ಇಂದಿನ ಧಾರವಾಹಿಗಳು ದಾರಿ ತಪ್ಪಿವೆ. ಅದೇ ಕಾರಣಕ್ಕೆ ನನಗೆ ಸೀರಿಯಲ್‌ಗಳಲ್ಲಿ ಕಾಣಿಸಿಕೊಳ್ಳೋ ಉತ್ಸಾಹವೇ ಇಲ್ಲ ಎಂದು ಪ್ರಸಿದ್ಧ ರಂಗಕರ್ಮಿ, ನಟಿ ಹಾಗೂ ದಿವಂಗತ ನಟ ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್ ಹೇಳಿದ್ದಾರೆ.
ಬೆಂಗಳೂರು (ಅ.23): ಸಾಕಷ್ಟು ಹಿರಿಯ ನಟ ಹಾಗೂ ನಟಿಯರು ಸೀರಿಯಲ್‌ಗಳಲ್ಲಿ ಕಾಣಿಸಿಕೊಂಡರೂ, ಹಿರಿಯ ನಟಿ ಹಾಗೂ ರಂಗಕರ್ಮಿ ಅರುಂಧತಿ ನಾಗ್ ಮಾತ್ರ ಯಾವುದೇ ಸೀರಿಯಲ್‌ಗಳಲ್ಲಿ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಸ್ವತಃ ಅರುಂಧತಿ ನಾಗ್ ಮಾತನಾಡಿದ್ದಾರೆ. ಸುವರ್ಣ ನ್ಯೂಸ್ ಪಾಡ್‌ಕಾಸ್ಟ್‌ನಲ್ಲಿ ಪತ್ರಕರ್ತ ಹಾಗೂ ಲೇಖಕ ಜೋಗಿ ಅವರೊಂದಿಗಿನ ಸಂವಾದದಲ್ಲಿ ಈಗಿನ ಕಿರುತರೆಯ ಪರಿಸ್ಥಿತಿ,ತಾವು ಧಾರವಾಹಿಗಳಲ್ಲಿ ನಟಿಸದೇ ಇರೋದರ ಹಿಂದಿನ ಕಾರಣ ಇವೆಲ್ಲವನ್ನೂ ಬಹಿರಂಗಪಡಿಸಿದ್ದಾರೆ. ಟಿವಿ ಮನರಂಜನೆಯ ಮಾಧ್ಯಮವಾಗಿದ್ದರೂ ಅದರಲ್ಲಿ ಗಂಭೀರತೆಗಳು ಇರಬೇಕು ಎಂದು ಅರುಂಧತಿ ನಾಗ್ ಹೇಳಿದ್ದಾರೆ. ರಂಗಶಂಕರದ ಕೆಲಸಗಳು, ನಾಟಕಗಳು ಇದರ ನಡುವೆಯೇ ಬ್ಯೂಸಿ ಆಗಿರುವ ಅರುಂಧತಿ ನಾಗ್ ಈಗ 70 ವರ್ಷದ ಸನಿಹದಲ್ಲಿದ್ದಾರೆ. ಈಗಿನ ಮನರಂಜನಾ ಮಾಧ್ಯಮಗಳಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ ಅವರು ಮಾತನಾಡಿದ್ದಾರೆ.
'ಇಂದು ಟಿವಿ ಯಾವ ರೀತಿಯ ಕ್ವಾಲಿಟಿಯನ್ನು ಕೊಡುತ್ತಿದೆ ಅನ್ನೋದನ್ನ ನೀವೇ ನೋಡ್ತಾ ಇದ್ದೀರಿ. ತೀರಾ ಸಾಧಾರಣ ಎನಿಸುತ್ತದೆ. ಅದರಲ್ಲಿ ಕಥೆಯಾಗಲಿ, ಮೇಕಪ್ ಆಗಲಿ, ಕಾಸ್ಟ್ಯೂಮ್ ಆಗಲಿ ಒಂದೂ ರಿಯಾಲಿಟಿಯೇ ಇಲ್ಲ. ರಿಯಾಲಿಟಿಯನ್ನ ಟಚ್ ಮಾಡೋ ಒಂದು ಸಣ್ಣ ಪ್ರಯತ್ನವೂ ಇಲ್ಲ.ಹಳ್ಳಿ ಮನುಷ್ಯ ಕೂಡ ಇಲ್ಲಿ ಮೇಕಪ್ ಹಚ್ಚಿಕೊಂಡು ಬರುತ್ತಾನೆ. ಒಂದು ಸಣ್ಣ ಪ್ರೋಗ್ರಾಮ್‌ನಲ್ಲೂ ಮೇಕಪ್ ಇಲ್ಲದೆ ಇರೋಕೆ ಆಗಲ್ಲ. ಕಿರುತೆರೆ ಈಗಾಗಲೇ ದಾರಿ ತಪ್ಪಿದೆ. ಟಿವಿ ಪ್ರೋಗ್ರಾಮ್‌ಗಳನ್ನ ಯಾರಿಗೋಸ್ಕರ ಮಾಡ್ತಾ ಇದ್ದೀರಿ ಅನ್ನೋದನ್ನ ಮರೆಯುತ್ತಿದ್ದಾರೆ. ಏನೂ ಕೆಲಸ ಇಲ್ಲ, ಮನೆಯಲ್ಲಿ ಟಿವಿ ಇದೆ. ಫ್ರೀ ಮೀಡಿಯಂ, ಜಾಹೀರಾತು ಕೊಡುವವರು ಜಾಹೀರಾತು ಕೊಡ್ತಾರೆ. ನೀವು ಜಾಹೀರಾತಿನ ಕ್ವಾಲಿಟಿ ಹಾಗೂ ಪ್ರೋಗ್ರಾಮ್‌ಗಳ ಕ್ವಾಲಿಟಿಯನ್ನೇ ಹೋಲಿಸಿ ನೋಡಿ. ಇದರಲ್ಲೇ ಅಂತರಗಳು ಗೊತ್ತಾಗುತ್ತದೆ. ಇದೇ ನನಗೆ ಸಮಸ್ಯೆ' ಎಂದು ಅರುಂಧತಿ ನಾಗ್ ಹೇಳಿದ್ದಾರೆ.
'ನಿಮಗೆ ಅದು ಎಂಟರ್‌ಟೇನ್‌ಮೆಂಟ್ ಆಗಿರಬಹುದು. ಆದರೆ, ನನಗೆ ಟಿವಿ ಅನ್ನೋದು ಎಂಟರ್‌ಟೇನ್‌ಮೆಂಟ್ ಅಲ್ಲ. ಅದು ನನ್ನ ಪ್ಯಾಶನ್' ಎಂದು ಹೇಳಿದ್ದಾರೆ. ನೋಡೋರು ಗಮನವಿಟ್ಟು ನೋಡಲ್ಲ ಆ ಕಾರಣಕ್ಕಾಗಿಯೇ ಟಿವಿ ಸೀರಿಯಲ್ ಮಾಡೋದಿಲ್ಲ ಎಂದಿದ್ದ ಹಿಂದಿನ ಮಾತಿಗೆ ಉತ್ತರಿಸಿದ ಅವರು, 'ಅದು ನಿಜ. ಬಾತ್‌ರೂಮ್‌ನಲ್ಲಿ ಅದನ್ನ ನೋಡ್ತಾ ಇರ್ತಾರೆ. ಅಷ್ಟು ಜೀವ ತೆತ್ತು ನಾಟಕ ಮಾಡ್ತಾ ಇರ್ತಿನಿ. ಅದನ್ನ ಯಾರೋ ಬಾತ್‌ರೂಮ್‌ನಲ್ಲಿ ಕುಳಿತುಕೊಂಡು ನೋಡ್ತಾ ಇರ್ತಾರೆ. ನಾನು ಸೀರಿಯಸ್‌ನೆಸ್ ಇರಬೇಕು ಅಂತಾ ಹೇಳ್ತಿನಿ. ನಾನು ತುಂಬಾ ಸೀರಿಯಸ್‌ನೆಸ್ ಕೊಟ್ಟು ನಾಟಕ ಮಾಡ್ತೇನೆ. ಹಾಗಂತ ನಿಮ್ಮ ಇಡೀ ಜೀವನದಲ್ಲೇ ಗಂಭೀರವಾಗಿರಬೇಕು ಅಂತ ಅರ್ಥವಲ್ಲ. ಜೀವನದಲ್ಲಿ ಇಂಟ್ರಸ್ಟೇ ಇರಬಾರದು ಅನ್ನೋ ಅರ್ಥವಲ್ಲ. ಒಂದು ಗೌರವ ಅಂತೂ ಇರಲೇಬೇಕು' ಎಂದು ಹೇಳಿದ್ದಾರೆ.
undefined
ಏರ್‌ಪೋರ್ಟಲ್ಲಿ ವೃದ್ಧರ ನೋಡಿದ್ರೆ ಶಂಕರ್ ಬ್ಯಾಗ್ ಕಿತ್ಕೊತಿದ್ದ: ಅರುಂಧತಿ ನಾಗ್
ಇದಕ್ಕೆ ಕಾಮೆಂಟ್ ಮಾಡಿರುವ ಹೆಚ್ಚಿನ ಮಂದಿ, 'ನೋಡೋವು ಅಂಥವೇ.. ಇಷ್ಟು ಬೆಂಬಲ ಆಗಿನ ದಿನಗಳಲ್ಲಿ ಸಿಕ್ಕಿದ್ದರೆ ಚೆನ್ನಾಗಿತ್ತು.. ಎಲ್ಲಾ ಧಾರಾವಾಹಿಗಳಲ್ಲಿ ಆಡಂಬರ ತುಳುಕುತ್ತಿದೆ..' ಎಂದು ಬರೆದಿದ್ದಾರೆ. 'ಸತ್ಯವಾದ ಮಾತು .. ಅಮ್ಮ . ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್ ತರ ರಿಯಲ್ ಆಗಿ ನಟನೆ ವಾತಾವರಣ ಇವತ್ತು ನೋಡೋಕೆ ಆಗಲ್ಲ ..' ಎಂದು ಅಭಿಮಾನಿಗಳು ಬರೆದಿದ್ದಾರೆ. 'ನಮ್ಮ ಶಂಕರ್ ರವರ ಮಾಲ್ಗುಡಿ ಡೇಸ್ ಇವತ್ತು ನೋಡಿದ್ರು ಫ್ರೆಶ್ ಆಗಿ ಇಗ ತೆಗೆದಿದರೋ ಅನ್ಸುತ್ತೆ. ಈ ಹಾಳು ಹೊಲಸು ಮನೆ ಹಾಳು ಧಾರವಾಹಿಗಳು ಮನೆಯಲ್ಲಿ ಕೊಳ್ಳಿ ಇಡ್ತಾ ಇದಾವೆ ಮೇಡಂ' ಎಂದು ಬರೆದುಕೊಂಡಿದ್ದಾರೆ. 'ಈಗಿನ ಹೆಚ್ಚಿನ ಧಾರಾವಾಹಿ, ಸಿನಿಮಾಗಳಲ್ಲಿ ಅಭಿನಯ ಕೂಡ ಅಷ್ಟು ಚೆನ್ನಾಗಿಲ್ಲ. ಆಡಂಬರ ಬರೀ ಗ್ಯಾಂಗ್ ಸ್ಟರ್ ಕಥೆ ಹೊಡೆದಾಟ..' ಎಂದು ಅಭಿಪ್ರಾಯ ತಿಳಿಸಿದ್ದಾರೆ.
ನನ್ನ ನಂತರವೂ ರಂಗಶಂಕರ ಯಶಸ್ವಿಯಾಗಿ ಮುಂದುವರಿಯಬೇಕು: ಅರುಂಧತಿ ನಾಗ್!