ರಿಯಾಲಿಟಿ ಷೋ ಒಂದರಲ್ಲಿ ಮಾಡಿಕೊಂಡಿರುವ ಎಡವಟ್ಟಿನಿಂದಾಗಿ ಇದೀಗ ಬಿಗ್‌ಬಾಸ್ ಮಾಜಿ ಸ್ಪರ್ಧಿ ಬುಲೆಟ್ ರಕ್ಷಕ್ ಅವರಿಗೂ ಕಾನೂನು ಸಂಕಷ್ಟ ಎದುರಾಗಿದೆ. ಅಷ್ಟಕ್ಕೂ ಆಗಿದ್ದೇನು?
ಸಾರ್ವಜನಿಕವಾಗಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಆರೋಪದ ಮೇಲೆ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಸದ್ಯ ಬಂಧಿಸಲಾಗಿದೆ. ಇವರು ಜೈಲುಪಾಲಾಗಿರುವ ಬೆನ್ನಲ್ಲೇ ಇದೀಗ ಮತ್ತೋರ್ವ ಮಾಜಿ ಸ್ಪರ್ಧಿ ಬುಲೆಟ್ ರಕ್ಷಕ್ಗೂ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಇವರ ವಿರುದ್ಧ ಹಿಂದೂ ಸಂಘಟನೆಗಳು ದೂರು ದಾಖಲು ಮಾಡಲು ಮುಂದಾಗಿದ್ದಾರೆ.ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಿಂದೂ ಸಂಘಟನೆಗಳು ದೂರು ಸಲ್ಲಿಸಲು ಹೊರಟಿದ್ದು, ಹೀಗಾದರೆ, ಬುಲೆಟ್ ರಕ್ಷಕ್ ಕಾನೂನಿನ ಸುಳಿಯಲ್ಲಿ ಸಿಗುವ ಸಾಧ್ಯತೆ ಇದೆ. ಅಷ್ಟಕ್ಕೂ ಬುಲೆಟ್ ರಕ್ಷಕ್ ಅವರು, ಶೋ ಒಂದರಲ್ಲಿ ಭಾಗಿಯಾಗಿದ್ದ ವೇಳೆ ನಾಡದೇವಿ ಚಾಮುಂಡೇಶ್ವರಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪ ಎದುರಿಸುತ್ತಿದ್ದಾರೆ.
ಈ ಷೋನಲ್ಲಿ ರಕ್ಷಕ್ ಅವರ ಪಕ್ಕ ಮಹಿಳಾ ಸ್ಪರ್ಧಿ ಇದ್ದರು. ಅವರನ್ನು ಹೊಗಳುವುದು ರಕ್ಷಕ್ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ, ಆಕೆಯನ್ನು ಮೆಚ್ಚಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ನಾಡದೇವಿಗೆ ಅವಮಾನ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದ್ದು, ಇವರ ವಿರುದ್ಧ ಹಿಂದೂ ಸಂಘಟನೆಗಳು ಗರಂ ಆಗಿವೆ. ಅಷ್ಟಕ್ಕೂ ಆಗಿದ್ದೇನೆಂದರೆ, ಇವರು ರಿಯಾಲಿಟಿ ಷೋ ಸಂದರ್ಭದಲ್ಲಿ ದರ್ಶನ್ ಹಾಗೂ ರಚಿತಾ ರಾಮ್ ಅಭಿನಯದ ಬುಲ್ ಬುಲ್ ಸಿನಿಮಾದ ದೃಶ್ಯವನ್ನು ಕಾಪಿ ಮಾಡಲು ಹೋಗಿದ್ದರು.
ಜೀವನದಲ್ಲಿ ಮೊದಲ ಬಾರಿ ಬುಲೆಟ್ ರಕ್ಷಕ್ ರೊಮಾನ್ಸ್: ವೇದಿಕೆ ಮೇಲೆ ನಾಚಿ ನೀರಾದ 'ಕನ್ನಡತಿ' ರಮೋಲಾ!
ಆ ಸಂದರ್ಭದಲ್ಲಿ ಮಹಿಳಾ ಸ್ಪರ್ಧಿ ರಮೋಲಾ ಅವರನ್ನು ನಾಡದೇವಿ ಚಾಮುಂಡೇಶ್ವರಿಗೆ ಹೋಲಿಕೆ ಮಾಡುವಾಗ ಏನೋ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ. ನಿಮ್ಮನ್ನು ನೋಡ್ತಿದ್ರೆ ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು ಸೀರೆ ಒಡವೆ ಬಿಚ್ಚಿಟ್ಟು ಪ್ಯಾಂಟು ಶರ್ಟು ಹಾಕೊಂಡು ಸ್ವಿಟ್ಜರ್ಲೆಂಡ್‌ನಲ್ಲಿ ಟ್ರಿಪ್ ಹೊಡಿತಿದ್ದಾಳೆ ಅನ್ನಿಸ್ತಿದೆ ಎಂದು ಡೈಲಾಗ್ ಹೇಳಿದ್ದಾರೆ. ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಮಾತುಗಳಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ರಕ್ಷಕ್ ಮಾತ್ರವಲ್ಲದೇ ಈ ಷೋ ಆಯೋಜಿಸಿರುವವರ ವಿರುದ್ಧವೂ ಕ್ರಮಕ್ಕೆ ಹಿಂದೂ ಸಂಘಟನೆಗಳು ಮುಂದಾಗಿವೆ.
ಇನ್ನು ಬುಲೆಟ್ ರಕ್ಷಕ್ ಕುರಿತು ಹೇಳುವುದಾದರೆ, ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಬಿಗ್‌ಬಾಸ್ ಬಳಿಕ ಸಕತ್ ಫೇಮಸ್ ಆದವರು. ಬಿಗ್‌ಬಾಸ್ ಬಗ್ಗೆ ಹೇಳಿಕೆ ನೀಡಿ ಕಾಂಟ್ರವರ್ಸಿಗೆ ಒಳಗಾಗಿದ್ದರೂ ಇದೀಗ ಅವರಿಗೆ ಸಕತ್ ಡಿಮಾಂಡ್ ಕೂಡ ಇದೆ. ಇದೀಗ ಅವರು, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭರ್ಜರಿ ಬ್ಯಾಚುಲರ್ಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಅವರಿಗೆ, ಸೀತಾರಾಮ ವಿಲನ್ ಚಾಂದನಿ ಅರ್ಥಾತ್ ನಟಿ ರಮೋಲಾ ಜೋಡಿಯಾಗಿದ್ದಾರೆ. ಇದೀಗ ಇವರಿಬ್ಬರೂ ಬೇರೆ ಜೋಡಿಗಳಿಗೆ ಪೈಪೋಟಿ ನೀಡಬೇಕಿದೆ. ಕೆಲ ವಾರಗಳ ಹಿಂದೆ ಜೀವನದಲ್ಲಿ ಇದೇ ಮೊದಲ ಬಾರಿಗೆ ಲವ್ ಸಾಂಗ್ ಡಾನ್ಸ್ ಮಾಡಿ, ರಮೋಲಾ ಅವರಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದರು. ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಲವ್ ಸಾಂಗ್ಗೆ ಡಾನ್ಸ್ ಮಾಡಿರುವುದಾಗಿ ರಕ್ಷಕ್ ಹೇಳಿದರೆ, ರಮೋಲಾ ಕೂಡ ಇಂಥದ್ದೊಂದು ಗಿಫ್ಟ್ ನನಗೆ ಮೊದಲ ಬಾರಿಗೆ ಸಿಕ್ಕಿದ್ದು ಎಂದಿದ್ದರು. ಇದರಲ್ಲಿ, ರಕ್ಷಕ್ ಅವರು ಅಮೋಲಾ ಅವರಿಗೆ ಅವರ ಬಾಲ್ಯದ ಫೋಟೋಗಳನ್ನು ಗಿಫ್ಟ್ ನೀಡಿದ್ದರು. ಆದರೆ ಈಗ ಕಾನೂನು ಕುಣಿಕೆಯಲ್ಲಿ ಸಿಲುಕಿದ್ದಾರೆ.
ಅಪ್ಪನ ಜೊತೆ ನಟಿ ಅದಿತಿ ಪ್ರಭುದೇವ ಎಳನೀರು ಚಾಲೆಂಜ್! ಒಂದು ಸಾವಿರ ರೂ. ಗೆದ್ದೋರು ಯಾರು?