
ಇತ್ತೀಚೆಗೆ ಸಹಾಯಕ ನಿರ್ದೇಶಕ ಸೋಮು ಗೌಡ ಅವರು ಮಲಗಿದ್ದಲ್ಲೇ ಹೃದಯಾಘಾತ ಆಗಿ ನಿಧನರಾಗಿದ್ದಾರೆ. ಇದಾದ ಬಳಿಕವೇ ʼಕಾಮಿಡಿ ಕಿಲಾಡಿಗಳುʼ ಶೋ ಖ್ಯಾತಿಯ ರಾಕೇಶ್ ಪೂಜಾರಿ ಕೂಡ ನಿಧನರಾಗಿದ್ದಾರೆ. ಪ್ರಾಯದ ಜನರು ಹೃದಯಾಘಾತದಿಂದ ಅಸು ನೀಗುತ್ತಿರುವುದು ಹೆಚ್ಚಾಗಿದೆ. ಸೆಲೆಬ್ರಿಟಿಗಳು ಒಂದೇ ಅಲ್ಲ ಸಾಮಾನ್ಯ ಜನರು ಕೂಡ ಹಾರ್ಟ್ ಅಟ್ಯಾಕ್‌ಗೆ ಬಲಿಯಾಗುತ್ತಿದ್ದಾರೆ. ಡಾ ಪುನೀತ್ ರಾಜ್‌ಕುಮಾರ್ ಇದಕ್ಕೆ ಸ್ಪಷ್ಟ ಉದಾಹರಣೆ. ಈಗ ಈ ಕುರಿತಂತೆ, ನಟ, ನಿರ್ಮಾಪಕ ಅಶು ಬೆದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಯಾರಾದರೂ ಸ್ವಲ್ಪ ಪ್ರಸಿದ್ಧರು, ಸೆಲೆಬ್ರಿಟಿಗಳು ಅಥವಾ ತಮ್ಮ ಕುಟುಂಬ-ಸ್ನೇಹಿತ ವರ್ಗದವರು ಹಠಾತ್ ಕುಸಿದು ಬಿದ್ದಾಗ, ಪ್ರಾಯವಲ್ಲದ ಪ್ರಾಯದಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಹಠಾತ್ ಸಾವನ್ನಪ್ಪಿದಾಗ ಮಾತ್ರ ಎಲ್ಲರೂ ಚೂರು ಪಾರು ಎಚ್ಚೆತ್ತುಕೊಂಡು, ಓ ಏನೋ ಅಸಹಜವಾದದ್ದು ಆಗುತ್ತಿದೆ ಎಂದು ಮಾತನಾಡಿದರೆ, ಅಥವಾ ಅದ್ಯಾವನೋ ರಾಜಾರಾಂ ತಲ್ಲೂರು ಯಾವಾಗ ನೋಡಿದ್ರೂ “ಕುಸಿದು ಬಿದ್ದು ಸಾವುಗಳ ಬಗ್ಗೆ ಹೇಳುತ್ತಿರುತ್ತಾನೆ” ಎಂದು ನೆನಪಿಸಿಕೊಂಡರೆ ಸಾಕಾಗುವುದಿಲ್ಲ. ಮರುದಿನ ಇದು ನೆನಪಿರುವುದಿಲ್ಲ. ಎಲ್ಲರೂ ಸುಖದಿಂದಿರುತ್ತಾರೆ. ಇದನ್ನೇ ಸ್ಮಶಾನ ವೈರಾಗ್ಯ ಅನ್ನೋದು.
ಸ್ವಾಮೀ, ಕೇವಲ ಕರಾವಳಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ರತೀ ವಾರ ಸರಾಸರಿ 4-5 ಕುಸಿದು ಬಿದ್ದು ಸಾವು/ಅಕಾಲಿಕ ಹೃದಯಾಘಾತದ ಸಾವು ಸಂಭವಿಸುತ್ತಿದೆ; ಅದರ ಎರಡು ಪಾಲು ಜನ “ಅದೃಷ್ಟವಂತರು” ಹೃದಯಸಂಬಂಧಿ ಕಾರಣಗಳಿಗಾಗಿ ಆಸ್ಪತ್ರೆಗಳಿಗೆ ಲಕ್ಷಗಟ್ಟಲೆ ಸುರಿಯುತ್ತಿದ್ದಾರೆ. ಸಾಯುತ್ತಿರುವವರು ಮತ್ತು ಹೀಗೆ ತೊಂದರೆಗೆ ಸಿಲುಕಿಕೊಳ್ಳುತ್ತಿರುವವರೆಲ್ಲ 30-60ರ ನಡುವಿನ “ಉತ್ಪಾದಕ” ಪ್ರಾಯವರ್ಗದವರು. ನಾನು ಸತತವಾಗಿ, ಮೊದಲ ದಿನದಿಂದಲೇ ಇದು “ಅಸಹಜ” ಎಂದು ಅರಣ್ಯ ರೋದನ ಮಾಡುತ್ತಿದ್ದೇನೆ.
ಕರ್ನಾಟಕ ಸರ್ಕಾರ, ಈ ಬಗ್ಗೆ ತನಿಖೆ ನಡೆಸುವುದಾಗಿ ಪ್ರಕಟಿಸಿ ಈಗಾಗಲೇ ಎಂಟು-ಹತ್ತು ವಾರಗಳು ಕಳೆದಿವೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಿರುವ ಬಗ್ಗೆ ಬಹಿರಂಗವಾಗಿ ಸರ್ಕಾರದ ಕಡೆಯಿಂದ ಏನೂ ಹೇಳಿಕೆ ಬಂದಿಲ್ಲ. ದಯವಿಟ್ಟು ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಇನ್ನಾದರೂ ಎಚ್ಚರಗೊಳ್ಳಿ. ಭಾರತ ಸರ್ಕಾರವನ್ನು ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿ.
ನಮ್ಮ ಕಣ್ಣೆದುರೇ ಜನ ಅಕಾರಣವಾಗಿ ಸಾಯುತ್ತಿರುವಾಗ ಸುಮ್ಮನೆ ಕುಳಿತು ನೋಡಲು ನಿಮಗೆ ಮನಸ್ಸಾದರೂ ಹೇಗೆ ಬರುತ್ತದೆ? ಇನ್ನು ಕೆಲವರಂತೂ ಯಾರನ್ನೋ "ರಕ್ಷಿಸುವ ಗುತ್ತಿಗೆ ಹೊತ್ತವರಂತೆ" ಇದಕ್ಕೆಲ್ಲ ಜೀವನ ಶೈಲಿ ಕಾರಣ, ಆಹಾರ ಪದ್ಧತಿ ಕಾರಣ ಎಂದೆಲ್ಲ ಹರಿಕತೆ ಶುರುಹಚ್ಚಿಕೊಳ್ಳುತ್ತಾರೆ. ಅವರಿಗೆ ಹೇಗೂ ಮನುಷ್ಯತ್ವ ಇಲ್ಲ. ನೀವಾದರೂ, ನಿಮ್ಮೊಟ್ಟಿಗೆ ಬದುಕುತ್ತಿರುವ ಪ್ರತಿಯೊಬ್ಬರ ಬಗ್ಗೆ ನಿಮ್ಮಲ್ಲಿ ದಯೆಯ ಪಸೆ ಇದೆಂದು ತೋರಿಸಿಕೊಳ್ಳಿ. ಸರ್ಕಾರಕ್ಕೆ ಒತ್ತಾಯ ಹೇರಿ. ಎಲ್ಲರ ಸ್ವರ ಸೇರಿದಾಗ, ಸರ್ಕಾರಗಳಿಗೆ ಕಿವಿ ಕೇಳಿಸೀತು...
ರಾಕೇಶ್ ಪೂಜಾರಿ ಸಾವಿಗೆ ಕಂಬನಿ ಮಿಡಿದ ಸೆಲೆಬ್ರಿಟಿಗಳು
ರಾಕೇಶ್ ಪೂಜಾರಿಗೆ ಈಗ 34 ವರ್ಷ ವಯಸ್ಸು, ಇವರ ಮನೆಯಲ್ಲಿ ತಾಯಿ, ತಂಗಿ ಇದ್ದಾರೆ. ನಾಲ್ಕು ವರ್ಷಗಳ ಹಿಂದೆ ರಾಕೇಶ್ ಪೂಜಾರಿ ಅವರ ತಂದೆ ಕೂಡ ಲೋ ಬಿಪಿ ಆಗಿ ನಿಧನರಾಗಿದ್ದರು. ಈಗ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಮಗನನ್ನೇ ಕಳೆದುಕೊಂಡಿರೋ ಆ ತಾಯಿಗೆ, ಆ ತಂಗಿಗೆ ಹೇಗೆ ಸಾಂತ್ವನ ಹೇಳ್ತೀರಿ? ಇನ್ನು ಕಾಮಿಡಿ ಕಿಲಾಡಿಗಳು ಶೋ ಸ್ಪರ್ಧಿಗಳು ಉಡುಪಿಗೆ ಧಾವಿಸಿದ್ದು, ರಾಕೇಶ್ ಪೂಜಾರಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಅಗಲಿದ ಗೆಳೆಯನನ್ನು ನೋಡಿ ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ ಆಗಿರೋದು ಸತ್ಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.