
ಪ್ರವಾಸದ ಗೀಳಿದ್ದವರಿಗೆ ಕೆಲ ತಿಂಗಳುಗಳಿಂದ ಕಟ್ಟಿ ಹಾಕಿದಂತಾಗಿದೆ. ಲಾಕ್‌ಡೌನ್ ಎಂಬುದು ಜೈಲಿನಂತೆನಿಸುತ್ತಿದೆ. ಎಲ್ಲವೂ ಸರಿಯಿದ್ದಿದ್ದರೆ ಇಷ್ಟೊತ್ತಿಗೆ ಊಟಿಯಲ್ಲಿ ಬೋಟಿನಲ್ಲಿ ಕುಳಿತಿರುತ್ತಿದ್ದೆ, ಹಿಮಾಲಯದಲ್ಲಿ ಟ್ರೆಕ್ಕಿಂಗ್ ಮಾಡುತ್ತಿದ್ದೆ, ಚಿಕ್ಕಮಗಳೂರಿನಲ್ಲಿ ಕಾಫಿ ಹೀರುತ್ತಾ ಮುಳ್ಳಯ್ಯನಗಿರಿ ಹೋಗಲು ಯೋಜಿಸುತ್ತಿದ್ದೆ, ವಿದೇಶದ ಬೀಚ್‌ಗಲ್ಲಿ ಸನ್‌ಸೆಟ್ ನೋಡುತ್ತಿದ್ದೆ, ಈಶಾನ್ಯ ರಾಜ್ಯಗಳಲ್ಲಿ ಹೊಸರುಚಿ ಸವಿಯುತ್ತಿದ್ದೆ ಎಂದೆಲ್ಲ ಯೋಚನೆಗಳು ಬಂದು ಆಗಾಗ ಕೈಕೈ ಹಿಸುಕುವಂತಾಗಬಹುದು. ಹಾಗಂಥ ಪ್ರವಾಸದ ಎಲ್ಲ ಅನುಭವಗಳಿಂದಲೂ ವಂಚಿತರಾಗಿ ತಲೆ ಮೇಲೆ ಕೈಹೊತ್ತು ಕೂರಬೇಕಿಲ್ಲ. ಮನಸ್ಸಿದ್ದಲ್ಲಿ ಮಾರ್ಗವಿದೆ. ಮನೆಯಲ್ಲಿದ್ದೇ ಪ್ರವಾಸಕ್ಕೆ ಸಂಬಂಧಿಸಿದ ಕೆಲವೊಂದು ವಿಷಯಗಳನ್ನು ಸವಿದು ರಿಫ್ರೆಶ್ ಆಗಬಹುದು. ಅಂಥ ಟಿಪ್ಸ್‌ಗಳು ಇಲ್ಲಿವೆ.
ಡಿಜಿಟಲ್‌ನ್ನು ಫಿಸಿಕಲ್ ಆಗಿಸಿ
ನೀವು ಇದುವರೆಗೂ ಸುತ್ತಾಡಿದಾಗ ತೆಗೆದ ಸಾವಿರಾರು ಫೋಟೋಗಳು ಹಾರ್ಡ್ ಡಿಸ್ಕ್‌ನಲ್ಲಿರಬಹುದು. ಅವುಗಳ ಮೇಲೆ ಕಣ್ಣಾಡಿಸುತ್ತಾ ಚೆಂದದ ಫೋಟೋಗಳನ್ನು ತೆಗೆದು ಎಡಿಟಿಂಗ್ ಆ್ಯಪ್ಸ್ ಮೂಲಕ ಮತ್ತಷ್ಟು ಚೆಂದವಾಗಿಸಿ. ಬಳಿಕ ಪ್ರಿಂಟರ್ ಸಹಾಯದಿಂದ ಅವುಗಳ ಕಾಪಿ ತೆಗೆದು ನಿಮ್ಮ ಮನೆಯ ಗೋಡೆಗಳನ್ನು ಅಲಂಕರಿಸಿ. ಅದನ್ನು ಹೈಲೈಟ್ ಮಾಡಲು ಫೇರಿ ಲೈಟ್‌ಗಳನ್ನು ಬಳಸಬಹುದು. ಇಲ್ಲವೇ ಮುಖ್ಯವಾದ ಕೆಲ ಫೋಟೋಗಳ ಆಲ್ಬಂ ಮಾಡಿಸಿ. ಅವು ಪ್ರತಿ ಬಾರಿ ನೋಡಿದಾಗಲೂ ನಿಮ್ಮಲ್ಲಿ ನಾಸ್ಟಾಲ್ಜಿಯಾಕ್ಕೆ ಕಾರಣವಾಗುತ್ತವೆ.
ಟ್ರಾವೆಲ್ ಹವ್ಯಾಸವನ್ನು ಅಭ್ಯಸಿಸಿ
ಟ್ರಾವೆಲ್‌ನಲ್ಲಿ ನೀವು ಹೊಸ ಅಡುಗೆ ಕಲಿತಿರಬಹುದು, ಫಾರಿನ್ ಫುಡ್‌ಗಳನ್ನು ಸವಿದಾಗ ಮನೆಗೆ ಹೋದ ಮೇಲೆ ಮಾಡಿನೋಡಬೇಕೆಂದುಕೊಂಡಿರಬಹುದು, ಬಾದಾಮಿಯ ಶಿಲೆಗಳನ್ನು ನೋಡಿದಾಗ ಈ ಕುರಿತ ವಿಷಯಗಳನ್ನು ಮನೆಗೆ ಹೋದಾಗ ಓದಬೇಕೆಂದುಕೊಂಡಿರಬಹುದು, ಪ್ರವಾಸ ಹೋದಾಗ ನೋಡಿದ ಸ್ಥಳಗಳ ಕುರಿತು, ಕಲೆಯ ಬಗ್ಗೆ ಹೆಚ್ಚಿನ ವಿಷಯವನ್ನು ಮನೆಗೆ ಹೋದ ಮೇಲೆ ಸರ್ಚ್ ಮಾಡಿ ತಿಳಿಯಬೇಕು ಎಂದು ಆಗೆನಿಸಿರಬಹುದು. ಇವೆಲ್ಲವೂ ಮನೆಗೆ ಬಂದ ಮೇಲೆ ಮರೆತಿರಬಹುದು. ಈಗ ಅವೆಲ್ಲವನ್ನೂ ಮಾಡಲು, ತಿಳಿಯಲು ಸರಿಯಾದ ಸಮಯವಿದೆ. ಅವೇನೇನೆಂದು ನೆನೆಸಿಕೊಂಡು ಒಂದೊಂದಾಗಿ ಮಾಡುತ್ತಾ ಬನ್ನಿ.
ಮೂವಿ ಹಾಗೂ ಬುಕ್ಸ್
ಮೂವಿಗಳು ಹಾಗೂ ಬುಕ್ಸ್ ವರ್ಚುಯಲ್ ಇಲ್ಲವೇ ಕಲ್ಪನೆಯಲ್ಲಿ ಟ್ರಾವೆಲ್ ಅನುಭವವನ್ನು ನೀಡಬಲ್ಲವು. ಹಾಗಾಗಿ, ಟ್ರಾವೆಲ್ ಸಂಬಂಧಿ ಮೂವಿಗಳನ್ನು ಹುಡುಕಿ ನೋಡಿ. ಹಲವರ ಪ್ರವಾಸಿ ಅನುಭವಗಳನ್ನು ಓದಿ ತಿಳಿಯಿರಿ. ಹೊಸ ಹೊಸ ಸಂಸ್ಕೃತಿಗಳ ಬಗ್ಗೆ, ಅವರ ಸಂಪ್ರದಾಯಗಳು, ಆಹಾರ ವೈವಿಧ್ಯಗಳ ಕುರಿತು ಅಂತರ್ಜಾಲದಲ್ಲಿ ತಡಕಾಡುತ್ತಾ ತಿಳಿದುಕೊಳ್ಳುವುದು, ಟ್ರಾವೆಲ್ ಬ್ಲಾಗ್ಸ್ ಓದುವುದೂ ಚೆನ್ನಾಗಿರುತ್ತದೆ.
ಗೆಳೆಯರೊಂದಿಗೆ ಮಾತನಾಡಿ
ನಿಮ್ಮ ಪ್ರವಾಸಕ್ಕೆ ಜೊತೆಯಾದವರೊಂದಿಗೆ ಹೋದ ಪ್ರವಾಸದ ಅನುಭವಗಳನ್ನು ಮತ್ತೊಮ್ಮೆ ಮೆಲುಕು ಹಾಕಿ. ಮುಂದಿನ ದಿನಗಳಲ್ಲಿ ಎಲ್ಲಿ ಹೋಗಬೇಕೆಂಬ ಕುರಿತ ಮಾತುಗಳನ್ನಾಡಿ.
ಭವಿಷ್ಯಕ್ಕೆ ಯೋಜಿಸಿ
ಈಗ ಟ್ರಾವೆಲ್ ಮಾಡಲು ಸಾಧ್ಯವಿಲ್ಲ ನಿಜ. ಆದರೆ, ಮುಂದಿನ ಪ್ರವಾಸಗಳ ಬಗ್ಗೆ ಕನಸು ಕಟ್ಟಲು, ಎಲ್ಲೆಲ್ಲಿ ಹೋಗಬೇಕು, ಏನು ಮಾಡಬೇಕು, ಅದಕ್ಕೆ ಬಜೆಟ್ ಎಷ್ಟು ಬೇಕು ಎಂದೆಲ್ಲ ಬರೆದಿಟ್ಟು ಖುಷಿ ಪಡಲು ಖಂಡಿತಾ ಸಾಧ್ಯ. ಹೀಗೆ ಪ್ರವಾಸದ ಬಗ್ಗೆ ಕನಸು ಕಾಣುವುದು ಕೂಡಾ ಬಹಳಷ್ಟು ಖುಷಿ ನೀಡುತ್ತದೆ.
ಅನುಭವ ಹಂಚಿ
ನೀವು ಬಹಳಷ್ಟು ಕಡೆ ಪ್ರವಾಸ ಮಾಡಿರಬಹುದು. ಆ ಅನುಭವಗಳನ್ನೆಲ್ಲ ಒಂದು ಬ್ಲಾಗ್ ತೆರೆದು ಅದಕ್ಕೆ ಬರೆಯುತ್ತಾ ಬನ್ನಿ. ಇದಕ್ಕೆ ಫೋಟೋಗಳನ್ನೂ ಲಗತ್ತಿಸಿ. ಹೀಗೆ ಬರೆಯುವ ಮೂಲಕ ನಿಮ್ಮ ಟ್ರಾವೆಲ್ಲನ್ನು ಮತ್ತೊಮ್ಮೆ ಅನುಭವಿಸಲು ಸಾಧ್ಯವಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.