
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಇತಿಹಾಸದಲ್ಲೇ ಹಿಂದೆಂದೂ ಕಾಣದ ಅಚ್ಚರಿಯ ತಿರುವೊಂದು ಸಿಕ್ಕಿದೆ! ನಿಯಮ ಉಲ್ಲಂಘಿಸಿ ಮನೆಯಿಂದ ಅರ್ಧಕ್ಕೇ ಹೊರಬಿದ್ದಿದ್ದ ಕಾಮನ್ ಮ್ಯಾನ್ ಸ್ಪರ್ಧಿ 'ಮಾಡ್ರನ್ ಮಹಾಕವಿ ಮಂಜ' ಮತ್ತೆ ದೊಡ್ಮನೆ ಪ್ರವೇಶಿಸಿದ್ದಾರೆ. ಆದರೆ, ಇಲ್ಲೊಂದು ಬಿಗ್ ಟ್ವಿಸ್ಟ್ ಇದೆ—ಮಂಜ ಮನೆಗೆ ಹೋದರೂ ಅವರಿಗೆ ಬಿಗ್ ಬಾಸ್ ಕಪ್ ಗೆಲ್ಲುವ ಅರ್ಹತೆ ಇರುವುದಿಲ್ಲ!
ಹೌದು, Bigg Boss Kannada Modern Mahakavi Manju Re-Entry. ಕೇವಲ ಆಟವಾಡಲು ಮಾತ್ರ ಮಂಜಗೆ ಅವಕಾಶ ಕಲ್ಪಿಸಲಾಗಿದ್ದು, ಈ ಕುರಿತು ಬಿಗ್ ಬಾಸ್ ಹಾಗೂ ಮಂಜ ನಡುವೆ ವಿಶೇಷ ಒಪ್ಪಂದ ನಡೆದಿದೆ. ವಾರಾಂತ್ಯದ 'ಕಿಚ್ಚನ ಪಂಚಾಯಿತಿ'ಯಲ್ಲಿ ಸುದೀಪ್ ಈ ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಈ ಹಿಂದೆ ಮನೆಯ ಸದಸ್ಯರ ಮೇಲೆ ಕೆಟ್ಟ ಪದಬಳಕೆ ಮಾಡಿ, ನಿಯಮ ಮೀರಿ ಮಂಜ ಮನೆಯಿಂದ ಹೊರನಡೆದಿದ್ದರು. ಆದರೆ, ಬಿಗ್ ಬಾಸ್ ನಿಯಮಾವಳಿ ಪ್ರಕಾರ ಅವರು 'ರೆಡ್ ಕಾರ್ಡ್' ಪಡೆಯುವಂತಹ ಅಕ್ಷಮ್ಯ ಅಪರಾಧವನ್ನೇನೂ ಮಾಡಿರಲಿಲ್ಲ. ಸಾಮಾನ್ಯ ವ್ಯಕ್ತಿಯಾಗಿ ಬಿಗ್ ಬಾಸ್ ಪ್ರವೇಶಿಸಿದ್ದ ಮಂಜ ಹೊರಬಂದ ಮೇಲೆ ಜನರ ದೂಷಣೆಗೆ ಒಳಗಾಗಿದ್ದರು. 'ಒಬ್ಬ ವ್ಯಕ್ತಿಗೆ ಈ ವೇದಿಕೆಯಿಂದ ಒಳ್ಳೆಯದಾಗಬೇಕೇ ಹೊರತು ಕೆಟ್ಟದ್ದಾಗಬಾರದು' ಎಂಬ ಮಾನವೀಯ ಕಳಕಳಿಯಿಂದ ಬಿಗ್ ಬಾಸ್ ಮಂಜಗೆ ತಿದ್ದಿಕೊಳ್ಳಲು ಈ ಸುವರ್ಣಾವಕಾಶ ನೀಡಿದೆ.
ಸುದೀಪ್ ಅವರ ಮುಂದೆ ಮಾತನಾಡಿದ ಮಂಜ ತಮ್ಮ ನೋವನ್ನು ಹಂಚಿಕೊಂಡರು. 'ಅಣ್ಣ, ನಾನು ಬಿಗ್ ಬಾಸ್ ಮನೆಯಲ್ಲಿ ಕೆಟ್ಟದಾಗಿ ವರ್ತಿಸಿ, ಬೇಗನೇ ಮನೆಯಿಂದ ಹೊರಬಂದಿದ್ದಕ್ಕೆ ರಸ್ತೆಯಲ್ಲಿ ಹೋಗುವಾಗ ಒಬ್ಬ ಅಜ್ಜಿ ನನಗೆ ಬಂದು ಹೊಡೆದರು. ಅಷ್ಟೊಂದು ಜನರು ನನ್ನ ಮೇಲೆ ಪ್ರೀತಿ ತೋರಿಸಿದ್ದಾರೆ. ಜನ ತಮ್ಮ ದುಡ್ಡು ಖರ್ಚು ಮಾಡಿ, ಮೊಬೈಲ್ ರೀಚಾರ್ಜ್ ಮಾಡಿಕೊಂಡು ಶೋ ನೋಡುತ್ತಾರೆ. ಅವರಿಗೆ ನಾವೊಂದು ನ್ಯಾಯ ಒದಗಿಸಬೇಕು' ಎಂದು ಪಶ್ಚಾತ್ತಾಪ ವ್ಯಕ್ತಪಡಿಸಿದರು.
ಸುದೀಪ್ ಅವರು ಮಂಜಗೆ ಬುದ್ಧಿಮಾತು ಹೇಳುತ್ತಾ, 'ನೀವು ಅಷ್ಟೊಂದು ಕೆಟ್ಟವರಲ್ಲ, ಕೆಟ್ಟವರಾಗಲು ಹೋಗಬೇಡಿ. ಇದು ನಿಮ್ಮನ್ನು ನೀವು ತಿದ್ದಿಕೊಳ್ಳಲು ಸಿಕ್ಕಿರುವ ಅವಕಾಶ. ಮನೆಯಿಂದ ಹೊರಬರುವಾಗ ನಿಮ್ಮ ಬಗ್ಗೆ ಒಳ್ಳೆಯ ಟ್ರೇಲರ್ ಬರಬೇಕು ಎಂದರು. ಇದಕ್ಕೆ ಮಂಜ ಅವರು ಉತ್ತರಿಸುತ್ತಾ, 'ಅಣ್ಣ, ನಾನು ಮಾಡಿದ ತಪ್ಪಿಗೆ ಇದೆ ಒಪ್ಪಿಗೆ, ಇನ್ಮೇಲೆ ನನ್ನ ಗುರಿ ಏನಿದ್ದರೂ ಕಪ್‌ಗೆ' ಎಂದು ಡೈಲಾಗ್ ಹೊಡೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸುದೀಪ್ ಅವರು, 'ನೀವು ಮಾಡಿದ ತಪ್ಪಿಗೆ ಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿದ್ದೀರಿ. ಕೇವಲ ಆಟವಾಡಲು ಮಾತ್ರ ನಿಮಗೆ ಅನುಮತಿ' ಎಂದು ಸ್ಪಷ್ಟಪಡಿಸಿದರು.
ಮತ್ತೆ ಮನೆ ಪ್ರವೇಶಿಸುವ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ ಮಂಜ, ತಮ್ಮದೇ ಶೈಲಿಯಲ್ಲಿ ಪಂಚ್ ಕೊಟ್ಟರು: 'ನಾನು ಮತ್ತೆ ಮನೆಯೊಳಗೆ ಹೋದರೆ ಉಳಿದ ಸ್ಪರ್ಧಿಗಳು ಶಾಕ್ ಆಗ್ತಾರೆ! ನಾನು ಹೊರಗೆ ಹೋದಾಗ ಪಾಯಸ, ಸ್ವೀಟ್, ಪುಳಿಯೋಗರೆ ತಿಂದು ಸಂಭ್ರಮಿಸಿದವರಿಗೆ ಈಗ ನಡುಕ ಶುರುವಾಗುತ್ತೆ ಎಂದು ಹೇಳಿದರು.
ಒಟ್ಟಿನಲ್ಲಿ, ಮಾತಿನ ಮೇಲೆ ಹಿಡಿತ ಕಳೆದುಕೊಂಡು ಹೊರಬಿದ್ದಿದ್ದ ಮಿಡಲ್ ಕ್ಲಾಸ್ ಮಂಜ ಇದೀಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಪ್ ಗೆಲ್ಲುವ ಹಕ್ಕಿಲ್ಲದಿದ್ದರೂ, ಮಂಜ ಅವರ ಈ ಸೆಕೆಂಡ್ ಇನ್ನಿಂಗ್ಸ್ ಮನೆಯೊಳಗಿನ ಸಮೀಕರಣಗಳನ್ನು ಹೇಗೆ ಬದಲಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.