ಬಿಗ್ಬಾಸ್ನಿಂದ ಎಲಿಮಿನೇಟ್ ಆಗಿರುವ ಚೈತ್ರಾ ಕುಂದಾಪುರ ಇನ್ಸ್ಟಾಗ್ರಾಮ್ ನೇರಪ್ರಸಾರದಲ್ಲಿ ಹೇಳಿದ್ದೇನು?
ಫೈರ್ ಬ್ರ್ಯಾಂಡ್ ಭಾಷಣಗಾರ್ತಿ ಎಂದೇ ಫೇಮಸ್ ಆಗಿರೋ ಚೈತ್ರಾ ಕುಂದಾಪುರ ಬಿಗ್‌ಬಾಸ್ ಮನೆಯಲ್ಲಿ 105 ದಿನಗಳ ಪ್ರಯಾಣ ಮುಗಿಸಿ ಇದೀಗ ಹೊರಕ್ಕೆ ಬಂದಿದ್ದಾರೆ. ಹೊರಕ್ಕೆ ಬರುತ್ತಿದ್ದಂತೆಯೇ ನೇರಪ್ರಸಾರದಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಬಿಗ್ಬಾಸ್ನಲ್ಲಿ ತಮ್ಮ ಇಷ್ಟು ದೀರ್ಘ ಅವಧಿಯ ಪ್ರಯಾಣ ಹಾಗೂ ಜನ ತಮ್ಮನ್ನು ಸ್ವೀಕರಿಸಿದ ಪರಿಯ ಬಗ್ಗೆ ಅವರು ಮಾತನಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರ ಭಾಷಣವನ್ನು ಶೇರ್ ಮಾಡಲಾಗಿದೆ.
'ಹೊಸ ಹೊಸ ಅನುಭವ ಹೊತ್ತುಕೊಂಡು ಹೊರಗೆ ಬಂದಿದ್ದೇನೆ. ಬಿಗ್‌ಬಾಸ್ ನನಗೆ ಸುಂದರ ಅನುಭವ ನೀಡಿದೆ. ಇದು ವಿಭಿನ್ನ ಆಗಿರುವಂಥ ಅನುಭವ. ಬದುಕಿನಲ್ಲಿ ಬಹಳ ಕಡಿಮೆ ಜನರಿಗೆ ಇಂಥದ್ದೊಂದು ಅವಕಾಶ ಸಿಗುತ್ತದೆ. ಅನಿರೀಕ್ಷಿತವಾಗಿ ನರಕಕ್ಕೆ ಹೋಗಬೇಕಾಯ್ತು. ಅಲ್ಲಿಂದ ನನ್ನ ಬಿಗ್‌ಬಾಸ್ ಪ್ರಯಾಣ ಆರಂಭವಾಯಿತು. ಹೊಡೆದಾಟ, ಕಡಿಮೆ ಮೂಲಭೂತ ಸೌಕರ್ಯ ಇವುಗಳನ್ನೆಲ್ಲಾ ಎದುರಿಸಿದೆ. ಆಗ ಅನ್ನದ ಬೆಲೆ, ಒಗ್ಗಟ್ಟಿನ ಬೆಲೆ, ಜೀವನದಲ್ಲಿ ಸರ್ವೈವ್ ಆಗುವುದು ಹೇಗೆ ಎನ್ನುವ ಬಹುದೊಡ್ಡ ಪಾಠವನ್ನು ಇದರಿಂದ ಕಲಿತೆ ಎಂದಿದ್ದಾರೆ ಚೈತ್ರಾ. ಅಲ್ಲಿಂದ ನೇರವಾಗಿ ಸ್ವರ್ಗಕ್ಕೆ ಹೋದೆ. ಅಲ್ಲಿಯೂ ಹೊಸ ಹೊಸ ಅನುಭವ ಸಿಕ್ಕಿತು. ಬದುಕಿನಲ್ಲಿ ಯಾವುದೇ ರೀತಿಯ ಏರುಪೇರು ಬಂದರೂ ಅದನ್ನು ಹೇಗೆ ನಿಭಾಯಿಸಬೇಕು ಎನ್ನುವ ಅನುಭವ ಈ ಅವಧಿಯಲ್ಲಿ ಬಿಗ್‌ಬಾಸ್ ನನಗೆ ಕೊಟ್ಟಿತು ಎಂದಿದ್ದಾರೆ.
ಬಿಗ್‌ಬಾಸ್ 11ರ ವಿನ್ನರ್ ಘೋಷಿಸಿದ ವಿಕಿಪಿಡಿಯಾ: ಅಭಿಮಾನಿಗಳ ಸಂಭ್ರಮಾಚರಣೆ- ಆದದ್ದೇನು?
'ನಾನು ಸಾರ್ವಜನಿಕ ಕ್ಷೇತ್ರದಲ್ಲಿ ಇರುವಾಕೆ. ಮೊಬೈಲ್, ಟಿ.ವಿ. ಏನೂ ಇಲ್ಲದೇ ಬದುಕುವುದು ಕಷ್ಟವಾಯಿತು. ಪ್ರತಿನಿತ್ಯ ನನಗೆ ದಿನಪತ್ರಿಕೆ ಬೇಕೇ ಬೇಕು. ಅದು ಕೂಡ ಸಿಗಲಿಲ್ಲ. ಪುಸ್ತಕ ಇಲ್ಲದೇ ಇರುವವಳೇ ಅಲ್ಲ ನಾನು, ಅದು ಕೂಡ ಇಲ್ಲಿ ಸಿಗಲಿಲ್ಲ. ಸಾಮಾಜಿಕ ಕ್ಷೇತ್ರದಲ್ಲಿ ಇರುವ ಕಾರಣ, ಎಲ್ಲವೂ ಅಪ್ಡೇಟ್ ಆಗುತ್ತಿರಬೇಕು. ಆದರೆ ಅವುಗಳಿಂದ ದೂರವಾಗಿ ಬದುಕಬೇಕಾಯಿತು. ಪೂಜೆ ಇಲ್ಲದೇ, ಆಹಾರ ಪದ್ಧತಿಯಲ್ಲಿಯೂ ವ್ಯತ್ಯಾಸವಾಗಿ ಆರೋಗ್ಯ ಸಮಸ್ಯೆ ಎದುರಾಯ್ತು. ಹೊಸ ಹೊಸ ಸವಾಲುಗಳು ಬಂದವು. ಆದರೆ ಅವೆಲ್ಲವನ್ನೂ ನಿಭಾಯಿಸುವ ಶಕ್ತಿ ಬಿಗ್‌ಬಾಸ್ ಕೊಟ್ಟಿತು' ಎಂದಿದ್ದಾರೆ ಚೈತ್ರಾ. ಇಂಥದ್ದೊಂದು ಭಾಗ್ಯ ಹೆಚ್ಚಿನವರಿಗೆ ಸಿಗುವುದಿಲ್ಲ. ಇದು ನನಗೆ ಬಯಸದೇ ಸಿಕ್ಕಿದ ಭಾಗ್ಯ. ಯಾರಿಗಾದರೂ ಇಂಥ ಅವಕಾಶ ಸಿಕ್ಕರೆ ಮಿಸ್ ಮಾಡಿಕೊಳ್ಳಬೇಡಿ' ಎಂದಿದ್ದಾರೆ ಚೈತ್ರಾ.
'ಸಿನಿಮಾ, ಕಿರುತೆರೆಯಂಥ ಎಂಟರ್ಟೇನ್ ಪ್ರಪಂಚದಿಂದ ತುಂಬಾ ದೂರ ಇದ್ದವಳು ನಾನು. ಆದ್ದರಿಂದ ಬಿಗ್‌ಬಾಸ್ ಮನೆಯಲ್ಲಿ ಒಳಗಡೆ ಆಟ ಬರುವುದಿಲ್ಲ, ಅಡ್ಜಸ್ಟ್ ಆಗುವುದು ತುಂಬಾ ಕಷ್ಟ ಎನ್ನುವ ಭಯ ಇತ್ತು. ನನ್ನ ಪ್ರಪಂಚವೇ ಬೇರೆ. ಆದರೆ ಯಾವ ಪ್ರಪಂಚವನ್ನು ವಿರೋಧಿಸ್ತಾ ಇದ್ನೋ ಅಲ್ಲಿಯೇ ಹೋಗಬೇಕಾಯಿತು. ಎಂಟರ್ಟೇನ್ಮೆಂಟ್ ಪ್ರಪಂಚದ ಬಗ್ಗೆ ಇದ್ದ ನನ್ನ ಅನಿಸಿಕೆಗಳೂ ದೂರವಾದವು' ಎಂದರು ಚೈತ್ರಾ ಕುಂದಾಪುರ. ಚೈತ್ರಾ ಆಗಿ ಒಳಗೆ ಹೋದೆ, ಚೈತ್ರಕ್ಕಾ ಆಗಿ ಹೊರಕ್ಕೆ ಬಂದೆ. ನನ್ನ ಒಳಗಿರುವ ಪುಟ್ಟ ಮಗುವಿನ ಮನಸ್ಸು, ರೌದ್ರ ಸ್ವರೂಪ ಎಲ್ಲವನ್ನೂ ನೋಡಿದ್ದೀರಿ. ಇಷ್ಟು ದಿನ ಪ್ರೀತಿಯನ್ನು ಹರಿಸಿದ್ದೀರಿ. ಪುಟ್ಟ ಮಕ್ಕಳಿಂದ ವಯಸ್ಸಾಗಿರುವವರೂ ನನಗೆ ಹಾರೈಸಿದ್ದಾರೆ. ಬಿಗ್ಬಾಸ್ಗೆ ಆಫರ್ ಬಂದಾಗ ತುಂಬಾ ಮಂದಿ ಅವಮಾನವನ್ನೂ ಮಾಡಿದರು. ಆದರೆ ಅವಮಾನ ಮಾಡಿದವರ ಎದುರೇ ಜಯಿಸುವುದು ಸುಲಭದ ಮಾತಲ್ಲ ಎಂದಿರುವ ಚೈತ್ರಾ, ಜೀವನದಲ್ಲಿ ನಾನು ತಲೆದೂಗಿ, ತಲೆಬಾಗಿ, ಎದುರಾಡದೇ ಇದ್ದು, ಹೇಳಿದ್ದನ್ನು ಕೇಳಿದ್ದು ಎಂದರೆ ಬಿಗ್‌ಬಾಸ್ ಮಾತನ್ನು ಮಾತ್ರ ಎಂದಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಚೈತ್ರಾ ಕುಂದಾಪುರಗೆ ವಂಚನೆ ಪ್ರಕರಣದಲ್ಲಿ ಮತ್ತೆ ಸಂಕಷ್ಟ!