ಕೊರೋನಾ ಕ್ರ್ಯಾಶ್: ವಿದೇಶ ಪ್ರವಾಸ ಬುಕಿಂಗ್‌ಗೆ ಇದು ಸುಸಮಯ!

By Suvarna News  |  First Published Mar 13, 2020, 4:03 PM IST

ಕೊರೋನಾ ವೈರಸ್ ಭಯದಿಂದಾಗಿ ಪ್ರವಾಸೋದ್ಯಮ ಪೂರ್ತಿ ನೆಲಕಚ್ಚಿದೆ. ಆದರೆ, ನಿಮ್ಮ ವಿದೇಶ ಪ್ರವಾಸದ ಕನಸಿಗೆ ಇದೇ ಸುಸಮಯ. ಯಾಕೆ ಅಂತ ತಿಳ್ಕೊಳಿ. 


ಈಗಾಗಲೇ 1 ಲಕ್ಷದ ಹತ್ತಿರತ್ತಿರ ಕೊರೋನಾ ವೈರಸ್ ಸೋಂಕು ತಲುಪಿದ್ದು, ಜಗತ್ತೇ ಒಂದು ಆತಂಕದ ಸ್ಥಿತಿಗೆ ತಲುಪಿದೆ. ಭಾರತದಲ್ಲಿ ಕೂಡಾ ಸೋಂಕಿತರ ಸಂಖ್ಯೆ 60ರ ಗಡಿ ದಾಟಿದೆ. ಎಲ್ಲ ದೇಶಗಳ ಸರ್ಕಾರಗಳೂ, ಜನತೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡುತ್ತಿವೆ. ಆದರೂ ಈ ವೈರಸ್ ಕುರಿತ ಭಯವೇ ಜಗತ್ತನ್ನು ಮೊಣಕಾಲಲ್ಲಿ ಕೂರಿಸಿಬಿಟ್ಟಿದೆ. ಕಣ್ಣಿಗೆ ಕಾಣದ ವೈರಸ್ ಒಂದು ಜಗತ್ತಿನ ಅತಿ ಬುದ್ಧಿಜೀವಿ ಎಂದು ಬೀಗುತ್ತಿದ್ದ ಮನುಷ್ಯನ ಹೆಡೆ ಮುರಿ ಕಟ್ಟಿ ಆಟ ಆಡಿಸುತ್ತಿರುವುದು ವಿಪರ್ಯಾಸವೇ ಸರಿ. ಈ ವೈರಸ್ ಕಾರಣದಿಂದ ದೇಶಗಳ ಆರ್ಥಿಕ ಸ್ಥಿತಿಗತಿ ಬಿಕ್ಕಟ್ಟಿಗೆ ಸಿಲುಕುತ್ತಿವೆ. ಹಾಗೆ ಪರದಾಡುತ್ತಿರುವುದರಲ್ಲಿ ಪ್ರವಾಸೋದ್ಯಮವೂ ಒಂದು. 

ಜನರು ತಮ್ಮೆಲ್ಲ ಯೋಜಿತ ಪ್ರವಾಸಗಳನ್ನು ಕ್ಯಾನ್ಸಲ್ ಮಾಡಿ ಮನೆಯೊಳಗೆ ಮುದುರಿ ಕುಳಿತುಕೊಳ್ಳುವುದೇ ಸೇಫ್ ಎಂದು ಭಾವಿಸುತ್ತಿದ್ದಾರೆ. ಇನ್ನೂ ಯೋಜಿಸಬೇಕಿದ್ದ ಪ್ರವಾಸಗಳ ಯೋಚನೆಯೇ ಹಳ್ಳ ಹಿಡಿದಿದೆ. ವಿದೇಶ ಸುತ್ತುವ ಕನಸು ದುಸ್ವಪ್ನವಾಗಿ ಬದಲಾಗಿದೆ. ಆದರೆ, ಸಂದರ್ಭ ಭಯಾನಕವಾಗಿದೆ ಎಂದ ಮಾತ್ರಕ್ಕೆ ನಾವು ಟ್ರಾವೆಲ್ ಮಾಡುವುದೇ ಸಾಧ್ಯವಿಲ್ಲ ಎಂದಲ್ಲ. ನಾವೇನು ಹೇಳುತ್ತಿದ್ದೇವೆ ಎಂದರೆ, ನೀವು ಈಗಲೇ ಪ್ರವಾಸ ಹೊರಡಿ ಎಂದಲ್ಲ. ಆದರೆ, ಮೇ, ಜೂನ್ ಸಮಯದ ಪ್ರವಾಸಕ್ಕೆ ಈಗಲೇ ಬುಕ್ ಮಾಡಿಕೊಳ್ಳಬಹುದಲ್ಲ... 

Tap to resize

Latest Videos

ಪ್ಲ್ಯಾಸ್ಟಿಕ್‌ಗೆ ಬದಲಿ ಪರಿಸರ ಸ್ನೇಹಿ ಬಿದಿರಿನ ಬಾಟಲ್ ತಂದ ಸಿಕ್ಕಿಂ...

ಟಿಕೆಟ್ ದರ ಕಡಿಮೆ
ಹೌದು, ಮುಂಚಿತವಾಗಿಯೇ ಪ್ರವಾಸಕ್ಕೆ ಟಿಕೆಟ್‌ಗಳನ್ನು ಖರೀದಿಸಿದರೆ, ಟಿಕೆಟ್ ಫೇರ್ ಕಡಿಮೆ ಎಂಬುದು ಗೊತ್ತಷ್ಟೇ. ಅದರಲ್ಲೂ ಕೊರೋನಾ ಕಾರಣದಿಂದ ಮತ್ತಷ್ಟು ಕಡಿಮೆಯಾಗಿವೆ ವಿಮಾನದ ಟಿಕೆಟ್‌ಗಳು. ಅಲ್ಲದೆ, ಎಲ್ಲ ಪ್ರವಾಸಿ ಸ್ಥಳಗಳು ಪ್ರವಾಸಿಗರಿಲ್ಲದೆ ಕಂಗಾಲಾಗಿದ್ದು, ಹೋಟೆಲ್‌ಗಳು ಕೂಡಾ ಕಡಿಮೆ ದರದಲ್ಲಿ ರೂಮ್ ಬುಕಿಂಗ್ ಆಫರ್ ನೀಡುತ್ತಿವೆ. ಈ ಸಂದರ್ಭದಲ್ಲಿ ಪ್ರವಾಸಕ್ಕೆ ಬುಕ್ ಮಾಡಿಕೊಳ್ಳುವುದರಿಂದ ಖರ್ಚು ಶೇ.20ರಿಂದ 30ರಷ್ಟಾದರೂ ಕಡಿಮೆಯಾಗುತ್ತದೆ. ಅಲ್ಲಾ ಸ್ವಾಮಿ, ದುಡ್ಡು ಕಡಿಮೆಯಾಗುತ್ತದೆ ಎಂದು ಕಾಯಿಲೆ ಹೊತ್ತು ಬರುವುದಾ ಎಂದು ಪ್ರಶ್ನಿಸಬೇಡಿ. ಅದಕ್ಕೂ ಉತ್ತರವಿದೆ. 

ವೈರಸ್‌ಗೂ ಬಿಸಿಲಿಗೂ ಆಗಿಬರಲ್ಲ
ಯಾವುದೇ ವೈರಸ್ ಇರಲಿ, ಸಾಮಾನ್ಯವಾಗಿ 27 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚು ಉಷ್ಣತೆಯಲ್ಲಿ ಅದು ಬದುಕಲಾರದು. ಫ್ಲೂ, ಕಾಮನ್ ಕೋಲ್ಡ್ ಯಾವುದರದೇ ವೈರಸ್ ಇರಲಿ, ಅದು ಮಳೆ, ಚಲಿಗಾಲದಲ್ಲಿ ಹೆಚ್ಚಾಗಲು ಇದೇ ಕಾರಣ. ಅಂತೆಯೇ ಕೊರೋನಾ ಕೂಡಾ ವೈರಸ್ ಆಗಿರುವುದರಿಂದ ಅತಿಯಾದ ಬಿಸಿಲು ತಡೆಯಲಾರದು. ಅಂದರೆ, ಈ ಬೇಸಿಗೆಯಲ್ಲಿ ಕೊರೋನಾ ಕಾಣೆಯಾಗಲೇಬೇಕು. ಅಲ್ಲದೆ, ಕೊರೋನಾ ಓಡಿಸಲು ಜಗತ್ತೇ ಸರ್ವಪ್ರಯತ್ನಗಳನ್ನೂ ಮಾಡುತ್ತಿದೆ. ಈ ಹಿಂದೆ ಬಂದ ಯಾವ ಹೊಸ ಕಾಯಿಲೆಗಳೂ ಹೆಚ್ಚು ಕಾಲ ಉಳಿಯಲು ವಿಜ್ಞಾನ ಬಿಟ್ಟಿಲ್ಲ. ಕೊರೋನಾಗೋ ಔಷಧ ಪತ್ತೆಯಾಗುತ್ತದೆ. ಇಷ್ಟೆಲ್ಲ ಭರವಸೆಗಳ ಜೊತೆಗೆ ಯಾವುದಕ್ಕೂ ಇರಲಿ ಎಂದು ಬಿಸಿಲು ಹೆಚ್ಚಿರುವ ಪ್ರದೇಶಗಳನ್ನೇ ಪ್ರವಾಸಕ್ಕಾಗಿ ಆಯ್ದುಕೊಂಡರೆ ಯಾವ ತಲೆಬಿಸಿಯೂ ಇರದು. 

ಕೊರೋನಾ ಭೀತಿ; ಶಬರಿಮಲೆ ಭೇಟಿ ಮುಂದೂಡುವಂತೆ ಭಕ್ತರಲ್ಲಿ ಮನವಿ!...
 

ಯಾವ ಸ್ಥಳಗಳು ಬೆಸ್ಟ್?
ಪಾಕೆಟ್‌ಗೂ ಭಾರವಾಗದೆ, ಮೇ ತಿಂಗಳಲ್ಲಿ ಬಿಸಿಲನ್ನೂ 24ರಿಂದ 32 ಡಿಗ್ರಿ ಸೆಲ್ಶಿಯಸ್‌ನಷ್ಟು ಹೊಂದಿರುವ ಪ್ರವಾಸಿ ಸ್ಥಳಗಳೆಂದರೆ ಬಹಾಮಾಸ್, ಈಜಿಪ್ಟ್‌ನ ಕೈರೋ, ಪ್ರೇಗ್ ಹಾಗೂ ಗ್ರೀಸ್. ಈ ವರ್ಷದ ಮೇನಲ್ಲಿ ಈಜಿಪ್ಟ್‌ನ ಕೈರೋಗೆ ಹೋಗುವಿರಾದರೆ, ಆರು ದಿನಗಳ ರೌಂಡ್ ಟ್ರಿಪ್ ಟಿಕೆಟ್‌ಗೆ ಸುಮಾರು 29,000 ರುಪಾಯಿಗಳಾಗಬಹುದು. ಸಾಮಾನ್ಯವಾಗಿ ಇದು, ಕಡಿಮೆ ಟಿಕೆಟ್ ದರ ಹೊಂದಿರುವ ವಿಮಾನಗಳಲ್ಲಿ ಕೂಡಾ 32,000ದಿಂದ 41,500 ರುಪಾಯಿಗಳವರೆಗೆ ಇರುತ್ತದೆ. 


ಇನ್ನು ಬಹಾಮಾಸ್‌ಗೆ ಹೊರಡುವಿರಾದರೆ 75,000ಕ್ಕೆಲ್ಲ ಟುವೇ ಟಿಕೆಟ್ ಲಭ್ಯ. ಮುಂಚೆ ಇದು 85,000ದಿಂದ 1,15,000ದವರೆಗೂ ಇತ್ತು. ಅಂತೆಯೇ ಪ್ರೇಗ್ ಹಾಗೂ ಗ್ರೀಸ್‌ನ ಅತೆನ್ಸ್‌ಗೆ ಕೂಡಾ 20ರಿಂದ 30 ಸಾವಿರ ಟಿಕೆಟ್ ದರದಲ್ಲಿ ಉಳಿತಾಯ ಮಾಡಬಹುದು. ಅಲ್ಲದೆ, ಈ ಸ್ಥಳಗಳ ಹೋಟೆಲ್ ದರಗಳೂ ತಗ್ಗಿದ್ದು, ಮೇನಲ್ಲಿ ಐದು ದಿನಗಳ ಕಾಲ ಕೈರೋದ ಹೋಟೆಲ್‌ನಲ್ಲಿ ಉಳಿಯಲು ನಿಮಗೆ 25,000 ರುಪಾಯಿಗಳಾಗಬಹುದು. ಬಹಾಮಾದಲ್ಲಿ 20,000, ಪ್ರೇಗ್‌ ಹಾಗೂ ಗ್ರೀಸ್ನಲ್ಲಿ 10ರಿಂದ 15,000 ರುಪಾಯಿಗಳಾಗಬಹುದು. ಮತ್ತಿನ್ನೇಕೆ ತಡ? ಈಗಲೇ ಪ್ರವಾಸ ಬುಕ್ ಮಾಡಿ, ಕರೋನಾ ಕುರಿತ ಚಿಂತೆ ಬಿಟ್ಟು ಪ್ರವಾಸದ ಕನಸು ಕಾಣಲಾರಂಭಿಸಿ. 
 

click me!