಿದ್ದಾಳೆ. ತನ್ನಮ್ಮನನ್ನು ಕಾಲ ಕಸಕ್ಕಿಂತ ಕಡೆಯಾಗಿ ನೋಡ್ತಾಳೆ. ಸ್ಕೂಲಲ್ಲಿ ಪ್ರಾಜೆಕ್ಟ್ ವರ್ಕ್ ಗೆ ಅಮ್ಮ ಬರೋದು ಅವಳಿಗೆ ಇಷ್ಟ ಇಲ್ಲ. ಇದನ್ನು ಬಳಸಿಕೊಂಡ ವಿಲನ್ ಶ್ರೇಷ್ಠಾ ತನ್ನನ್ನು ತನ್ವಿ ಚಿಕ್ಕಮ್ಮ ಅಂತ ಪರಿಚಯ ಮಾಡಿಕೊಂಡು ಅವಳಿಗೆ ಪ್ರಾಜೆಕ್ಟ್ ನಲ್ಲಿ ಸಹಾಯ ಮಾಡಿದ್ದಾಳೆ. ತಾನು ಮಗಳ ಶಾಲೆಗೆ ಬಂದಾಗ ಸ್ವಂತ ಮಗಳಿಂದಲೇ ತಿರಸ್ಕೃತಳಾಗಿ ಅಳುತ್ತಾ ಮನೆಗೆ ಬಂದ ಭಾಗ್ಯಾಳಿಗೆ ಅವಳ ತಂಗಿ ಲಕ್ಷ್ಮೀ ಬುದ್ಧಿ ಹೇಳಿದ್ದಾಳೆ.
ಹಿಟ್ಲರ್ ಕಲ್ಯಾಣ ಧಾರಾವಾಹಿಗೆ ಬ್ರೇಕ್?; ಗೊಂದಲದಲ್ಲಿ ಅಭಿಮಾನಿಗಳು
'ತನ್ವಿ ಸ್ಕೂಲಲ್ಲಿ ಅಷ್ಟೆಲ್ಲ ಹರ್ಟ್ ಮಾಡಿದ್ರೂ ಸುಮ್ಮನೆ ಅಳ್ತಾ ಕೂತಿದ್ಯಲ್ಲಾ, ತನ್ವಿನ ಯಾಕೆ ತರಾಟೆಗೆ ತಗೊಳ್ತಿಲ್ಲ? ಇದು ಅಳ್ತಾ ಕೂರೋ ಟೈಮಲ್ಲ. ಗಟ್ಟಿ ನಿಂತು ಅವಳನ್ನು ತಿದ್ದೋ ಟೈಮು. ತನ್ವಿ ಇನ್ನೂ ಮಗು. ಅವಳನ್ನು ಈಗಲೇ ಬಗ್ಗಿಸಬೇಕು. ಇನ್ನು ಅವಳನ್ನು ತಿದ್ದಲಿಲ್ಲ ಅಂದರೆ ಮುಂದೆ ಬೆಳೆದ ಮೇಲೆ ಅವಳನ್ನು ಜನ ಅನ್ನಲ್ಲ, ಮನೆ ಮಂದಿ ಬಗ್ಗೆ ಜನ ಮಾತಾಡ್ತಾರೆ. ಮನೆಯವರು ತಿದ್ದಿ ಬೆಳೆಸಿಲ್ಲ ಅಂತಾರೆ. ನೀನು ಅವಳನ್ನು ತಿದ್ದು' ಅಂತ ಲಕ್ಷ್ಮೀ ಸಲಹೆ ನೀಡ್ತಾಳೆ. ಆದರೆ ಭಾಗ್ಯಗೆ ತನ್ನ ಶಕ್ತಿ ಬಗ್ಗೆ ನಂಬಿಕೆ ಇಲ್ಲ.
'ನನ್ನ ಕೈಲಿ ಏನಾಗುತ್ತೆ? ಅವಳು ನನ್ನ ಮಾತೇ ಕೇಳಲ್ಲ' ಅಂತ ಸಾಮಾನ್ಯ ಗೃಹಿಣಿಯರು ಹೇಳೋ ಡೈಲಾಗನ್ನೇ ಭಾಗ್ಯ ಹೇಳ್ತಾಳೆ. ಈ ಕಾಲದ ಹುಡುಗಿ ಲಕ್ಷ್ಮೀ ಈ ಬಗ್ಗೆ ಅಕ್ಕನಿಗೆ ತಿಳಿವಳಿಕೆ ಕೊಡ್ತಾಳೆ. 'ಮುದ್ದು ಮಾಡಿ, ಬುದ್ಧಿ ಹೇಳು. ಕೇಳಲಿಲ್ಲ ಅಂದ್ರೆ ಕಠಿಣವಾಗಿ ಬುದ್ಧೀ ಕಲಿಸು. ಚಿಕ್ಕ ಹುಡುಗಿ ಏನೋ ಹೇಳಿದ್ಲು ಅಂತ ಅಳ್ತಿದ್ದೀಯಲ್ಲಾ, ಮಕ್ಕಳು ಮಣ್ಣಿನ ಮುದ್ದೆ ಇದ್ದ ಹಾಗೆ. ಅವರನ್ನು ತಿದ್ದಿ ನಮಗೆ ಬೇಕಾದ ರೂಪ ಕೊಡ್ಬೇಕು. ಅದು ತಾಯಿ ಕರ್ತವ್ಯ. ಹೀಗೆ ಅಳ್ತಾ ಕೂರೋದಲ್ಲ. ನಿನ್ನ ಮಗಳು ಅವಳು, ನಾಳೆ ಅವಳಿಗೆ ಒಳ್ಳೆದಾದ್ರೂ ನಿಂಗೇ ಹೆಸ್ರು, ಕೆಟ್ಟರೂ ನಿಂಗೇ ಹೆಸರು. ಮನಸ್ಸು ಗಟ್ಟಿ ಮಾಡಿ ತಿದ್ದಿ ರೂಪ ಕೊಡು' ಅನ್ನೋ ಮಾತು ಹೇಳ್ತಾಳೆ.
ಇತ್ತ ತನ್ವಿಗೆ ಪ್ರಾಜೆಕ್ಟ್‌ನಲ್ಲಿ ಫಸ್ಟ್ ಪ್ರೈಸ್ ಬಂದಿದೆ. ಮನೆಮಂದಿಯೆಲ್ಲ ಆ ಖುಷಿಯಲ್ಲಿದ್ದರೆ ಭಾಗ್ಯ ಅಡುಗೆ ಮನೆಯಲ್ಲಿ ಅಳುತ್ತಾ ಕೂತಿದ್ದಾಳೆ. ಅತ್ತೆ ಕುಸುಮಾ, 'ತಾಂಡವ್ ಮಗಳು ಅನ್ನೋದನ್ನು ನೀನು ಸಾಧಿಸಿಬಿಟ್ಟೆ' ಅಂತ ಮೊಮ್ಮಗಳ ಬೆನ್ನು ತಟ್ಟುತ್ತಾಳೆ. ಕಣ್ಣೀರು ಹಾಕುತ್ತಲೇ ಭಾಗ್ಯ ಯೋಚಿಸುತ್ತಿದ್ದಾಳೆ. ಭಾಗ್ಯ ಬದಲಾಗ್ತಾಳ? ವಾರಗಳಿಂದ ಭಾಗ್ಯ ಬದಲಾವಣೆಗೆ ಎದುರು ನೋಡ್ತಿದ್ದ ವೀಕ್ಷಕರಿಗೆ ಸ್ಟ್ರಾಂಗ್ ಭಾಗ್ಯಳನ್ನು ನೋಡೋ ಟೈಮ್ ಬಂತಾ ಅನ್ನೋದು ಬಲು ಶೀಘ್ರದಲ್ಲೇ ತಿಳಿಯಲಿದೆ. ಸುದರ್ಶನ್ ರಂಗಪ್ರಸಾದ್, ಸುಷ್ಮಾ ಕೆ ರಾವ್, ಪದ್ಮಜಾ ರಾವ್ ಈ ಸೀರಿಯಲ್‌ನ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.
Bhagyalakshmi: ಅಪ್ಪನಿಗೆ ಮಕ್ಕಳಿಂದ ಸಿಗೋ ಗೌರವ ಅವನ ಹೆಂಡ್ತಿ ನೀಡೋ ಭಿಕ್ಷೆ!