ಕಾಟೇರ ಸಿನಿಮಾ ಶೈಲಿಯಲ್ಲಿ ಮಚ್ಚು ಝಳಪಿಸಿದ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ರಕ್ಷಿಸಲು ಪೊಲೀಸರು ಮುಂದಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ರಾತ್ರೋ ರಾತ್ರಿ ಬದಲಿ ಮಚ್ಚು ತಂದು ಬಿಡುಗಡೆ ಮಾಡಿರುವ ಬಗ್ಗೆ ಅನುಮಾನಗಳು ಮೂಡಿವೆ.
ಬೆಂಗಳೂರು (ಮಾ.25): ಕಾಟೇರ ಸಿನಿಮಾದಲ್ಲಿ ನಟ ದರ್ಶನ್ ಮಚ್ಚು ಹಿಡಿದು ಪೋಸ್ ಕೊಟ್ಟಿದ್ದನ್ನು ರೀಲ್ಸ್ ಮೂಲಕ ಮರುಸೃಷ್ಟಿ ಮಾಡಲು ರಸ್ತೆಯಲ್ಲಿ ಮಚ್ಚು ಝಳಪಿಸಿದ್ದ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಪೊಲೀಸರು ರಕ್ಷಣೆ ಮಾಡಲು ಮುಂದಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ರೀಲ್ಸ್ ಮಾಡಿದ್ದ ಮಚ್ಚು ತಂದು ಕೊಡುವವರೆಗೂ ಬಂಧನದಿಂದ ಬಿಡುಗಡೆ ಮಾಡೊಲ್ಲ ಎಂದಿದ್ದ ಪೊಲೀಸರು ರಾತ್ರೋ ರಾತ್ರಿ ಯಾವುದೋ ಒಂದು ಬದಲಿ ಫೈಬರ್ ಮಚ್ಚು ತಂದು ತೋರಿಸಿದ್ದಕ್ಕೆ ಬಿಟ್ಟು ಕಳುಹಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೌದು, ಸಾರ್ವಜನಿಕ ಸ್ಥಳದಲ್ಲಿ ಭಯ ಹುಟ್ಟಿಸುವಂತಹ ಶಸ್ತ್ರಗಳು ಅಥವಾ ಆಯುಧಗಳನ್ನು ಹಿಡಿದು ಪ್ರದರ್ಶನ ಮಾಡುವಂತಿಲ್ಲ. ಜೊತೆಗೆ, ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಯುವಜನರ ದಾರಿ ತಪ್ಪಿಸಬಾರದು. ಆದರೆ, ಇಲ್ಲಿ ಸೆಲೆಬ್ರಿಟಿ ಸ್ಥಾನದಲ್ಲಿರುವ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರು ಸಾರ್ವಜನಿಕ ಸ್ಥಳವಾದ ನಡು ರಸ್ತೆಯಲ್ಲಿ ಕಾಟೇರ ಸಿನಿಮಾದಲ್ಲಿ ದರ್ಶನ್ ಹಿಡಿದುಕೊಂಡಿದ್ದ ಮಾದರಿಯಲ್ಲಿಯೇ ಮಚ್ಚು ಹಿಡಿದು ಪೋಸ್ ಕೊಡುವ ರೀಲ್ಸ್ ಮಾಡಿದ್ದರು. ಇದರ ಬೆನ್ನಲ್ಲಿಯೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಫ್‌ಐಆರ್ ಕೂಡ ದಾಖಲಿಸಿದ್ದರು.
ಇದರ ಬೆನ್ನಲ್ಲಿಯೇ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೀಡಿದ್ದ ನೋಟೀಸ್‌ಗೆ ಉತ್ತರ ಕೊಡಲು ಇಬ್ಬರೂ ಸ್ಪರ್ಧಿಗಳು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಹೋಗಿದ್ದರು. ಈ ವೇಳೆ ಇಬ್ಬರ ಹೇಳಿಕೆಗಳನ್ನು ಪಡೆದು, ಅವರು ಇದು ಫೈಬರ್ ಮಚ್ಚು ಎಂದು ಹೇಳಿದ್ದರು. ಹೀಗಾಗಿ, ಮಚ್ಚನ್ನು ಪೊಲೀಸರ ಮುಂದೆ ಹಾಜರುಪಡಿಸುವವರೆಗೂ ನಿಮ್ಮನ್ನು ಬಂಧನ ಮಾಡಲಾಗುತ್ತದೆ ಎಂದು ಹೇಳಿ ಇಬ್ಬರನ್ನೂ ಬಂಧಿಸಿ, ಸೆಲ್‌ನಲ್ಲಿ ಇಟ್ಟಿದ್ದರು. ಆದರೆ, ತಡರಾತ್ರಿ ವೇಳೆ ರಜತ್, ವಿನಯ್ ರೀಲ್ಸ್ ಮಾಡಲು ಬಳಸಿದ್ದಾರೆನ್ನಲಾದ ಮಚ್ಚು ತಂದು ಕೊಟ್ಟಿದ್ದಾರೆ. ಆಗ ಇಬ್ಬರನ್ನು ಪೊಲೀಸರು ಬಿಟ್ಟು ಕಳುಹಿಸಿದ್ದರು.
ಇದನ್ನೂ ಓದಿ: ಕಾಟೇರನ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕೆ ರಜತ್, ವಿನಯ್‌ಗೆ ಬಾಂಬೆ ಕಟ್ ಹಾಕಿ ಕೂರಿಸಿದ ಪೊಲೀಸ್!
ಆದರೆ, ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದ ಮಚ್ಚನ್ನು ಪ್ರದರ್ಶನ ಮಾಡಿದ್ದು, ಅದು ರೀಲ್ಸ್ ಮಾಡಲು ಬಳಸಿದ್ದ ಮಚ್ಚಿಗಿಂತ ವಿಭಿನ್ನವಾಗಿರುವುದು ಪತ್ತೆಯಾಗಿದೆ. ಫೈಬರ್ ಎಂದು ಹೇಳಲಾದ ಮಚ್ಚು ಹಾಗೂ ರಜತ್ ಹಿಡಿದುರುವ ಮಚ್ಚಿಗೂ ವ್ಯತ್ಯಾಸಗಳು ಕಂಡುಬರುತ್ತಿವೆ. ಹೀಗಾಗಿ, ಪೊಲೀಸರು ವಶಕ್ಕೆ ಪಡೆದ ಮಚ್ಚಿನ ಬಗ್ಗೆಯೇ ಅನುಮಾನ ವ್ಯಕ್ತವಾಗುತ್ತಿದೆ. ಈ ಮೂಲಕ ರೀಲ್ಸ್ ಮಾಡಿದ ಬಿಗ್ ಬಾಸ್ ಸ್ಪರ್ಧಿಗಳನ್ನು ರಕ್ಷಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಇಲ್ಲಿ ಪೊಲೀಸರೇ ಮಾಧ್ಯಮಗಳು ಹಾಗೂ ಜನರ ದಿಕ್ಕು ತಪ್ಪಿಸುತ್ತಿದ್ದಾರಾ? ಎಂಬ ಚರ್ಚೆಗಳು ಕೂಡ ಮುನ್ನೆಲೆಗೆ ಬಂದಿವೆ.
ಇದನ್ನೂ ಓದಿ: ರಜತ್, ವಿನಯ್ ಗೌಡ ಪೊಲೀಸರ ಅರೆಸ್ಟ್; ಮಚ್ಚು ಹಿಡಿದು ರೀಲ್ಸ್ ಹುಚ್ಚಾಟ ಮಾಡಿದ್ದ ಬಿಗ್ ಬಾಸ್ ಸ್ಪರ್ಧಿಗಳು!