ದೀಪಾವಳಿ ಹಬ್ಬದ ಪ್ರಯುಕ್ತ ಬಿಗ್ಬಾಸ್ ಮನೆಲೆ ಕಾಲಿಟ್ಟ ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಅಲಿಯಾಸ್ ಸುಷ್ಮಾ ರಾವ್ ಅನುಭವ ಹೇಗಿತ್ತು?
ಬಿಗ್ಬಾಸ್ ಮನೆಯಲ್ಲಿರುವ ವರ್ತೂರು ಸಂತೋಷ್ ಬಹುಮತ ಗಳಿಸಿದ್ದರೂ ಮನೆಯಿಂದ ಹೊರಕ್ಕೆ ಹೋಗುವ ಮಾತನಾಡಿದ್ದರು. ಇವರ ಮನವೊಲಿಸಲು ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಮನೆಯೊಳಕ್ಕೆ ಕಾಲಿಟ್ಟಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ಎಂಟ್ರಿ ಕೊಟ್ಟಿದ್ದ ಭಾಗ್ಯ ವರ್ತೂರು ಸಂತೋಷ್ ಅವರ ಮನಸ್ಸನ್ನು ಒಲಿಸಲು ಪ್ರಯತ್ನಿಸಿದ್ದರು. 'ನಿನ್ನ ಸಹೋದರಿ ರೀತಿಯಲ್ಲಿ ನಿನ್ನ ಜೊತೆ ಮಾತನಾಡುತ್ತಿರುವೆ. ನಿನ್ನ ಕೈಯಲ್ಲಿ ಆಗುತ್ತಿಲ್ಲ ಆಗೋಲ್ಲ ಅನ್ನೋ ಮಾತುಗಳನ್ನು ನಿನ್ನ ತಲೆಯಿಂದ ಹೊರ ತೆಗೆಯಬೇಕು' ಎಂದು ಭಾಗ್ಯ ಕಿವಿ ಮಾತು ಹೇಳಿದ್ದರು. ಸದ್ಯ ಸಂತೋಷ್ ಬಿಗ್ಬಾಸ್ ಮನೆಯಲ್ಲಿಯೇ ಇದ್ದಾರೆ.
ಅದೇ ಇನ್ನೊಂದೆಡೆ ಕಲರ್ಸ್ ಕನ್ನಡ ವಾಹಿನಿಯು ಪ್ರೇಕ್ಷಕರಿಗೆ ದೀಪಾವಳಿ ಸರ್ಪ್ರೈಸ್ ನೀಡಿದೆ. ನೆಚ್ಚಿನ ನಟ-ನಟಿಯರ ಜೊತೆ ವೀಕ್ಷಕರಿಗೆ ನೇರಪ್ರಸಾರದ ಮೂಲಕ ಮಾತನಾಡುವ ಅವಕಾಶ ಕಲ್ಪಿಸುತ್ತಿದೆ. ಅದಕ್ಕೆ ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಅಲಿಯಾಸ್ ಸುಷ್ಮಾ ರಾವ್ ನೇರ ಪ್ರಸಾರದಲ್ಲಿ ಬಂದು ವೀಕ್ಷಕರ ಜೊತೆ ಮಾತನಾಡಿದರು. ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ ಖಾತೆಯ ಬಳಕೆದಾರರ ಸಂಖ್ಯೆ ಮೂರು ಮಿಲಿಯನ್ ಅಂದರೆ 30 ಲಕ್ಷ ಮಾಡಿರುವ ಬಳಕೆದಾರರಿಗೆ ಧನ್ಯವಾದ ಸಲ್ಲಿಸಿದ ನಟಿ, ಇದು ತಮಗೆ ದೀಪಾವಳಿ ಬೋನಸ್ ಎಂದು ಹೇಳಿದರು. ಮನರಂಜನೆಗೆ ಯಾವುದೇ ಕೊರತೆ ಆಗದಂತೆ ತಾವು ಪ್ರಯತ್ನಿಸುವುದಾಗಿ ನಟಿ ತಿಳಿಸಿದರು. ಇದೇ ವೇಳೆ ದೀಪಾವಳಿ ಹಬ್ಬದ ಪ್ರಯುಕ್ತ ಸಿದ್ಧಪಡಿಸಿದ್ದ ವಿಶೇಷ ಹಾಡಿನ ಕುರಿತು ಮಾತನಾಡಿದ ಸುಷ್ಮಾ ಅವರು, ಈ ಹಾಡು ನಾಲ್ಕು ಮಿಲಿಯನ್ ವೀಕ್ಷಣೆ ಕಂಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಮಕ್ಕಳ ದಿನಾಚರಣೆಯ ಶುಭಾಶಯ ಹೇಳುತ್ತಾ, ಎಷ್ಟೇ ದೊಡ್ಡವರಾದರೂ ಮನದಲ್ಲಿ ಮಕ್ಕಳ ಮುಗ್ಧತೆ ಇದ್ದರೆ ಬದುಕು ಚೆಂದ ಎಂದೂ ತಿಳಿಸಿದರು.
ದೀಪಾವಳಿ ವಿಷ್ ಅಂದ್ರೆ ಹೀಗಿರ್ಬೇಕು: ಕಲರ್ಸ್ ಕನ್ನಡ ಕಲಾವಿದರ ನೋಡಿ WOW ಅಂದ ಫ್ಯಾನ್ಸ್
ನಂತರ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು. ಇದರಲ್ಲಿ ಸುಷ್ಮಾ ಅವರ ಬಗ್ಗೆಯಾಗಲೀ, ಭಾಗ್ಯಲಕ್ಷ್ಮಿ ಸೀರಿಯಲ್ ಬಗ್ಗೆಯಾಗಲೀ ಹೆಚ್ಚಿನ ಪ್ರಶ್ನೆ ಬರಲಿಲ್ಲ. ಬದಲಿಗೆ ಅದಕ್ಕಿಂತಲೂ ಹೆಚ್ಚಾಗಿ ಕೇಳಿದ್ದು, ಬಿಗ್ಬಾಸ್ ಬಗ್ಗೆ. ನಿಮಗೆ ಬಿಗ್ಬಾಸ್ನಲ್ಲಿ ಯಾರು ಇಷ್ಟ ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಸುಷ್ಮಾ ಅವರು, ಎಲ್ಲರೂ ಇಷ್ಟನೇ. ಆದರೆ ಎಲ್ಲಕ್ಕಿಂತಲೂ ಹೆಚ್ಚಾಗಿ ನನಗೆ ಕಾರ್ತಿಕ್, ವಿನಯ, ಸಂಗೀತಾ, ತನೀಷಾ ತುಂಬಾ ಇಷ್ಟವಾದರು. ಏಕೆಂದರೆ ಇವರು ಸಕತ್ ಆ್ಯಕ್ಟೀವ್ ಆಗಿರುತ್ತಾರೆ ಎಂದರು.
ನಂತರ ಇನ್ನೊಬ್ಬರು ಬಿಗ್ಬಾಸ್ ಮನೆಯ ಎಕ್ಸ್ಪೀರಿಯನ್ಸ್ ಹೇಗಿತ್ತು ಎಂದು ಪ್ರಶ್ನಿಸಿದರು. ಅದಕ್ಕೆ ಸುಷ್ಮಾ ಅವರು, ಬಿಗ್ಬಾಸ್ ನೋಡಲು ನನಗೆ ತುಂಬಾ ಇಷ್ಟ. ಆದರೆ ಆ ಮನೆಯೊಳಕ್ಕೆ ಕಾಲಿಡಲು ನಿಜಕ್ಕೂ ತುಂಬಾ ಭಯವಾಯಿತು. ಅಷ್ಟು ದಿನ ಅದೇ ಮನೆಯಲ್ಲಿ ಇರೋದು ತುಂಬಾನೇ ಕಷ್ಟ ಎಂದ ಸುಷ್ಮಾ, ತಮಗೆ ಕೆಲವು ಗಂಟೆಗಳವರೆಗೆ ಅಲ್ಲಿರುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಯಿತು ಎಂದರು. ಎಲ್ಲ ಸ್ಪರ್ಧಿಗಳನ್ನು ಹೋಗಿ ಮಾತನಾಡಿಸಿದೆ. ತುಂಬಾ ಖುಷಿಯಾಯಿತು ಎಂದ ಅವರು, ಬಿಗ್ಬಾಸ್ ಮನೆ ಒಳ್ಳೆ ಸ್ವರ್ಗದ ರೀತಿ ಇದೆ. ಅದಕ್ಕಿಂತಲೂ ಹೆಚ್ಚಾಗಿ ಅಲ್ಲಿರುವ ಮನಸ್ಸುಗಳು ಚೆನ್ನಾಗಿವೆ. ಬೇರೆ ಬೇರೆ ಫೀಲ್ಡ್ನಿಂದ, ಬೇರೆ ಬೇರೆ ಮನಸ್ಥಿತಿಯವರು ಅಲ್ಲಿರುತ್ತಾರೆ. ಎಲ್ಲರ ಜೊತೆ ಅಡ್ಜೆಸ್ಟ್ ಮಾಡಿಕೊಂಡು ಹೋಗುವುದು ಕಷ್ಟ ಎಂದ ಸುಷ್ಮಾ ಅವರು, ಸ್ಪರ್ಧಿಗಳಿಗೆ ಹ್ಯಾಟ್ಸ್ ಆಫ್ ಎನ್ನಲೇಬೇಕು ಎಂದರು.
ವರ್ತೂರ್ ಸಂತೋಷ್‌ನ ಉಳಿಸಿಕೊಳ್ಳಲು ಬಿಗ್ ಬಾಸ್ ಮನೆಗೆ ಕಾಲಿಟ್ಟ ಭಾಗ್ಯ; ನೆಟ್ಟಿಗರಿಂದ ಆಕ್ರೋಶ!